ಕರ್ನಾಟಕ

ಅತೃಪ್ತ ಶಾಸಕರಲ್ಲಿ ಹೆಚ್ಚಿದ ಅನರ್ಹತೆ ಭೀತಿ: ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಬಿಜೆಪಿ ಪ್ಲಾನ್ !

Pinterest LinkedIn Tumblr

ಬೆಂಗಳೂರು: ಮೂರು ಜನ ಬಂಡಾಯ ಕಾಂಗ್ರೆಸ್ ಶಾಸಕರನ್ನು ಅನರ್ಹಗೊಳಿಸಿದ ಕರ್ನಾಟಕ ವಿಧಾನಸಭಾ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಅವರನ್ನು ವಜಾಗೊಳಿಸುವಂತೆ ಆಗ್ರಹಿಸಿ BJP ವಿಧಾನಸಭೆಯಲ್ಲಿ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವ ಸಾಧ್ಯತೆಗಳಿದೆ.

ಕಾಂಗ್ರೆಸ್-ಜೆಡಿಎಸ್ ಸರ್ಕಾರವನ್ನು ಪತನಗೊಳಿಸಿ ಬಿಜೆಪಿಯ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.ಈ ವೇಳೆ ಸ್ಪೀಕರ್ ನಿರ್ಧಾರ ಉಳಿದ 14 ಮಂದಿ ಅತೃಪ್ತ ಶಾಸಕರಿಗೆ ಭೀತಿಯನ್ನುಂಟು ಮಾಡಿದೆ ಎಂದು ಈ ವಿಷಯದ ಮೂಲ ತಿಳಿದಿರುವ ಇಬ್ಬರು ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದವರಾದ ಸ್ಪೀಕರ್ ಅವರನ್ನು ಹುದ್ದೆಯಿಂದ ವಜಾಗೊಳಿಸಲು ನಿರ್ಣಯವನ್ನು ತೆಗೆದುಕೊಳ್ಳಲು ಮುಂದಾಗಿರುವ ಕೇಸರಿ ಪಕ್ಷ ಈ ಸಂಬಂಧ ನೋಟೀಸ್ ಜಾರಿಗೆ ತೀರ್ಮಾನಿಸಿದೆ. ಮತ್ತಷ್ಟು ಅತೃಪ್ತ ಶಾಸಕರನ್ನು ಅನರ್ಹಗೊಳಿಸುವ ಸ್ಪೀಕರ್ ತೀರ್ಮಾನಕ್ಕೆ ಮುನ್ನವೇ ಅವರನ್ನು ಸ್ಪೀಕರ್ ಸ್ಥಾನದಿಂದ ವಜಾ ಮಾಡಲು ಪಕ್ಷ ಯೋಜಿಸಿದೆ ಎಂದು ಹೇಳಲಾಗಿದೆ. ಇನ್ನು ಅತೃಪ್ತ ಶಾಸಕರಲ್ಲಿ ಕೆಲವರು ಯಡಿಯೂರಪ್ಪ ಅವರ ಹೊಸ ಸರ್ಕಾರದಲ್ಲಿ ಮಂತ್ರಿಗಳಾಗುವ ನಿರೀಕ್ಷೆಗಳಿದೆ.

ಬಿಜೆಪಿ ಸರ್ಕಾರ ರಚನೆ ವಿಳಂಬವಾದ ನಡುವೆಯೇ ಸ್ಪೀಕರ್ ರಮೇಶ್ ಕುಮಾರ್ ಮೂವರು ಶಾಸಕರನ್ನು ಅನರ್ಹಗೊಳಿಸಿ ಗುರುವಾರ ಹೊರಡಿಸಿದ್ದ ಆದೇಶ ಅತೃಪ್ತ ಶಾಸಕ ವಲಯದಲ್ಲಿ ಭೀತಿ ಹುಟ್ಟಿಸಿದೆ ಎಂದು ಹೆಸರು ಹೇಳಲಿಚ್ಚಿಸದ ಒಬ್ಬ ನಾಯಕರು ಹೇಳಿದ್ದಾರೆ. ಸ್ಪೀಕರ್ ಅವರನ್ನು ಕೆಳಗಿಳಿಸಲು ನಿರ್ಣಯ ಮಂಡನೆ ಅತಿ ಶೀಘ್ರವಾಗಿ ಆಗಲಿದೆ ಎಂದು ಅವರು ಹೇಳಿದ್ದಾರೆ.

ಮುಂದಿನ ಒಂದೆರಡು ದಿನಗಳಲ್ಲಿ 14 ಇತರ ಶಾಸಕರಿಗೆ ಸಂಬಂಧಿಸಿದಂತೆ ರಾಜೀನಾಮೆ ಮತ್ತು ಅನರ್ಹತೆ ಮನವಿ ಬಗೆಗೆ ತೀರ್ಮಾನಿಸುವುದಾಗಿ ಸ್ಪೀಕರ್ ಗುರುವಾರ ಹೇಳಿದ್ದರು.

ಸಂವಿಧಾನದ 179 (ಸಿ) ವಿಧಿಯನ್ವಯ ವಿಧಾನಸಭೆಯ ಸ್ಪೀಕರ್ ಅವರನ್ನು ಬಹುಮತದಿಂದ ಅಂಗೀಕರಿಸಿದ ನಿರ್ಣಯದ ಮೂಲಕ ಅವರ ಹುದ್ದೆಯಿಂದ ವಜಾಗೊಳಿಸಬಹುದು.ಹಾಲಿ ಸ್ಪೀಕರ್ ವಿರುದ್ಧ ಅಂತಹ ನಿರ್ಣಯವನ್ನು ಮಂಡಿಸಲು ಮುನ್ನವೇ ಹದಿನಾಲ್ಕು ದಿನಗಳ ಅವಧಿಗೆ ನೋಟೀಸ್ ನೀಡುವ ಅಗತ್ಯವಿದೆ. ಆದರೆ ಅಂತಹ ನಿರ್ಣಯವು ಸ್ಪೀಕರ್‌ನ ಶಕ್ತಿಯನ್ನು ಮಿತಿಗೊಳಿಸುತ್ತದೆ. ಪರಿಣಾಮಕಾರಿಯಾಗಿ, ಒಮ್ಮೆ ಅಂತಹ ನಿರ್ಣಯ ಮಂಡಿಸಿದ ನಂತರ ಸ್ಪೀಕರ್ ಯಾರನ್ನೂ ಅನರ್ಹಗೊಳಿಸಲು ಆಗುವುದಿಲ್ಲ.

Comments are closed.