ಕರ್ನಾಟಕ

ರಾಮಲಿಂಗಾ ರೆಡ್ಡಿ, ಖಾದರ್, ಮುನಿಯಪ್ಪ ಅವರಿಂದ ಸಿದ್ದರಾಮಯ್ಯ ಭೇಟಿ; ಅತೃಪ್ತರ ಸೆಳೆಯಲು ತಂತ್ರ?

Pinterest LinkedIn Tumblr


ಬೆಂಗಳೂರು(ಜುಲೈ 26): ಸಿಎಂ ಆಗಿ ಬಿಎಸ್​ವೈ ಪದಗ್ರಹಣ ಫಿಕ್ಸ್ ಆಗಿರುವ ಹೊತ್ತಲ್ಲೇ ಕಾಂಗ್ರೆಸ್​ನ ಹಿರಿಯ ಮುಖಂಡ ರಾಮಲಿಂಗಾ ರೆಡ್ಡಿ ಇವತ್ತು ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ಧಾರೆ. ಕೆಲ ಅತೃಪ್ತರೊಂದಿಗೆ ನಿರಂತರ ಸಂಪರ್ಕದಲ್ಲಿರುವ ರಾಮಲಿಂಗಾ ರೆಡ್ಡಿ ಅವರ ಈ ನಡೆ ಸಾಕಷ್ಟು ಕುತೂಹಲ ಮೂಡಿಸಿದೆ. ಸರ್ಕಾರ ರಚಿಸಲಿರುವ ಯಡಿಯೂರಪ್ಪ ಅವರು ಬಹುಮತ ಸಾಬೀತಿಗೆ ಅತೃಪ್ತ ಶಾಸಕರ ಬೆಂಬಲ ಅಗತ್ಯವಿರುವ ಹಿನ್ನೆಲೆಯಲ್ಲಿ ರಾಮಲಿಂಗಾ ರೆಡ್ಡಿ ಅವರು ಬಿಜೆಪಿ ಪಾಲಿಗೆ ಕಂಟಕವಾಗಲಿದ್ದಾರಾ ಎಂಬ ಪ್ರಶ್ನೆ ಇದೆ.

ಅತೃಪ್ತ ಶಾಸಕರ ಗುಂಪಿನೊಂದಿಗೇ ಶಾಸಕ ಸ್ಥಾನಕ್ಕೆ ರಾಮಲಿಂಗಾ ರೆಡ್ಡಿ ಕೂಡ ರಾಜೀನಾಮೆ ನೀಡಿದ್ದರು. ಎಸ್.ಟಿ. ಸೋಮಶೇಖರ್, ಭೈರತಿ ಬಸವರಾಜು, ಮುನಿರತ್ನ ಮತ್ತು ರಾಮಲಿಂಗಾ ರೆಡ್ಡಿ ಅವರು ಒಗ್ಗೂಡಿಯೇ ರಾಜೀನಾಮೆ ನಿರ್ಧಾರ ಮಾಡಿದ್ದರು. ಆದರೆ, ಹಿರಿಯ ಕಾಂಗ್ರೆಸ್ ಮುಖಂಡರ ಸಂಧಾನದ ಬಳಿಕ ರಾಮಲಿಂಗಾ ಅವರು ತಮ್ಮ ರಾಜೀನಾಮೆ ವಾಪಸ್ ಪಡೆದಿದ್ದರು. ಅತ್ತ, ಮೂವರು ಶಾಸಕರು ತಮ್ಮ ರಾಜೀನಾಮೆ ನಿರ್ಧಾರಕ್ಕೆ ಬದ್ಧರಾಗಿ ಮುಂಬೈನಲ್ಲೇ ವಾಸ್ತವ್ಯ ಮುಂದುವರಿಸಿದ್ದರು. ಆದರೆ, ರಾಮಲಿಂಗಾ ರೆಡ್ಡಿ ಅವರು ಸ್ವಲ್ಪ ಗಟ್ಟಿ ಪ್ರಯತ್ನ ಮಾಡಿದರೆ ಈ ಮೂವರು ಶಾಸಕರನ್ನು ರಾಜೀನಾಮೆ ವಾಪಸ್ ಮಾಡುವಂತೆ ಒಲಿಸಬಹುದು ಎಂಬುದು ಕಾಂಗ್ರೆಸ್ ನಾಯಕರ ಆಶಯ.

ನಿನ್ನೆ ಸ್ಪೀಕರ್ ರಮೇಶ್ ಕುಮಾರ್ ಅವರು ಮೂವರು ಶಾಸಕರನ್ನು ಅನರ್ಹಗೊಳಿಸಿರುವುದು 14 ಶಾಸಕರಿಗೆ ಎಚ್ಚರಿಕೆ ಕರೆಗಂಟೆಯಾಗಿದೆ. ಈ ಹಿನ್ನೆಲೆ ಅವರನ್ನು ಕಾಂಗ್ರೆಸ್​ನಲ್ಲೇ ಉಳಿಸುವುದು ಸುಲಭ ಎಂಬ ಲೆಕ್ಕಾಚಾರವೂ ಕಾಂಗ್ರೆಸ್ ಪಾಳಯದಲ್ಲಿದೆ.

ಸಿದ್ದರಾಮಯ್ಯನವರ ಕಾವೇರಿ ನಿವಾಸದಲ್ಲಿ ರಾಮಲಿಂಗಾ ರೆಡ್ಡಿ ಅವರ ಜೊತೆ ಶಿವರಾಜ್ ತಂಗಡಗಿ, ಯುಟಿ ಖಾದರ್, ವಿ. ಮುನಿಯಪ್ಪ ಅವರೂ ಇದ್ದಾರೆ. ಸಾಕಷ್ಟು ಹೊತ್ತು ಈ ನಾಯಕರು ಚರ್ಚೆ ನಡೆಸಿದ್ದಾರೆ. ರಾಮಲಿಂಗಾ ರೆಡ್ಡಿ ಆಪ್ತರು ಮನಸು ಬದಲಾಯಿಸಿದರೆ ಡಾ| ಕೆ. ಸುಧಾಕರ್ ಮತ್ತು ಎಂಟಿಬಿ ನಾಗರಾಜ್ ಅವರನ್ನೂ ಒಪ್ಪಿಸಬಹುದು ಎಂದೂ ನಿಷ್ಕರ್ಷೆಗಳಾಗುತ್ತಿವೆ.

Comments are closed.