ಕರ್ನಾಟಕ

ಏಕಾಂಗಿಯಾಗಿ ಬಿಜೆಪಿ ಕಟ್ಟಿ ಬೆಳೆಸಿದ ಯಡಿಯೂರಪ್ಪ!

Pinterest LinkedIn Tumblr


ಬೆಂಗಳೂರು: ಬೂಕನಕೆರೆ ಸಿದ್ದವೀರಪ್ಪ ಯಡಿಯೂರಪ್ಪ ಅಥವಾ ಬಿಎಸ್​ ಯಡಿಯೂರಪ್ಪ ಇಲ್ಲವೇ ಇನ್ನೂ ಸರಳವಾಗಿ ಹೇಳಬೇಕೆಂದರೆ ಬಿಎಸ್​ವೈ ಕರ್ನಾಟಕ ರಾಜಕೀಯ ಕಂಡ ಅದ್ಬುತ ರಾಜಕಾರಣಿ. ಕಳೆದ 36 ವರ್ಷಗಳಿಂದ ರಾಜಕಾರಣದಲ್ಲಿ ಸಕ್ರಿಯರಾಗಿರುವವರು. ನೀವು ಅವರನ್ನು ಇಷ್ಟಪಡಿ ಅಥವಾ ಇಷ್ಟಪಡದೆಯೂ ಇರಿ. ಆದರೆ, ಅವರ ಪ್ರಾಮುಖ್ಯತೆ ಮತ್ತು ವರ್ಚಸ್ಸನ್ನು ಕಡೆಗಣಿಸಲು ಯಾರೊಬ್ಬರಿಗೂ ಸಾಧ್ಯವಿಲ್ಲ. ಬದ್ಧ ಶತ್ರುಗಳು ಕೂಡ ಅವರ ಪಟ್ಟು ಮತ್ತು ತಾಳ್ಮೆಯನ್ನು ಇಷ್ಟಪಡುತ್ತಾರೆ. ಉತ್ಸಾಹ ಸತ್ತುಹೋಗಿದೆ ಎಂದಿಗೂ ಹೇಳಬೇಡಿ ಎಂಬುದಕ್ಕೆ ಅವರ ಸ್ನೇಹಿತರು ಮತ್ತು ಅಭಿಮಾನಿಗಳು ಅವರನ್ನು ಮೆಚ್ಚುತ್ತಾರೆ. ಎಚ್​.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ಉರುಳಿಸಲು ಸತತ ಆರು ಬಾರಿ ಪ್ರಯತ್ನಿಸಿ, ಅದರಲ್ಲಿ ವಿಫಲವಾದ ಬಳಿಕ ಏಳನೇ ಪ್ರಯತ್ನದಲ್ಲಿ 18 ದಿನಗಳ ಹಗಲು-ರಾತ್ರಿಯ ಹೈಡ್ರಾಮಾದ ಬಳಿಕ ಯಶಸ್ವಿಯಾಗಿದ್ದಾರೆ.

2018ರ ವಿಧಾನಸಭೆ ಚುನಾವಣೆಯಲ್ಲಿ ಯಡಿಯೂರಪ್ಪ ಪಕ್ಷವನ್ನು ಮುನ್ನಡೆಸಿದ್ದರು. ಆದರೆ, ಅವರ ಪಕ್ಷ 104 ಸ್ಥಾನಗಳನ್ನಷ್ಟೇ ಗೆಲ್ಲಲು ಶಕ್ತವಾಯಿತು. 113 ಸಂಖ್ಯೆ ಬಹುಮತ ಸಾಬೀತು ಮಾಡಲಾಗದೆ ಮೂರನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಯಡಿಯೂರಪ್ಪ 56 ಗಂಟೆಯಲ್ಲಿ ಸಿಎಂ ಸ್ಥಾನದಿಂದ ನಿರ್ಗಮಿಸಿದರು. ಕರ್ನಾಟಕ ರಾಜಕೀಯದಲ್ಲಿ ಯಡಿಯೂರಪ್ಪ ಅವರ ಶಕೆ ಅಂತ್ಯಗೊಂಡಿತು ಎಂದೇ ಹಲವರು ಬರೆದಿದ್ದರು.

ಆದರೆ, ಯಡಿಯೂರಪ್ಪ ತಮ್ಮ ಮೇಲಿನ ವಿಶ್ವಾಸ, ಭರವಸೆಯನ್ನು ಕಳೆದುಕೊಳ್ಳಲಿಲ್ಲ. ಮತ್ತೆ ಹೋರಾಟಕ್ಕೆ ಮರಳಲು ನಿರ್ಧರಿಸಿದ್ದರು. ಕಳೆದ 12 ವರ್ಷಗಳಲ್ಲಿ ಬಿಎಸ್​ವೈ ಇಂದು ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಜೆಡಿಎಸ್​ ಬೆಂಬಲದೊಂದಿಗೆ ಬಿಎಸ್​ವೈ ಮೊದಲ ಬಾರಿಗೆ 2007ರಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಆದರೆ, ಕೇವಲ ಏಳು ದಿನದಲ್ಲಿ ಈ ಮೈತ್ರಿ ಮುರಿದುಬಿತ್ತು. ಗೌಡ ಕುಟುಂಬ ವಚನ ಭ್ರಷ್ಟತೆ 2008ರ ವಿಧಾನಸಭೆ ಚುನಾವಣೆಯಲ್ಲಿ ಬಿಎಸ್​ವೈಗೆ ಪರವಾಗಿ ಪರಿಣಮಿಸಿತು. ಆ ಚುನಾವಣೆಯಲ್ಲಿ ಬಿಎಸ್​ವೈ ನೇತೃತ್ವದಲ್ಲಿ ಬಿಜೆಪಿ 110 ಸ್ಥಾನಗಳಲ್ಲಿ ಜಯಭೇರಿ ಬಾರಿಸಿತ್ತು. ಆದರೆ, ಬಹುಮತಕ್ಕೆ ಇನ್ನು ಮೂರು ಸ್ಥಾನಗಳ ಕೊರತೆ ಇತ್ತು. ಪಕ್ಷೇತರರ ಸಹಕಾರದಿಂದ ರಚಿಸಿದ ಈ ಅತಂತ್ರ ಸರ್ಕಾರವೂ 38 ತಿಂಗಳಲ್ಲಿ ಕೊನೆಗೊಂಡಿತು. ಆನಂತರ ಭ್ರಷ್ಟಾಚಾರ ಪ್ರಕರಣ ಸಂಬಂಧ ಯಡಿಯೂರಪ್ಪ ಜೈಲು ಪಾಲಾದರು. ಇನ್ನು ಮೂರನೇ ಬಾರಿ ಬಿಎಸ್​ವೈ ಅತಿ ಕಡಿಮೆ ಅವಧಿಗೆ ಸಿಎಂ ಆಗಿದ್ದರು. ಕೇವಲ 56 ಗಂಟೆಯಲ್ಲೇ ಅವರು ಸಿಎಂ ಸ್ಥಾನದಿಂದ ನಿರ್ಗಮಿಸಿದ್ದರು.

ಯಡಿಯೂರಪ್ಪ ಲಿಂಗಾಯತ ಸಮುದಾಯ ಪ್ರಬಲ ನಾಯಕ. ಹಲವು ವರ್ಷಗಳ ಕಾಲ ಸುದೀರ್ಘ ರಾಜಕೀಯ ಅನುಭವವುಳ್ಳವರು. ಅಷ್ಟೇ ಅಲ್ಲದೇ, ರೈತ ನಾಯಕರು ಕೂಡ ಹೌದು. ಆದರೆ, ಇವರ ಕತೆ ಮಾತ್ರ ‘ಅರಮನೆಯಲ್ಲಿ ಕೂತು ರೊಟ್ಟಿ ತಿನ್ನುವಂತೆ’ ಎಂದು ಹೇಳಬಹುದು.

1943ರಂದು ಮಂಡ್ಯ ಜಿಲ್ಲೆಯ ಬೂಕನಕೆರೆಯಲ್ಲಿ ಜನಿಸಿದ ಯಡಿಯೂರಪ್ಪ ಚಿಕ್ಕವಯಸ್ಸಿಗೆ ತಾಯಿಯನ್ನು ಕಳೆದುಕೊಂಡರು. ಆ ದಿನಗಳಲ್ಲಿ ಅವರ ಜೀವನ ಬಹಳ ಕಠಿಣವಾಗಿತ್ತು. ಅವರು ಶಾಲೆಗೆ ಹೋಗುವಾಗ ವಾರಕ್ಕೊಮ್ಮೆ ಮಾರುಕಟ್ಟೆಗೆ ತೆರಳಿ, ನಿಂಬೆಹಣ್ಣು ಮಾರಿ ಬಂದ ಹಣದಿಂದ ಶಿಕ್ಷಣದ ಜೊತೆಗೆ ಕುಟುಂಬವನ್ನು ಸಲಹುತ್ತಿದ್ದರು. ಬೆಂಗಳೂರಿನ ಕಾರ್ಖಾನೆಯೊಂದರಲ್ಲಿ ಹೆಲ್ಪರ್​ ಆಗಿಯೂ ಕೆಲಸ ಮಾಡಿದ್ದಾರೆ.

1960ರ ಆಸುಪಾಸಿನಲ್ಲಿ ಆರ್​ಎಸ್​ಎಸ್​ ಸಂಪರ್ಕಕ್ಕೆ ಬಂದ ಯಡಿಯೂರಪ್ಪ ಅಲ್ಲಿ ಪ್ರಚಾರಕ್​ ಆಗಿ ಕಾರ್ಯನಿರ್ವಹಿಸಿದರು. ಆನಂತರ ಆರ್​ಎಸ್​ಎಸ್​ ಚಟುವಟಿಕೆಯನ್ನು ವಿಸ್ತರಿಸುವ ಸಲುವಾಗಿ ಇವರನ್ನು ಶಿವಮೊಗ್ಗಗೆ ಕಳುಹಿಸಿಕೊಡಲಾಯಿತು. ಇದು ಅವರ ಜೀವನದ ದಿಕ್ಕನ್ನೇ ಬದಲಿಸಿತು. ಅಲ್ಲಿಂದ ಇವರು ಹಿಂದುರುಗಿ ನೋಡಿದ್ದೇ ಇಲ್ಲ. ಪ್ರಚಾರಕ ವೃತ್ತಿಯನ್ನು ಬಿಟ್ಟ ಬಿಎಸ್​ವೈ ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪದ ರೈಲ್​ ಮಿಲ್​ನಲ್ಲಿ ಗುಮಾಸ್ತರಾಗಿ ಸೇರಿಕೊಳ್ಳುತ್ತಾರೆ. ಆನಂತರ ರೈಸ್​ ಮಿಲ್​ ಮಾಲೀಕನ ಮಗಳನ್ನು ಮದುವೆಯಾಗುತ್ತಾರೆ.

ಸಮಾಜವಾದಿ ಪಕ್ಷಗಳ ಕರ್ಮಭೂಮಿಯಾದ ಶಿವಮೊಗ್ಗದಲ್ಲಿ ಬಿಎಸ್​ವೈ ಜನಸಂಘ ಚಟುವಟಿಕೆಗಳನ್ನು ಸಂಘಟಿಸುತ್ತಾರೆ. 1970ರಲ್ಲಿ ಜನಸಂಘ ಪಕ್ಷದ ಟಿಕೆಟ್​ ಪಡೆದು ಶಿಕಾರಿಪುರ ಪುರಸಭೆಯ ಸದಸ್ಯರಾಗಿ ಆಯ್ಕೆಯಾಗುತ್ತಾರೆ. ರೈತರು ಮತ್ತು ಕಾರ್ಮಿಕರ ಧ್ವನಿಯಾಗುವ ಯಡಿಯೂರಪ್ಪ ದುರ್ಬಲ ವರ್ಗದವರನ್ನು ಸಂಘಟಿಸಿ, ಅವರಿಗಾಗಿ ಪಾದಯಾತ್ರೆಗಳನ್ನು ಮಾಡುತ್ತಾರೆ.

1983ರಂದು ಬಿಜೆಪಿಯಿಂದ ಟಿಕೆಟ್​ ಪಡೆದ ಯಡಿಯೂರಪ್ಪ ಕರ್ನಾಟಕ ವಿಧಾನಸಭೆಗೆ ಆಯ್ಕೆಯಾಗುತ್ತಾರೆ. ಇವರೊಂದಿಗೆ ಪಕ್ಷದಿಂದ 17 ಮಂದಿ ಆಯ್ಕೆಯಾಗಿರುತ್ತಾರೆ. ರಾಮಕೃಷ್ಣ ಹೆಗಡೆ ನೇತೃತ್ವದ ಜನತಾ ಪಕ್ಷ ಸರ್ಕಾರ ರಚನೆಗೆ ಬಿಜೆಪಿ ಬೆಂಬಲ ನೀಡಿದ್ದರಿಂದ ಕರ್ನಾಟಕದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ಸೇತರ ಸರ್ಕಾರ ರಚನೆಯಾಗುತ್ತದೆ. ಆದರೆ, 18 ತಿಂಗಳ ನಂತರ ಈ ಮೈತ್ರಿ ಮುರಿದುಬೀಳುತ್ತದೆ. 1985ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಕೇವಲ ಎರಡು ಸ್ಥಾನಗಳಲ್ಲಷ್ಟೇ ಗೆಲುವು ಸಾಧಿಸುತ್ತದೆ. ಆನಂತರ ಶಾಸಕ ವಸಂತ ಬಂಗೇರಾ ಅವರು ಜನತಾ ಪಕ್ಷಕ್ಕೆ ಪಕ್ಷಾಂತರ ಮಾಡುತ್ತಾರೆ. ಆ ಬಳಿಕ ಯಡಿಯೂರಪ್ಪ ಅವರು ವಿಧಾನಸಭೆಯಲ್ಲಿ ದೀರ್ಘಕಾಲ ಬಿಜೆಪಿ ಸದಸ್ಯರಾಗಿರುತ್ತಾರೆ. ಬಿಎಸ್​ವೈ ಸದನದಲ್ಲಿ ರೈತ ಪರ ಧ್ವನಿಯಾಗುತ್ತಾರೆ. ರಾಮಕೃಷ್ಣ ಹೆಗಡೆ ಸರ್ಕಾರದಲ್ಲಿ ರೈತರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿದ ಪರಿಣಾಮ ಇವರಿಗೆ ಹೋರಾಟಗಾರ ಎಂಬ ಬಿರುದು ಪ್ರಾಪ್ತವಾಗುತ್ತದೆ.

1989ರ ಚುನಾವಣೆಯಲ್ಲಿ ಬಿಜೆಪಿ ಒಂದು ಸ್ಥಾನದಿಂದ ನಾಲ್ಕು ಸ್ಥಾನಗಳನ್ನು ಹೆಚ್ಚಿಸಿಕೊಳ್ಳುತ್ತದೆ. ರಾಮಜನ್ಮಭೂಮಿ ಚಳವಳಿ ಮತ್ತು ಎಲ್​.ಕೆ.ಆಡ್ವಾನಿ ಅವರು ಆರಂಭಿಸಿದ ರಥಯಾತ್ರೆಯಿಂದಾಗಿ ಕರ್ನಾಟಕದಲ್ಲಿ ಬಿಜೆಪಿ ಪ್ರವರ್ಧಮಾನಕ್ಕೆ ಬರುತ್ತದೆ. 1994ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 44 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಪ್ರಮುಖ ವಿರೋಧ ಪಕ್ಷವಾಗುತ್ತದೆ. ಅಂದು ಎಚ್​.ಡಿ.ದೇವೇಗೌಡರು ಮುಖ್ಯಮಂತ್ರಿಯಾಗಿದ್ದರೆ ಬಿ.ಎಸ್​.ಯಡಿಯೂರಪ್ಪ ಅವರು ವಿರೋಧ ಪಕ್ಷದ ನಾಯಕನಾಗಿರುತ್ತಾರೆ.

1999ರ ಚುನಾವಣೆಯಲ್ಲಿ ಯಡಿಯೂರಪ್ಪ ಮೊದಲ ಬಾರಿಗೆ ಚುನಾವಣೆಯಲ್ಲಿ ಪರಾಭವಗೊಳ್ಳುತ್ತಾರೆ. ಅಧಿಕಾರ ಇಲ್ಲದೇ ಏನನ್ನು ಮಾಡಲಾಗುವುದಿಲ್ಲ ಎಂಬ ವಾಸ್ತವ ಅರಿತ ಬಿಎಸ್​ವೈ ಆನಂತರ ವಿಧಾನಪರಿಷತ್​ಗೆ ಆಯ್ಕೆಯಾಗುತ್ತಾರೆ.

2004ರ ಚುನಾವಣೆಯಲ್ಲಿ ಮೊದಲ ಬಾರಿಗೆ 79 ಸ್ಥಾನಗಳನ್ನು ಗೆಲ್ಲುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುತ್ತದೆ. ಯಾವುದೇ ಪಕ್ಷಕ್ಕೂ ಬಹುಮತ ಇಲ್ಲದ ಕಾರಣ ಎನ್​.ಧರ್ಮಸಿಂಗ್​ ನೇತೃತ್ವದ ಕಾಂಗ್ರೆಸ್​ ಮತ್ತು ಜೆಡಿಎಸ್​ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿರುತ್ತವೆ. ಎರಡು ವರ್ಷಗಳ ಬಳಿಕ ಮಧ್ಯರಾತ್ರಿಯ ಕಾರ್ಯಾಚರಣೆ ಬಳಿಕ ಕಾಂಗ್ರೆಸ್​ನಿಂದ ಹೊರಬಂದ ಜೆಡಿಎಸ್​ನೊಂದಿಗೆ ಬಿಜೆಪಿ ಕೈ ಜೋಡಿಸುತ್ತದೆ. ಅದರಂತೆ ಉಳಿದ 40 ತಿಂಗಳ ಅಧಿಕಾರದಲ್ಲಿ 20-20 ಸೂತ್ರದ ಮೇಲೆ ಜೆಡಿಎಸ್​-ಬಿಜೆಪಿ ಮೈತ್ರಿ ರಚನೆಯಾಗುತ್ತದೆ. ಮೊದಲ ಅವಧಿಗೆ ಎಚ್​.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸುತ್ತಾರೆ. ಆನಂತರ ಬಿ.ಎಸ್​.ಯಡಿಯೂರಪ್ಪ ಸಿಎಂ ಆಗುತ್ತಾರೆ. ಅದಾದ ಏಳು ದಿನಗಳಲ್ಲಿ ಜೆಡಿಎಸ್​ ಮೈತ್ರಿಯನ್ನು ಮುರಿದ ಪರಿಣಾಮ ಸರ್ಕಾರ ಪತನಗೊಳ್ಳುತ್ತದೆ.

2008ರಿಂದ 2011ರವರೆಗೆ ಯಡಿಯೂರಪ್ಪ ಅತಂತ್ರದ ನಡುವೆಯೇ 38 ತಿಂಗಳು ಅಧಿಕಾರ ನಡೆಸುತ್ತಾರೆ. ಗಣಿ ಹಗರಣ ಸಂಬಂಧ 2011ರಂದು ಬಿಎಸ್​ವೈ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ. ಆದಾದ ಕೆಲವೇ ವಾರಗಳಲ್ಲಿ ಭೂ ಹಗರಣ ಪ್ರಕರಣದಲ್ಲಿ ಲಂಚ ಪಡೆದ ಆರೋಪದ ಮೇಲೆ ಬಿಎಸ್​ವೈ ಜೈಲು ಪಾಲಾಗುತ್ತಾರೆ. ಇದು ಬಿಎಸ್​ವೈ ವರ್ಚಸ್ಸಿನ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಾರೆ. ಅಂದಿನಿಂದ ಇಂದಿನವರೆಗೂ ಅವರನ್ನು ಜೈಲೂರಪ್ಪ ಎಂದೇ ಅಣಕಿಸಲಾಗುತ್ತದೆ.

ತಮ್ಮ ಪಕ್ಷದ ನಾಯಕರಿಂದಲೇ ಬಿಎಸ್​ವೈ ಜೈಲು ಸೇರಬೇಕಾಗಿ ಬಂತು. ಆನಂತರ ಬಿಜೆಪಿಯಿಂದ ಹೊರಬಂದ ಯಡಿಯೂರಪ್ಪ 2013ರ ವಿಧಾನಸಭೆ ಚುನಾವಣೆಗೂ ಮುನ್ನ ಕರ್ನಾಟಕ ಜನತಾ ಪಕ್ಷ (ಕೆಜೆಪಿ)ವನ್ನು ಸ್ಥಾಪಿಸಿದರು. ಆದರೆ, ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದ ಬಿಎಸ್​ವೈಗೆ ಚುನಾವಣೆ ಫಲಿತಾಂಶ ಭಾರೀ ನಿರಾಶೆ ಉಂಟುಮಾಡಿತ್ತು. ಏಕೆಂದರೆ ಈ ಚುನಾವಣೆಯಲ್ಲಿ ಬಿಎಸ್​ವೈ ಪಕ್ಷದಿಂದ ಕೇವಲ ಆರು ಮಂದಿ ಮಾತ್ರ ಆಯ್ಕೆಯಾಗಿದ್ದರು. ಅದಾದ ವರ್ಷದ ಬಳಿಕ ಮತ್ತೆ ಬಿಜೆಪಿ ಸೇರಿದ ಬಿಎಸ್​ವೈ 2014ರ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗದಿಂದ ಸ್ಪರ್ಧಿಸಿ, ಸಂಸದರಾಗಿ ಆಯ್ಕೆಯಾದರು.

2018ರ ವಿಧಾನಸಭೆ ಚುನಾವಣೆಯಲ್ಲಿ ಬಿಎಸ್​ವೈ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಪಕ್ಷವನ್ನು ಮುನ್ನಡೆಸಿದರು. ಅವರ ದುರಾದೃಷ್ಟ ಇನ್ನೇನು ಅಧಿಕಾರ ಹಿಡಿಯಬೇಕು ಎಂಬ ಸನಿಹಕ್ಕೆ ಬಂದು ಎಡವಿದರು. ಇವರ ರಾಜಕೀಯ ಜೀವನ ಹೀಗೆ ಹಲವು ತಿರುವುಗಳಿಂದ ಕೂಡಿದೆ. ಅಧಿಕಾರ ಸನಿಹದಲ್ಲೇ ಇರುತ್ತದೆ. ಆದರೆ, ಹಿಡಿಯಲು ಮಾತ್ರ ಬಹು ದೂರದಲ್ಲಿ ಇರುತ್ತದೆ.

ಬಿಎಸ್​ವೈಗೆ ಅಧಿಕಾರ ಎಂದಿಗೂ ಸುಲಭವಾಗಿ ದಕ್ಕಿಲ್ಲ. ಅದಕ್ಕಾಗಿ ಅವರು ನಿರಂತರ ಹೋರಾಟ ಮಾಡುತ್ತಲೇ ಇದ್ದಾರೆ. ಈಗ ಮತ್ತೊಮ್ಮೆ ಅವರು ಅತಂತ್ರ ಸರ್ಕಾರ ರೂವಾರಿಯಾಗಿದ್ದಾರೆ. ಈ ಸರ್ಕಾರವನ್ನು ಅವರು ಎಷ್ಟು ಸಮಯ ಮುನ್ನಡೆಸಲಿದ್ದಾರೆ? ಎಂಬುದನ್ನು ಕಾದುನೋಡಬೇಕಿದೆ.

Comments are closed.