ಬೆಂಗಳೂರು (ಜು.26): ಮೈತ್ರಿ ಸರ್ಕಾರ ಪತನಕ್ಕೆ ಜಾರಕಿಹೊಳಿ ಕುಟುಂಬ ಎಂಬ ಮಾತು ಕೇಳಿ ಬರುತ್ತಿದೆ. ಆದರೆ, ಸರ್ಕಾರ ಪತನಕ್ಕೂ ಜಾರಕಿಹೊಳಿ ಕುಟುಂಬಕ್ಕೂ ಸಂಬಂಧವಿಲ್ಲ. ಇದಕ್ಕೆ ಕಾರಣ ಒಂದು ವಸ್ತು. ಅದರಿಂದಲೇ ಹೀಗೆ ಆಗಿದ್ದು ಎಂದು ಹೊಸ ಬಾಂಬ್ವೊಂದನ್ನು ಸತೀಶ್ ಜಾರಕಿಹೊಳಿ ಸಿಡಿಸಿದ್ದಾರೆ.
ರಾಜ್ಯದ ಬೆಳವಣಿಗೆ ಕುರಿತು ಮಾತನಾಡಿದ ಅವರು, ಜಾರಕಿಹೊಳಿ ಕುಟುಂಬದ ಒಳಜಗಳ, ರಮೇಶ್ ಜಾರಕಿಹೊಳಿ ಅಸಮಾಧಾನದಿಂದ ಸರ್ಕಾರ ಪತನವಾಗಿದೆ, ಮೈತ್ರಿ ಸರ್ಕಾರ ಬೀಳಲು ರಮೇಶ್ ಜಾರಕಿಹೊಳಿಯೇ ಕಾರಣ ಎಂಬ ಮಾತು ಕೇಳಿಬರುತ್ತಿದೆ. ಆದರೆ, ಇದು ಸುಳ್ಳು. ಈ ರೀತಿಯ ಕೆಟ್ಟ ಹೆಸರು ನಮ್ಮ ಕುಟುಂಬಕ್ಕೆ ಬರಬಾರದು ಎಂದರು.
ಇನ್ನು ಯಾವ ವಸ್ತುವಿನಿಂದಾಗಿ ಈ ಸರ್ಕಾರ ಪತನವಾಗಿದೆ ಎಂಬುದನ್ನು ಶೀಘ್ರದಲ್ಲಿಯೇ ಬಹಿರಂಗಪಡಿಸುತ್ತೇನೆ. ಯಾವ ಕಾರಣದಿಂದ ಸರ್ಕಾರ ಬಿದ್ದಿದೆ ಎಂಬುದು ಜನರಿಗೆ ಆದಷ್ಟು ಬೇಗ ತಿಳಿಸಲಿದ್ದೇನೆ ಎಂದರು.
ಅನರ್ಹತೆ ಕ್ರಮಕ್ಕೆ ಸ್ವಾಗತ:
ಮೂವರು ಶಾಸಕರನ್ನು ಸ್ಪೀಕರ್ ಅನರ್ಹಗೊಳಿಸಿರುವ ಪ್ರಕಾರ ಸ್ವಾಗತ. ಈ ಹಿಂದೆಯೇ ಶಾಸಕರನ್ನು ಅನರ್ಹ ಮಾಡುವಂತೆ ನಾನು ತಿಳಿಸಿದ್ದೆ. ನಾನು ಈ ಹಿಂದೆ ಆಪರೇಷನ್ ಕಮಲದ ಬಗ್ಗೆ ಹೇಳಿದೆ. ಆದರೆ ಹೈ ಕಮಾಂಡ್ ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಈ ಹಿಂದೆಯೇ ಈ ಕ್ರಮ ನಡೆದಿದ್ದರೆ ನಮ್ಮ ಸರ್ಕಾರ ಉಳಿಯುತ್ತಿತ್ತು. ಪಕ್ಷವಿರೋಧಿ ಚಟುವಟಿಕೆ ಮಾಡಿದ ಉಳಿದವರನ್ನು ಅನರ್ಹಗೊಳಿಸಬೇಕು. ಉಳಿದ ಶಾಸಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.
ಅನರ್ಹ ಪ್ರಕರಣ ಇತ್ಯರ್ಥಕ್ಕೆ ಒಂದು ವರ್ಷ ಬೇಕು. ಕೋರ್ಟ್ನಲ್ಲಿ ನಮ್ಮ ಪರ ತೀರ್ಪು ಬಂದ್ರೆ ಅವರು ಕೋರ್ಟ್ ಹೋಗುತ್ತಾರೆ. ಅವರ ಪರ ತೀರ್ಪು ಬಂದರೆ ನಾವು ಕೋರ್ಟ್ ಹೋಗುತ್ತೇವೆ.