ಕರ್ನಾಟಕ

ಸದನದಲ್ಲಿ ದೋಸ್ತಿ ಸರಕಾರದವರು ಗದ್ದಲ-ಕೋಲಾಹಲ-ಆರೋಪದ ಸುರಿಮಳೆಗೈಯ್ಯುತ್ತಿದ್ದರೂ ಯಡಿಯೂರಪ್ಪ ಮೌನ ತಾಳಿರುವುದೇಕೆ ಗೊತ್ತಾ?

Pinterest LinkedIn Tumblr

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರು ಸದನದಲ್ಲಿ ಧ್ವನಿಯೆತ್ತಿದರೆ ಸಾಕು, ಸರಕಾರವೇ ನಡುಗುವಂತಹ ಕಾಲವೊಂದಿತ್ತು. ಅವರ ವಾಕ್ಚಾತುರ್ಯ, ಗಡಸು ಧ್ವನಿಯ ವಾಗ್ದಾಳಿಗೆ ಅಧಿಕಾರದಲ್ಲಿದ್ದ ಪಕ್ಷದ ನಾಯಕರು ಪತರಗುಟ್ಟುತ್ತಿದ್ದರು. ‘ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುವುದು…’ ಎಂಬ ನುಡಿಗಟ್ಟೇ ಹುಟ್ಟಿಕೊಂಡಿತ್ತು.

ಹೀಗಿದ್ದ ಯಡಿಯೂರಪ್ಪ ಕಳೆದ ಎರಡು ದಿನಗಳ ಕಾಲ ಮೈತ್ರಿ ಸರಕಾರದ ವಿಶ್ವಾಸಮತ ಯಾಚನೆ ನಿರ್ಣಯದ ಚರ್ಚೆ ವೇಳೆ ತುಟಿಪಿಟಕ್ ಎನ್ನದೆ ಮೌನಕ್ಕೆ ಶರಣಾಗಿದ್ದರು. 11 ಗಂಟೆಗಳ ಕಾಲ ನಡೆದ ಚರ್ಚೆಯಲ್ಲಿ ಅವರು ಮಾತನಾಡಿದ್ದು ಕೆಲವೇ ಸೆಕೆಂಡ್‌ಗಳ ಕಾಲ ಅಷ್ಟೆ. ಅವರ ಮೌನಕ್ಕೆ ಕಾರಣವೂ ಇದೆ. ವಿಧಾನಸಭೆಯಲ್ಲಿ ಬಿಜೆಪಿ ಅನುಸರಿಸಬೇಕಾದ ಕಾರ್ಯತಂತ್ರದ ಭಾಗವಾಗಿ ಸಾಕಷ್ಟು ಯೋಚಿಸಿಯೇ ಅವರು ಮೌನ ತಾಳಿದ್ದಾರೆ ಎಂದು ಬಿಜೆಪಿ ನಾಯಕರು ತಿಳಿಸಿದ್ದಾರೆ.

‘ಕ್ರಿಕೆಟ್‌ನಲ್ಲಿ ಡ್ರೆಸ್ಸಿಂಗ್ ರೂಮ್ ಚಟುವಟಿಕೆಯಂತೆ ಇದು’ ಎಂದು ಹಿರಿಯ ಶಾಸಕ ಸಿ.ಟಿ ರವಿ ಹೇಳುತ್ತಾರೆ. ‘ಮೈತ್ರಿಕೂಟದ ನಾಯಕರು ಕೆಸರೆರಚುವ ಮೂಲಕ, ವೈಯಕ್ತಿಕ ನಿಂದನೆಗಳ ಮೂಲಕ ನಮ್ಮನ್ನು ಕೆರಳಿಸಲು ಹವಣಿಸುತ್ತಿದ್ದಾರೆ. ನಾವು ಸಹನೆ ಕಳೆದುಕೊಂಡು ಪ್ರತಿಕ್ರಿಯಿಸಿದರೆ ಅದನ್ನೇ ನೆಪವಾಗಿಟ್ಟುಕೊಂಡು ಸ್ಪೀಕರ್ ಅಧಿಕಾರ ಬಳಸಿ ಪ್ರತಿಪಕ್ಷ ಸದಸ್ಯರನ್ನು ಕಲಾಪದಿಂದ ಹೊರಗಿಟ್ಟು ವಿಶ್ವಾಸಮತ ಸಾಬೀತುಪಡಿಸಬಹುದು ಎಂಬ ಎಣಿಕೆ ಮೈತ್ರಿ ನಾಯಕರದ್ದು. ನಾವು ಅಂತಹ ತಂತ್ರಗಳಿಗೆ ಅವಕಾಶ ನೀಡುವುದಿಲ್ಲ. ಅವರ ಬಲೆಗೆ ಬೀಳುವುದೂ ಇಲ್ಲ’ ಎಂದು ಸಿ.ಟಿ ರವಿ ಹೇಳಿದರು.

ವಾಸ್ತವದಲ್ಲಿ ಎರಡು ದಿನಗಳ ಚರ್ಚೆಯಲ್ಲಿ ಬಿಜೆಪಿ ನಾಯಕರು ಸಂಘಟಿತವಾಗಿ ಕೆಲವೇ ನಿಮಿಷಗಳಷ್ಟು ಮಾತ್ರ ಮಾತನಾಡಿದ್ದಾರೆ. ಪಕ್ಷ 105 ಶಾಸಕರ ಪೈಕಿ ಮೂವರು ಮಾತ್ರ ಆಡಳಿತ ಮೈತ್ರಿಕೂಟದ ವಾಗ್ದಾಳಿಗೆ ಪ್ರತಿದಾಳಿ ನಡೆಸಿದ್ದಾರೆ. ಇವೆಲ್ಲವೂ ಪೂರ್ವಯೋಜಿತ ಕಾರ್ಯತಂತ್ರದಂತೆಯೇ ನಡೆದಿದೆ.

‘ಈ ಸರಕಾರದ ಪತನ ಖಚಿತ. ಈಗ ಕೊನೆಯುಸಿರು ಎಳೆಯುತ್ತಿದೆ ಅಷ್ಟೆ. ಇಂತಹ ಸನ್ನಿವೇಶದಲ್ಲಿ ಅನಗತ್ಯ ಚರ್ಚೆಗಳನ್ನು ನಡೆಸುವ ಮೂಲಕ ಸಾಯುತ್ತಿರುವ ಸರಕಾರಕ್ಕೆ ಆಕ್ಸಿಜನ್ ಪೂರೈಸಲು ನಾವು ಸಿದ್ಧರಿಲ್ಲ’ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಹೇಳುತ್ತಾರೆ. ‘ಸದನದಲ್ಲಿ ಯಾವುದೇ ರೀತಿಯ ವೈಯಕ್ತಿಕ ದಾಳಿ, ಪ್ರಚೋದನೆ ಬಂದರೂ ಕೆರಳದೆ ಸುಮ್ಮನಿರುವಂತೆ ಸದಸ್ಯರಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ’ ಎಂದು ಅವರು ತಿಳಿಸಿದರು.

ಪೂರ್ವ ಯೋಜನೆಯಂತೆ- ಜೆ.ಸಿ ಮಾಧುಸ್ವಾಮಿ, ಬಸವರಾಜ್ ಬೊಮ್ಮಾಯಿ ಮತ್ತು ಎಸ್‌. ಸುರೇಶ್ ಕುಮಾರ್ ಮಾತ್ರ (ಸಂವಿಧಾನ ಮತ್ತು ನಿಯಮಾವಳಿಗಳ ಬಗ್ಗೆ ಸಂಪೂರ್ಣ ಜ್ಞಾನವುಳ್ಳವರು) ಮಾತನಾಡಲು ಮುಕ್ತ ಅವಕಾಶ ನೀಡಲಾಗಿದೆ.

ಕಾಂಗ್ರೆಸ್ ಘಟಾನುಘಟಿಗಳಾದ ಸಿದ್ದರಾಮಯ್ಯ, ಎಚ್‌.ಕೆ ಪಾಟೀಲ್‌ ಮತ್ತು ಕೃಷ್ಣ ಬೈರೇಗೌಡರ ವಾಗ್ದಾಳಿಗಳಿಗೆ ಪ್ರತಿದಾಳಿ ನಡೆಸುವ ಹೊಣೆಯನ್ನು ಮಾಧುಸ್ವಾಮಿ ಅವರಿಗೆ ವಹಿಸಲಾಗಿದೆ. ಮತ ವಿಭಜನೆಗೆ ಬಿಜೆಪಿಯವರಿಗೆ ಆತುರ ಏಕೆ ಎಂಬ ಮುಖ್ಯಮಂತ್ರಿ ಸಹಿತ ಆಡಳಿತ ಪಕ್ಷ ಮುಖಂಡರ ಪ್ರಶ್ನೆಗೆ ಉತ್ತರಿಸಿದ ಸುರೇಶ್ ಕುಮಾರ್, ಬಹುಮತ ಕಳೆದುಕೊಂಡ ಸರಕಾರ ಅಧಿಕಾರಿಗಳ ವರ್ಗಾವಣೆ ಮುಂದುವರಿಸಿದೆ ಎಂಬ ವಿಷಯ ಪ್ರಸ್ತಾಪಿಸಿ ಆಡಳಿತ ನಾಯಕರ ಅಸ್ತ್ರವನ್ನು ನಿಷ್ಕ್ರಿಯಗೊಳಿಸಿದರು.

‘ಇದು ಕ್ರಿಯಾಲೋಪದ ವಿಷಯವಲ್ಲ, ನಿಷ್ಕ್ರಿಯತೆ ಮತ್ತು ಅವ್ಯವಸ್ಥೆಯ ವಿಷಯ. ಸದನ ಕಲಾಪದ ದಿಕ್ಕುತಪ್ಪಿಸುವ ತಂತ್ರ’ ಎಂದು ಸುರೇಶ್ ಕುಮಾರ್ ಅವರು ಸಿದ್ದರಾಮಯ್ಯ ಎತ್ತಿದ ಕ್ರಿಯಾಲೋಪದ ಪ್ರಸ್ತಾವಕ್ಕೆ ತಿರುಗೇಟು ನೀಡಿದರು.

ರಾಜ್ಯಪಾಲರ ಸೂಚನೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲೇಖಿಸಿ ಮಾತನಾಡಿದ ಕೃಷ್ಣ ಬೈರೇಗೌಡರಿಗೆ ಬಸವರಾಜ ಬೊಮ್ಮಾಯಿ ಸೂಕ್ತ ತಿರುಗೇಟು ನೀಡಿದರು. ಸಂವಿಧಾನದ 175ನೇ ವಿಧಿ ಅನುಸಾರ ಬಹುಮತ ಸಾಬೀತುಪಡಿಸುವಂತೆ ಸರಕಾರಕ್ಕೆ ಕಾಲಕಾಲಕ್ಕೆ ನಿರ್ದೇಶನ ನೀಡುವ ಅಧಿಕಾರ ರಾಜ್ಯಪಾಲರಿಗಿದೆ ಎಂದು ಅವರು ಪ್ರತಿಪಾದಿಸಿದರು.

ನಿಗದಿತ ಕಾಲಮಿತಿಯಲ್ಲಿ ವಿಶ್ವಾಸಮತ ಸಾಬೀತುಪಡಿಸುವಂತೆ ರಾಜ್ಯಪಾಲರು ಸೂಚಿಸುವುದು ರಾಜ್ಯಪಾಲರ ಅಧಿಕಾರ ಎಂದು ಬೊಮ್ಮಾಯಿ ಪ್ರತಿಪಾದಿಸಿದರು.

‘ನನಗೆ ವಹಿಸಿದ ಕೆಲಸವನ್ನು ನಾನು ಸಮರ್ಥವಾಗಿಯೇ ನಿಭಾಯಿಸಿದ್ದೇನೆ. ಪಕ್ಷ ನನ್ನ ಮೇಲಿಟ್ಟ ಭರವಸೆಗೆ ನಾನು ಋಣಿ’ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಆಡಳಿತ ಮೈತ್ರಿಕೂಟ ಕೂಡ ಇದೇ ತಂತ್ರ ಅನುಸರಿಸಿತು. ಕೆಲವೇ ಮಂದಿಯನ್ನು ಮುಂದೆ ಬಿಟ್ಟು ಜಾಣ ನಡೆ ಅನುಸರಿಸಿತು. ಹಿರಿಯರಾದ ಆರ್‌.ವಿ ದೇಶಪಾಂಡೆ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಾ.ರಾ ಮಹೇಶ್ ಮತ್ತು ಎಚ್‌.ಡಿ ರೇವಣ್ಣ ಮಾತ್ರ ಸಾಂದರ್ಭಿಕವಾಗಿ ಮಧ್ಯಪ್ರವೇಶಿಸಿ ಮಾತನಾಡಿದರು.

ಸಂಸದೀಯ ವ್ಯವಹಾರಗಳ ಖಾತೆಯನ್ನೂ ಹೊಂದಿರುವ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ಸಂಪೂರ್ಣ ಮೌನ ವಹಿಸಿದ್ದರು.

Comments are closed.