ಕರ್ನಾಟಕ

ಶ್ರೀಮಂತ್ ಪಾಟೀಲ್ ಕಿಡ್ನಾಪ್​ ಆರೋಪ!: ಶಾಸಕನ​​​​​ ಭೇಟಿಗೆ ತೆರಳಿದ ತನಿಖಾ ತಂಡ!!

Pinterest LinkedIn Tumblr


ಕಾಗವಾಡ ಕಾಂಗ್ರೆಸ್​ ಶಾಸಕ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪೀಕರ್ ಸೂಚನೆ ಮೇರೆಗೆ ಮುಂಬೈಗೆ ತೆರಳಿರುವ ಪೊಲೀಸರ ತಂಡ ಇನ್ನೇನು ಕೆಲ ಹೊತ್ತಿನಲ್ಲೇ ಶಾಸಕ ಶ್ರೀಮಂತ್ ಪಾಟೀಲ್ ಭೇಟಿ ಮಾಡಲಿದ್ದು, ಅವರ ಅನಾರೋಗ್ಯದ ವಿವರ ತಿಳಿದುಕೊಳ್ಳಲಿದ್ದಾರೆ.

ರೆಸಾರ್ಟ್​ನಿಂದ ದಿಢೀರ ಮೊನ್ನೆ ರಾತ್ರಿ ನಾಪತ್ತೆಯಾಗಿದ್ದ ಶ್ರೀಮಂತ್ ಪಾಟೀಲ್, ನಿನ್ನೆ ಮುಂಬೈ ಆಸ್ಪತ್ರೆಯಲ್ಲಿ ಪತ್ತೆಯಾಗಿದ್ದರು. ಈ ಹಿನ್ನೆಲೆಯಲ್ಲಿ ನಿನ್ನೆ ವಿಧಾನಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸಿದ್ದ ಕಾಂಗ್ರೆಸ್ ನಾಯಕರು ಶ್ರೀಮಂತ್​ ಪಾಟೀಲ್​ರನ್ನು ಬಿಜೆಪಿ ನಾಯಕರು ಕಿಡ್ನಾಪ್ ಮಾಡಿದ್ದಾರೆ ಎಂದು ಆರೋಪಿಸಿದ್ದರು.

ಅಲ್ಲದೇ ಕಾಂಗ್ರೆಸ್​ ಶಾಸಕಾಂಗ ಪಕ್ಷದ ನಾಯಕ ಸಿದ್ಧರಾಮಯ್ಯ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಐಪಿಸಿ ಸೆಕ್ಷನ್ 365ರ ಅಡಿ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಕಿಡ್ನಾಪ್ ಕೇಸ್ ದಾಖಲಾಗಿತ್ತು. ಇದಲ್ಲದೇ ಸದನದಲ್ಲೂ ಶ್ರೀಮಂತ್ ಪಾಟೀಲ್​ ಕುಟುಂಬದಿಂದ ಹೇಳಿಕೆ ಪಡೆದು ವರದಿ ನೀಡುವಂತೆ ಗೃಹಸಚಿವರಿಗೆ ಸ್ಪೀಕರ್ ನಿರ್ದೇಶನ ನೀಡಿದ್ದರು.

ಈ ದೂರು ದಾಖಲಾಗುತ್ತಿದ್ದಂತೆ ಡಿಸಿಪಿ ಶಶಿಕುಮಾರ್ ನೇತೃತ್ವದ ತನಿಖಾ ಟೀಂ ಮುಂಬೈನ ಸೇಂಟ್​ ಜಾರ್ಜ್​​​​ ಆಸ್ಪತ್ರೆಗೆ ಭೇಟಿ ನೀಡಿದ್ದು, ಶ್ರೀಮಂತ್ ಪಾಟೀಲ್​​ರ ಹೇಳಿಕೆಯನ್ನ ದಾಖಲು ಮಾಡಿಕೊಳ್ಳುತ್ತಿದ್ದಾರೆ. ಆ ಬಳಿಕ ತನಿಖಾ ತಂಡ ವರದಿಯನ್ನು ಗೃಹ ಸಚಿವರ ಮೂಲಕ ಸರ್ಕಾರಕ್ಕೆ ಸಲ್ಲಿಸಲಿದೆ.

ನಮ್ಮ ಶಾಸಕ ಶ್ರೀಮಂತ ಪಾಟೀಲ್‌ರನ್ನು ಬಿಜೆಪಿ ಅಪಹರಣ ಮಾಡಿದೆ. ಅವರು ಹೇಗೆ ಮುಂಬೈಗೆ ಹೋದರು? ಎಂಬ ಬಗ್ಗೆ ತನಿಖೆ ಮಾಡಿಸಬೇಕು” ಎಂದು ಕಾಂಗ್ರೆಸ್ ನಾಯಕ ಡಿ. ಕೆ. ಶಿವಕುಮಾರ್ ನೆನ್ನೆ ಸದನದಲ್ಲಿ ಒತ್ತಾಯಿಸಿದರು.ಬಿಜೆಪಿ ಮುಖಂಡ ಲಕ್ಷ್ಮಣ ಸವದಿ ಸೇರಿ ಇತರರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಅಧಿವೇಶನದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಶಾಸಕರು ಉಳಿದುಕೊಳ್ಳಲು ದೇವನಹಳ್ಳಿ ಸಮೀಪ ಇರುವ ಪ್ರಕೃತಿ ವಿಂಡ್‌ಪ್ಲವರ್‌ ರೆಸಾರ್ಟ್‌ನಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಇದೇ ರೆಸಾರ್ಟ್‌ನಲ್ಲಿ ಕಾಗವಾಡ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಶ್ರೀಮಂತ ಪಾಟೀಲ್‌ ಕೂಡ ಇದ್ದರು.

Comments are closed.