
ಬೆಂಗಳೂರು: ನಾನು ಅಧಿಕಾರಕ್ಕೆ ಅಂಟಿಕೊಂಡು ಕುಳಿತಿಲ್ಲ, ಯಾರಿಗೂ ದಮ್ಮಯ್ಯ, ದಪ್ಪಯ್ಯ ಅನ್ನುವವನಲ್ಲ ಎಂದು ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ವಿಧಾನಸೌಧದಲ್ಲಿಂದು ಮಾತನಾಡಿದ ಅವರು, ನಾನು ವಿಶ್ವಾಸಮತ ನಿರ್ಣಯ ಮಂಡಿಸುತ್ತೇನೆ, ಅಧಿಕಾರಕ್ಕೆ ಅಂಟಿಕೊಂಡು ಕುಳಿತವನಲ್ಲ, ನಿಮಗೆ ತುಂಬಾ ಆತುರವಿರಬಹುದು. ನಮಗೆ ನಿಮ್ಮಷ್ಟು ಆತುರವಿಲ್ಲ, ನಾವು ಶಾಸಕರನ್ನು ದನಗಳ ರೀತಿ ಬಿಂಬಿಸಿಲ್ಲ ಎಂದು ಸಿಎಂ ಕುಮಾರಸ್ವಾಮಿ ಆಕ್ರೋಶ ಹೊರಹಾಕಿದರು.
ಶ್ರೀಮಂತ್ ಪಾಟೀಲ್ ಎಲ್ಲಿದ್ದಾರೆ ಎಂದು ಗೊತ್ತಿಲ್ಲ, ಫೋಟೋ ಹಾಕಿದವರು ಯಾರು ಎಂದು ನಮಗೆ ಇನ್ನೂ ತಿಳಿದಿಲ್ಲ, ಇಂಡಿಗೋ ವಿಮಾನದ ಪ್ರಯಾಣದ ಡಿಟೇಲ್ಸ್ ಇಲ್ಲಿದೆ ನೋಡಿ, ಯಾರ್ಯರು ಪ್ರಯಾಣಿಸಿದ್ದಾರೆ ಅನ್ನೋ ದಾಖಲೆ ಇದೆ. ಸಂಖ್ಯೆ ಪ್ರಶ್ನೆ ಈಗ ಬರುವುದಿಲ್ಲ, ಮತ ಹಾಕಿದಾಗ ಸಂಖ್ಯೆ ಪ್ರಶ್ನೆ ಬರುತ್ತಾದೆ ಎಂದು ಕುಮಾರಸ್ವಾಮಿ ಹೇಳಿದರು.
ವಿರೋಧ ಪಕ್ಷದ ನಾಯಕ ಬಿ.ಎಸ್ ಯಡಿಯೂರಪ್ಪ ಅವರು ಆತುರದಲ್ಲಿದ್ದಾರೆ, ಆದರೆ ಸದನದ ಸದಸ್ಯರಿಗೆ ಹೇಳುತ್ತೇನೆ. ನಮ್ಮದು ಲೂಟಿ ಸರ್ಕಾರವಲ್ಲ. ನಾನು ಹಾಗೂ ನಮ್ಮ ಸಂಪುಟದ ಮಂತ್ರಿಗಳು ಮಾನ, ಮರ್ಯಾದೆ ಇಟ್ಟುಕೊಂಡು ಬದುಕಿದ್ದಾರೆ. ಚರ್ಚೆ ನಡೆಸದೇ ವಿಶ್ವಾಸಮತ ಯಾಚನೆ ಸಾಧ್ಯವೇ? ಎಂದು ಪ್ರಶ್ನಿಸಿದ ಕುಮಾರಸ್ವಾಮಿ ಕಳೆದ 14 ತಿಂಗಳಿಂದ ಭದ್ರವಾದ ಸರ್ಕಾರ ವನ್ನು ಅಸ್ಥಿರಗೊಳಿಸುತ್ತಿರುವವರು ಯಾರು ಎಂಬ ಚರ್ಚೆ ನಡೆಯಬೇಕು ಎಂದು ಸಿಎಂ ಹೇಳಿದರು.
Comments are closed.