
ಬೆಂಗಳೂರು: ರಾತ್ರಿ ದೇವನಹಳ್ಳಿ ರೆಸಾರ್ಟ್ ನಿಂದ ಹೊರಹೋಗಿ ಕುತೂಹಲ ಮೂಡಿಸಿದ್ದ ಶಿಡ್ಲಘಟ್ಟ ಕಾಂಗ್ರೆಸ್ ಶಾಸಕ ವಿ. ಮುನಿಯಪ್ಪ ಇಂದು ದೇವನಹಳ್ಳಿ ರೆಸಾರ್ಟ್ ಗೆ ವಾಪಸ್ ಆಗಿದ್ದಾರೆ.
ರೆಸಾರ್ಟ್ ಊಟ ಇಷ್ಟ ಆಗ್ತಿರಲಿಲ್ಲ ಹೀಗಾಗಿ ಮನೆಗೆ ಹೋಗಿದ್ದೆ
ಬೆಂಗಳೂರಿನಲ್ಲಿ ಇಂದು ಬೆಳಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಎಲ್ಲೂ ಹೋಗಿರಲಿಲ್ಲ, ಯಾವ ರಾಜಕೀಯ ಕಾರಣಕ್ಕೂ ಹೊರ ಹೋಗಿರಲಿಲ್ಲ, ನನಗೆ ಮನೆಯೂಟ ಮಾಡಿ ಅಭ್ಯಾಸ. ರೆಸಾರ್ಟ್ ಊಟ ಸರಿಯಾಗುತ್ತಿರಲಿಲ್ಲ. ಹಾಗಾಗಿ ಮನೆ ಊಟ ಮಾಡಲು ಮನೆಗೆ ಹೋಗಿದ್ದೆ ಎಂದರು.
ವಿಶ್ವಾಸ ಮತ ಯಾಚನೆ ಇದೆ, ನಮಗೆ ವಿಶ್ವಾಸವಿದೆ
ರೆಸಾರ್ಟ್ ರಾಜಕಾರಣ ವೈಯಕ್ತಿಕವಾಗಿ ನನಗೂ ಮುಜುಗರ ಆಗುತ್ತಿದೆ, ಆದರೆ ನಮ್ಮವರನ್ನು ಉಳಿಸಿಕೊಳ್ಳೋ ಪ್ರಯತ್ನ ಮಾಡುತಿದ್ದೇವೆ. ಇನ್ನೂ ಅತೃಪ್ತರನ್ನು ನಮ್ಮದೇ ಸೋರ್ಸ್ ಮೂಲಕ ಕಾಂಟ್ಯಾಕ್ಟ್ ಮಾಡ್ತಿದ್ದೀವಿ ಎಂದರು. ಇಂದು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ವಿಶ್ವಾಸಮತ ಯಾಚನೆ ನಿರ್ಣಯ ಮಂಡಿಸಲಿದ್ದಾರೆ. ಹೀಗಾಗಿ ಇಂದಿನ ರಾಜಕೀಯ ಬೆಳವಣಿಗೆಯ ಬಗ್ಗೆ ಇಡೀ ದೇಶವೇ ಕಾತರದಿಂದ ನೋಡುತ್ತಿದೆ. ನಮಗೆ ವಿಶ್ವಾಸವಿದೆ ಮೈತ್ರಿ ಸರ್ಕಾರಕ್ಕೆ ಬೆಂಬಲ ಸಿಗುತ್ತದೆ ಎಂದು ತಿಳಿಸಿದರು.
Comments are closed.