ಬೆಂಗಳೂರು: ಅತೃಪ್ತ ಶಾಸಕರ ಬಣ ಸೇರಲು ಸಚಿವ ಎಂಟಿಬಿ ನಾಗರಾಜ್ ಬಿಜೆಪಿ ನಾಯಕ ಆರ್.ಅಶೋಕ್ ಜೊತೆ ಮುಂಬೈಗೆ ತೆರಳುತ್ತಿದ್ದಂತೆಯೇ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಅವರ ಡಾಲರ್ಸ್ ಕಾಲೋನಿ ನಿವಾಸದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡವು ಸಂಸದೆ ಶೋಭಾ ಕರಂದ್ಲಾಜೆ, ಶಾಸಕರಾದ ಮಾಧುಸ್ವಾಮಿ, ಸಿ ಟಿ ರವಿ ಸೇರಿದಂತೆ ಕೆಲ ಕಮಲ ನಾಯಕರು ಪಕ್ಷದ ಮುಂದಿನ ನಡೆ, ಸೋಮವಾರ ವಿಧಾನಸಭೆಯಲ್ಲಿ ಪಕ್ಷ ಕೈಗೊಳ್ಳಬೇಕಾದ ತಂತ್ರಗಳ ಕುರಿತು ಸುದೀರ್ಘ ಸಮಾಲೋಚನೆ ನಡೆಸಿದರು.
ಬಿಜೆಪಿ ಪಾಳಯದಲ್ಲಿ ಉತ್ಸಾಹ ಇಮ್ಮಡಿಯಾಗಿದ್ದು, ರಾಜಕೀಯ ತಂತ್ರ ಪ್ರತಿತಂತ್ರಗಳ ಕುರಿತು ಯಡಿಯೂರಪ್ಪ ತಮ್ಮ ಆಪ್ತ ಮುಖಂಡರೊಂದಿಗೆ ಚರ್ಚೆ ನಡೆಸಿದರು. ಬಳಿಕ ಅವರು ಪಕ್ಷದ ಮುಖಂಡರೊಡನೆ ಮತ್ತೆ ರೆಸಾರ್ಟ್ ನತ್ತ ಹೆಜ್ಜೆ ಹಾಕಿದರು.
ಈ ನಡುವೆ ಮಾತನಾಡಿದ ಯಡಿಯೂರಪ್ಪರಾಜ್ಯದ ಮೈತ್ರಿ ಸರ್ಕಾರ ಬಹುಮತ ಕಳೆದುಕೊಂಡಿದೆ ಹಾಗಾಗಿ ಸೋಮವಾರವೇ ಸದನದಲ್ಲಿ ವಿಶ್ವಾಸಮತ ಯಾಚನೆ ಮಾಡಬೇಕು ಇಲ್ಲವೇ ಮುಖ್ಯಮಂತ್ರಿ ಕುಮಾರಸ್ವಾಮಿ ರಾಜೀನಾಮೆ ನೀಡಬೇಕು ಎಂದು ಹೇಳಿದ್ದಾರೆ.
“ಜೆಡಿ-ಎಸ್ ಮತ್ತು ಕಾಂಗ್ರೆಸ್ ನ 15 ಕ್ಕೂ ಹೆಚ್ಚು ಶಾಸಕರು ರಾಜೀನಾಮೆ ನೀಡಿರುವುದರಿಂದ ನಾನು ತಕ್ಷಣವೇ ರಾಜೀನಾಮೆ ನೀಡುವಂತೆ ಕುಮಾರಸ್ವಾಮಿಗೆ ಸಲಹೆ ನೀಡುತ್ತೇನೆ. ಇಬ್ಬರು ಪಕ್ಷೇತರ ಶಾಸಕರು ರಾಜೀನಾಮೆ ನೀಡಿ ರಾಜ್ಯಪಾಲರನ್ನು ಭೇಟಿ ಮಾಡಿ ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸುವುದಾಗಿ ಘೋಷಿಸಿದರು. ಆದ್ದರಿಂದ ನೀವು (ಕುಮಾರಸ್ವಾಮಿ) ಬಹುಮತವನ್ನು ಕಳೆದುಕೊಂಡಿದೀರಿ, “ಯಡಿಯೂರಪ್ಪ ಬೆಂಗಳೂರಿನಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಕುಮಾರಸ್ವಾಮಿ ಅವರು ಶುಕ್ರವಾರ ವಿಧಾನಸಭೆಯ ಅಧಿವೇಶನದಲ್ಲಿ ಸದನದಲ್ಲಿ ವಿಶ್ವಾಸ ಮತ ಯಾಚನೆಗೆ ಅವಕಾಶ ನೀಡುವಂತೆ ಸ್ಪೀಕರ್ ಕೆ ಆರ್ ರಮೇಶ್ ಕುಮಾರ್ ಅವರ ಅನುಮತಿ ಕೋರಿದ್ದರು.
ಕಳೆದ ವರ್ಷ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಒಂದಿಲ್ಲೊಂದು ಭಿನ್ನಮತವು ಸಮ್ಮಿಶ್ರ ಸರ್ಕಾರವನ್ನು ಕಾಡುತ್ತಿದೆ.ಈಗ 16 ಶಾಸಕರು – ಕಾಂಗ್ರೆಸ್ ನ 13 ಮತ್ತು ಜೆಡಿ-ಎಸ್ ನ ಮೂವರು ತಮ್ಮ ವಿಧಾನಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದರೊಂದಿಗೆ ಗಂಭೀರ ಬಿಕ್ಕಟ್ಟನ್ನು ಎದುರಿಸುತ್ತಿದೆ.
ರಂಗೇರಿದ ಅಧಿವೇಶನ
ಜೆಡಿಎಸ್ – ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳಲು ದೋಸ್ತಿ ನಾಯಕರು ಕೊನೆ ಘಳಿಗೆಯ ಪ್ರಯತ್ನಗಳಲ್ಲಿ ನಿರತವಾಗಿದ್ದು, ಮತ್ತೊಂದೆಡೆ ಬಿಜೆಪಿ ಪಾಳಯದಲ್ಲಿ ಸರ್ಕಾರ ರಚಿಸುವ ಕಾರ್ಯತಂತ್ರಗಳು ರೂಪುಗೊಳ್ಳುತ್ತಿವೆ.
ಮೈತ್ರಿ ಸರ್ಕಾರದ ವಿರುದ್ಧ ಸಿಡಿದೆದ್ದು 16 ಶಾಸಕರು ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದ್ದು, ರಾಜೀನಾಮೆ ಅಂಗೀಕಾರ, ವಿಧಾನಸಭಾ ಸದಸ್ಯತ್ವದಿಂದ ಅನರ್ಹಗೊಳಿಸುವ ವಿಚಾರದಲ್ಲಿ ಮಂಗಳವಾರದವರೆಗೆ ಯಥಾಸ್ಥಿತಿ ಕಾಪಾಡುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿರುವ ಬೆನ್ನಲ್ಲೇ ಅತೃಪ್ತರನ್ನು ಮನವೊಲಿಸುವ ಮೈತ್ರಿ ನಾಯಕರ ಪ್ರಯತ್ನ ಸಫಲವಾಗಿಲ್ಲ. ಮುಖ್ಯಮಂತ್ರಿ ಎಚ್ ಡಿ ಕುಮಾರ ಸ್ವಾಮಿ ಮತ್ತು ಜಲ ಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್ ಸರ್ಕಾರ ಉಳಿಸಿಕೊಳ್ಳಲು ಜೋಡೆತ್ತುಗಳಂತೆ ಎಡೆಬಿಡದ ಕಸರತ್ತಿನಲ್ಲಿ ತೊಡಗಿದ್ದಾರೆ.
ಎಂ.ಟಿ.ಬಿ. ನಾಗರಾಜ್ ಕೈ ಕೊಟ್ಟ ನಂತರ ಹೆಬ್ಬಾಳದ ಬಳಿ ಆಸ್ಪತ್ರೆಗೆ ದಾಖಲಾಗಿರುವ ಕಾಂಗ್ರೆಸ್ ನ ಶಾಸಕ ನಾಗೇಂದ್ರ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರುತ್ತಾರೆ ಎನ್ನುವ ಸುದ್ದಿ ಹಬ್ಬಿದ್ದು, ಹೀಗಾಗಿ ಅವರನ್ನು ಕುಮಾರ ಸ್ವಾಮಿ, ಶಿವಕುಮಾರ್ ಭೇಟಿ ಮಾಡಿ ಚರ್ಚಿಸಿದರು. ಮೈತ್ರಿ ಸರ್ಕಾರಕ್ಕೆ ಬೆಂಬಲ ನೀಡಬೇಕು. ಕಾಂಗ್ರೆಸ್ ತೊರೆಯಬಾರದು ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ.
Comments are closed.