
ಬೆಂಗಳೂರು (ಜುಲೈ 10) : ಕಾಂಗ್ರೆಸ್ ಶಾಸಕ ಸುಧಾಕರ್ಗೂ ಬಿಜೆಪಿಗೂ ಏನು ಸಂಬಂಧ? ಎಂದು ಮಾಜಿ ಸಿಎಂ ಸಿದ್ದರಾಮಯ್ಯನವರು ಪ್ರಶ್ನಿಸಿದ್ದಾರೆ. ಇದೇ ವೇಳೆ ಸುಧಾಕರ್ನನ್ನು ಸಮಾಧಾನ ಮಾಡಲಿಕ್ಕಾಗಿ ನಮ್ಮ ಶಾಸಕರು ಕರೆದುಕೊಂಡು ಬಂದಿದ್ಧಾರೆ. ಇಲ್ಲಿ ಯಾರು ಸುಧಾಕರ್ ಮೇಲೆ ಗೂಂಡಾಗಿರಿ ಮಾಡಿಲ್ಲ. ಗೂಂಡಾಗಿರಿ ಮಾಡುತ್ತಿರುವುದು ಬಿಜೆಪಿಯೇ ಹೊರತು, ಕಾಂಗ್ರೆಸ್ ಅಲ್ಲ ಎಂದು ಕಿಡಿಕಾರಿದ್ಧಾರೆ.
ಸುಧಾಕರ್ ಬಿಜೆಪಿ ಶಾಸಕರಲ್ಲ. ಅವರು ರಾಜೀನಾಮೆ ನೀಡಿದ್ಧಾರೆಯೇ ಹೊರತು, ಇನ್ನೂ ಅಂಗೀಕಾರವಾಗಿಲ್ಲ. ಸ್ಪೀಕರ್ ರಾಜೀನಾಮೆ ಅಂಗೀಕಾರ ಮಾಡುವತನಕ ಸುಧಾಕರ್ ಕಾಂಗ್ರೆಸ್ ಶಾಸಕರೇ ಆಗಿರುತ್ತಾರೆ. ಬಿಜೆಪಿ ಶಾಸಕರು ರೌಡಿಗಳು. ಅವರ ವರ್ತನೆಯನ್ನು ನಾನು ಖಂಡಿಸುತ್ತೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕುಟುಕಿದ್ದಾರೆ.
ಕಾಂಗ್ರೆಸ್-ಜೆಡಿಎಸ್ ನಾಯಕರ ರಾಜೀನಾಮೆ ಹಿಂದೆ ಬಿಜೆಪಿ ಕೈವಾಡ ಇದೆ. ಹಣದ ಆಮೀಚ ಒಟ್ಟುವ ಮೂಲಕ ಬೆದರಿಕೆ ಹಾಕಿ ಕುದುರೆ ವ್ಯಾಪರ ಮಾಡುತ್ತಿದ್ದಾರೆ. ಐಟಿ ಮತ್ತು ಇಡಿ ದಾಳಿ ನಡೆಸುತ್ತೇವೆ ಎಂದು ಶಾಸಕರನ್ನು ಖರೀದಿಸಿದ್ಧಾರೆ. ಇದು ಬಿಜೆಪಿಯ ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದೆ. ನಾವು ಈ ಗೂಂಡಾಗಳಿಗೆ ಹೆದರುವುದಿಲ್ಲ. ಈಗಾಗಲೇ ನಾವು ಸುಧಾಕರ್ ಮನವೊಲಿಕೆ ಮಾಡಿದ್ದು, ವೈಯಕ್ತಿ ಕಾರಣದಿಂದಾಗಿ ರಾಜೀನಾಮೆ ನೀಡಿದ್ದೇನೆ ಎಂದಿದ್ದಾರೆ.
ಕಾಂಗ್ರೆಸ್ ಮುಕ್ತ ಕರ್ನಾಟಕ ಸಾಧ್ಯವಿಲ್ಲ. ಅದು ಅವರ ಮೂರ್ಖತನವಷ್ಟೇ. ನಾವ್ಯಾರೂ ಸುಧಾಕರ್ ಅವರನ್ನು ಒತ್ತಾಯಪೂರ್ವಕವಾಗಿ ಕರೆದೊಯ್ದಿಲ್ಲ. ಅವರು ನಮ್ಮ ಸ್ನೇಹಿತರು ಮತ್ತು ಹಿತೈಷಿಗಳು. ಎಲ್ಲದಕ್ಕೂ ಮಿಗಿಲಾಗಿ ಕಾಂಗ್ರೆಸ್ ಶಾಸಕರು. ನಾವು ಅವರ ಪತ್ನಿ ಜೊತೆಗೆ ಮಾತನಾಡಿದ್ದೇವೆ. ನಮ್ಮ ಶಾಸಕರನ್ನು ನಾವು ರಕ್ಷಿಸುತ್ತೇವೆ. ರಾಜೀನಾಮೆ ನೀಡಿದವರೆಲ್ಲರೂ ನಮ್ಮ ಆಪ್ತರು. ಬಿಜೆಪಿ ಒತ್ತಡದಿಂದ ರಾಜೀನಾಮೆ ನೀಡುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ ಮಾಜಿ ಮುಖ್ಯಮಂತ್ರಿಗಳು.
Comments are closed.