ಕರ್ನಾಟಕ

ಕನ್ನಡತಿ ಹಾಗೂ ಪರಿಸರ ತಜ್ಞೆ ಕೃತಿ ಕಾರಂತ್ ಗೆ ಅಂತರಾಷ್ಟ್ರೀಯ ಎಂಟರ್ಪ್ರೈಸ್ ರೋಲೆಕ್ಸ್ ಪ್ರಶಸ್ತಿ

Pinterest LinkedIn Tumblr


ನವದೆಹಲಿ: ವನ್ಯಜೀವಿ- ಮಾನವನ ನಡುವಿನ ಸಂಘರ್ಷಕ್ಕೆ ಮುಕ್ತಿ ನೀಡಿದ ಕನ್ನಡತಿ ಹಾಗೂ ಪರಿಸರ ತಜ್ಞೆ ಡಾ.ಕೃತಿ ಕಾರಂತ್ ಗೆ ಈಗ ಪ್ರತಿಷ್ಠಿತ 2019 ರ ಎಂಟರ್ಪ್ರೈಸ್ ರೋಲೆಕ್ಸ್ ಪ್ರಶಸ್ತಿ ದೊರೆತಿದೆ. ಸುಮಾರು 9 ತಿಂಗಳ ಸುದೀರ್ಘ ಪ್ರಕ್ರಿಯೆ ಮೂಲಕ ಅಂತಿಮ 10 ಜನರ ಪಟ್ಟಿಯನ್ನು ಸಿದ್ದಪಡಿಸಿ ಅಂತಿಮವಾಗಿ ಜಗತ್ತಿನಾದ್ಯಂತ ಆನ್ಲೈನ್ ಮತ ಚಲಾಯಿಸುವುದರ ಮೂಲಕ ಐವರು ಪ್ರಶಸ್ತಿ ವಿಜೇತರನ್ನು ಆಯ್ಕೆ ಮಾಡಲಾಗಿದೆ. ಈ ರೊಲೆಕ್ಸ್ ಪ್ರಶಸ್ತಿ ಒಟ್ಟು 200,000 ಸ್ವಿಸ್ ಫ್ರಾಂಕ್ (1.5 ಕೋಟಿಗೆ ಸಮ) ಮೌಲ್ಯವನ್ನು ಹೊಂದಿದೆ.

ವಿಶೇಷವೆಂದರೆ 1976 ರಲ್ಲಿ ಈ ಪ್ರಶಸ್ತಿಯನ್ನು ಮೊದಲ ವಾಟರ್ ಪ್ರೂಫ್ ವಾಚ್ ರೋಲೆಕ್ಸ್ ಒಸ್ಟರ್ 50 ವರ್ಷದ ಸಂಭ್ರಮಾಚರಣೆ ಸಂದರ್ಭದಲ್ಲಿ ಪ್ರಾರಂಭಿಸಲಾಯಿತು. ಸುಮಾರು 140 ಜನರಿಗೆ ಇದುವರೆಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ.ಅದರಲ್ಲಿ 10 ಭಾರತೀಯರು ಈ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಈಗ ಕೃತಿ ಕಾರಂತ್ ಅವರು ಈ ಪ್ರಶಸ್ತಿ ಪಡೆದ ಮೂರನೇ ಭಾರತೀಯ ಮಹಿಳೆ ಎನ್ನುವ ಖ್ಯಾತಿಗೆ ಪಾತ್ರರಾಗಿದ್ದಾರೆ.

ವನ್ಯಜೀವಿ ಹಾಗೂ ಮಾನವ ಸಂಘರ್ಷಕ್ಕೆ ಪರಿಹಾರ ಕಂಡು ಹಿಡಿದ ಕೃತಿ ಕಾರಂತ್ :

ಕೃತಿ ಕಾರಂತ್ ಅವರಿಗೆ ಬಾಲ್ಯದಿಂದಲೇ ಪರಿಸರ ಹಾಗೂ ವನ್ಯಜೀವಿ ಸಂರಕ್ಷಣೆ ಕುರಿತಾದ ಕಳಕಳಿ ಬಂದಿದೆ. ಅಜ್ಜ ಜ್ಞಾನಪೀಠ ಪ್ರಶಸ್ತಿ ವಿಜೇತ, ಪರಿಸರ ಹೋರಾಟಗಾರ, ಯಕ್ಷಗಾನ ಕಲಾವಿದ ಹೀಗೆ ಹಲವಾರು ಹಿರಿಮೆಗಳನ್ನು ಹೊಂದಿರುವ ಶಿವರಾಂ ಕಾರಂತ, ಅದೇ ರೀತಿ ತಂದೆ ಉಲ್ಲಾಸ್ ಕಾರಂತ್ ಕೂಡ ವನ್ಯಜೀವಿ ತಜ್ಞರು, ಹೀಗೆ ಮನೆಯಿಂದಲೇ ಪರಿಸರ ಪ್ರಜ್ಞೆಯನ್ನು ಅಳವಡಿಸಿಕೊಂಡ ಕೃತಿ ಕಾರಂತ್ ಮುಂದೆ ಅದೇ ಕ್ಷೇತ್ರವನ್ನೇ ಅಧ್ಯಯನ ವಿಷಯವನ್ನಾಗಿ ಆರಿಸಿಕೊಂಡರು. ಅದರ ಭಾಗವಾಗಿ ಫ್ಲೋರಿಡಾ ವಿವಿಯಿಂದ ಪರಿಸರ ವಿಜ್ಞಾನದಲ್ಲಿ ಪದವಿ, ಯೇಲ್ ವಿವಿಯಿಂದ ಸ್ನಾತ್ತಕೋತ್ತರ ಪದವಿ ಹಾಗೂ ಡ್ಯೂಕ್ ವಿವಿಯಿಂದ ಪರಿಸರ ವಿಜ್ಞಾನದಲ್ಲಿ ಪಿಎಚ್ಡಿಯನ್ನು ಪಡೆದರು.

ಅರಣ್ಯ ಪ್ರದೇಶಗಳಿಗೆ ವಿಸ್ತರಿಸುತ್ತಿರುವ ಮಾನವನ ಅಸ್ತಿತ್ವ ಈಗ ವನ್ಯಜೀವಿ ಹಾಗೂ ಮಾನವನ ನಡುವಿನ ಸಂಘರ್ಷಕ್ಕೆ ಕಾರಣವಾಗಿದೆ.ಈ ವಿಷಯ ಈಗ ಜಾಗತಿಕವಾಗಿ ಪ್ರಮುಖ ಸಮಸ್ಯೆಯಾಗಿ ಪರಿಗಣಿಸಿದೆ.ಈ ಹಿನ್ನಲೆಯಲ್ಲಿ ಇದಕ್ಕೆ ಪರಿಹಾರ ಕಂಡುಕೊಳ್ಳುವುದು ಕೂಡ ಅಷ್ಟೇ ಅಗತ್ಯವಾಗಿದೆ. ಈ ಹಿನ್ನಲೆಯಲ್ಲಿ ಕರ್ನಾಟಕದ ಪ್ರಮುಖ ಅಭಿಯಾರಣ್ಯಗಳಾದ ಬಂಡೀಪುರ ಹಾಗೂ ನಾಗರಹೊಳೆಯಲ್ಲಿ ಈ ಸಮಸ್ಯೆ ಅಧಿಕವಿದೆ. ಆದ್ದರಿಂದ ಈ ಪ್ರದೇಶವನ್ನು ಪ್ರಾಯೋಗಿಕ ಕಾರ್ಯದ ಭಾಗವಾಗಿ ಆಯ್ದುಕೊಂಡ ಕೃತಿ ಕಾರಂತ್ 2015 ರಲ್ಲಿ ವೈಲ್ಡ್ ಸೇವೆಯನ್ನು ಪ್ರಾರಂಭಿಸಿದರು. ಅದರ ಭಾಗವಾಗಿ ಈಗ ಬಂಡಿಪುರ ಮತ್ತು ನಾಗರಹೊಳೆ ಅಭಿಯಾರಣ್ಯ ಭಾಗದಲ್ಲಿ ವನ್ಯಜೀವಿ-ಮಾನವ ನಡುವಿನ ಸಂಘರ್ಷ ಕೇಂದ್ರವನ್ನು ಸುಮಾರು 600 ಗ್ರಾಮಗಳಲ್ಲಿ ಪ್ರಾರಂಭಿಸಿದ್ದಾರೆ. ಈಗ ಅದನ್ನು ಅವರು 1000 ಗ್ರಾಮಗಳಿಗೆ ವಿಸ್ತರಿಸುವ ಗುರಿಯನ್ನು ಹಮ್ಮಿಕೊಂಡಿದ್ದಾರೆ.

ಪರಿಸರ ಪ್ರಜ್ಞೆ ಮೂಡಿಸುವಲ್ಲಿ ವೈಲ್ಡ್ ಸೇವೆ, ವೈಲ್ಡ್ ಶಾಲೆಯ ಪಾತ್ರ :

ಈ ಭಾಗದಲ್ಲಿ ವನ್ಯ ಜೀವಿ-ಮಾನವ ಸಂಘರ್ಷದ ವಿಚಾರವಾಗಿ ಅರಿವು ಮೂಡಿಸುವ ನಿಟ್ಟಿನಲ್ಲಿ ವೈಲ್ಡ್ ಸೇವೆಯ ಜೊತೆಗೆ 300 ವೈಲ್ಡ್ ಶಾಲೆಗಳನ್ನು ಪ್ರಾರಂಭಿಸುವ ಯೋಜನೆಯನ್ನು ಕೃತಿ ಕಾರಂತ್ ಹೊಂದಿದ್ದಾರೆ. ಈ ಶಾಲೆಗಳ ಮೂಲಕ 20,000 ಮಕ್ಕಳಿಗೆ ಸಂರಕ್ಷಣಾ ಶಿಕ್ಷಣ ಕಾರ್ಯಕ್ರಮಗಳನ್ನು ಕಲಿಸಲಾಗುತ್ತದೆ. ಈ ಯೋಜನೆ ಜಾರಿಗೆ ಬಂದದ್ದೆ ಆದಲ್ಲಿ ಜಗತ್ತಿನಲ್ಲಿ ವನ್ಯಜೀವಿ ಸಮೂಹದ ಹತ್ತಿರ ವಾಸಿಸುವವ ಜನರಿಗೆ ಇಂದೊಂದು ಸಮುದಾಯ-ಆಧಾರಿತ ಸಂರಕ್ಷಣೆಯ ಮಾದರಿ ವಿಧಾನವಾಗಲಿದೆ ಎನ್ನಲಾಗುತ್ತದೆ. ಈಗ ಇಂತಹ ಮಹತ್ವದ ಕಾರ್ಯಗಳನ್ನು ಈ ಭಾಗದಲ್ಲಿ ಹಲವಾರು ವರ್ಷಗಳಿಂದ ಮಾಡುತ್ತಾ ಬಂದಿರುವ ಕೃತಿ ಕಾರಂತ್ ಅವರ ಪರಿಸರ ವನ್ಯಜೀವಿ ರಕ್ಷಣೆಗೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ರೋಲೆಕ್ಸ್ 2019 ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

Comments are closed.