ಅಂತರಾಷ್ಟ್ರೀಯ

ಭೂಗತ ಪಾತಕಿ ರವಿ ಪೂಜಾರಿ ಪರಾರಿ?

Pinterest LinkedIn Tumblr


ಬೆಂಗಳೂರು: ನಕಲಿ ಪಾಸ್‍ಪೋರ್ಟ್ ಆರೋಪದಡಿ ಪಶ್ಚಿಮ ಆಫ್ರಿಕಾದ ಸೆನೆಗಲ್‍ನಲ್ಲಿ 4 ತಿಂಗಳ ಹಿಂದೆ ಬಂಧನಕ್ಕೊಳಗಾಗಿದ್ದ ಭೂಗತ ಪಾತಕಿ ರವಿ ಪೂಜಾರಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ನ್ಯಾಯಾಲಯದಿಂದ ಜಾಮೀನು ಪಡೆದಿದ್ದ ರವಿ ಪೂಜಾರಿ ಪರಾರಿಯಾಗಿದ್ಧಾನೆ ಎನ್ನಲಾಗಿದೆ. ಮತ್ತೊಂದೆಡೆ ಆತ ಜೈಲಿನಿಂದಲೇ ತಪ್ಪಿಸಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ. ಪೂಜಾರಿ ಜೈಲಿನಿಂದಲೇ ನೇರವಾಗಿ ಪರಾರಿಯಾಗಿದ್ದಾನೋ ಅಥವಾ ಸೆನೆಗಲ್​​ನಿಂದ ಪರಾರಿಯಾಗಿದ್ದಾನೋ ಎನ್ನುವುದು ಖಚಿತವಾಗಿಲ್ಲ. ಆದರೆ, ರವಿ ಪೂಜಾರಿ ಪರಾರಿಯಾಗಿರುವುದರ ಬಗ್ಗೆ ಮಾತ್ರ ಸೆನೆಗಲ್ ಪತ್ರಿಕೆಗಳು ವರದಿ ಮಾಡಿವೆ.

ಈ ಕುರಿತು ಪ್ರತಿಕ್ರಿಯಿಸಿರುವ ಕರ್ನಾಟಕ ಪೊಲೀಸರು, ರವಿ ಪೂಜಾರಿ ಅಲ್ಲಿಂದ ಬೇರೆ ದೇಶಕ್ಕೆ ಹೋಗಿರಬಹುದು. ಆದರೆ, ಇಲ್ಲಿಯವರೆಗೂ ಈ ಭೂಗತ ಪಾತಕಿ ಸೆನೆಗಲ್‍ನಿಂದ ಪರಾರಿಯಾಗಿದ್ದಾನೆ ಎಂದು ಅಧಿಕೃತವಾಗಿ ಅಲ್ಲಿನ ಸರ್ಕಾರ ನಮಗೆ ಮಾಹಿತಿ ನೀಡಿಲ್ಲ ಎಂದಿದ್ದಾರೆ.

ರವಿ ಪೂಜಾರಿಯನ್ನು ಭಾರತಕ್ಕೆ ಕರೆತರಲು ಬೆಂಗಳೂರು, ಮುಂಬೈ ಪೊಲೀಸರು ಕಳೆದ 3 ತಿಂಗಳಿಂದ ಸೆನೆಗಲ್‍ನಲ್ಲಿ ಭಾರೀ ಪ್ರಯತ್ನ ನಡೆಸಿದ್ದರು. ಆದರೀಗ ಈತ ಅಲ್ಲಿಂದಲೇ ಪರಾರಿಯಾಗಿದ್ದು, ಕಾನೂನು ಹೋರಾಟದಡಿ ಗಡಿಪಾರು ಮಾಡಬೇಕೆಂಬ ಭಾರತದ ಪೊಲೀಸರ ಪ್ರಯತ್ನಕ್ಕೆ ತಣ್ಣೀರು ಬಿದ್ದಿದೆ.

ಇನ್ನು ಆತನ ವಿರುದ್ಧ 200ಕ್ಕೂ ಹೆಚ್ಚು ಕೇಸುಗಳು ದಾಖಲಾಗಿವೆ. ಈ ಪ್ರಕರಣಗಳ ಸಾಕ್ಷ್ಯಾಧಾರಗಳನ್ನು ಫ್ರೆಂಚ್ ಭಾಷೆಗೆ ಅನುವಾದ ಮಾಡಿ ಅಲ್ಲಿನ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಇನ್ನೇನು ವಿಚಾರಣೆ ಮುಗಿಯುತ್ತಿದ್ದಂತೆಯೇ ಭಾರತಕ್ಕೆ ಹಸ್ತಾಂತರ ಆಗುವ ನಿರೀಕ್ಷೆ ಇತ್ತು. ಈ ಮಧ್ಯೆ ಸೆನೆಗಲ್​ನಿಂದ ಪರಾರಿಯಾಗಿದ್ದಾನೆ ಎಂದು ಪತ್ರಿಕೆಗಳು ವರದಿ ಮಾಡಿದ್ದು, ಭಾರತ ಪೊಲೀಸರಿಗೆ ಹಿನ್ನಡೆಯಾಗಿದೆ.

Comments are closed.