ಬೆಂಗಳೂರು; ಕನ್ನಡದ ಖ್ಯಾತ ಸಾಹಿತಿ, ನಾಟಕಕಾರ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಲೇಖಕ ಗಿರೀಶ್ ಕಾರ್ನಾಡ್ ಇಂದು ದೈವಾದೀನರಾಗಿದ್ದಾರೆ. ಆದರೆ, ಯು.ಆರ್. ಅನಂತಮೂರ್ತಿ ಸಾವನ್ನಪ್ಪಿದಾಗ ಪಠಾಕಿ ಸಿಡಿಸಿ ಸಂಭ್ರಮಿಸಿದ ಅದೇ ಮನಸ್ಥಿತಿಗಳು ಇಂದು ಗಿರೀಶ್ ಕಾರ್ನಾಡ್ ಅವರ ಸಾವನ್ನೂ ಸಂಭ್ರಮಿಸುತ್ತಿವೆ. ಇಂತಹ ಹೀನ ಕೃತ್ಯಗಳಿಗೆ ಸಾಮಾಜಿಕ ಜಾಲತಾಣಗಳು ವೇದಿಕೆಯಾಗಿರುವುದು ನಿಜಕ್ಕೂ ವಿಷಾಧನೀಯ ಸಂಗತಿ.
ವ್ಯಕ್ತಿ ಯಾರೇ ಆಗಿರಲಿ ಅವರ ಸಾವನ್ನು ಸಂಭ್ರಮಿಸುವುದು ಪೈಶಾಚಿಕ ಮನಸ್ಥಿತಿ. ಆದರೆ, ಇಂದು ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲೆಡೆ ಅಂತಹ ಮನಸ್ಥಿತಿಗಳೇ ತಾಂಡವವಾಡುತ್ತಿವೆ. ಕೆಲವರು ಕಾರ್ನಾಡ್ ಸಾವನ್ನಪ್ಪಿರುವುದು ಒಳ್ಳೆಯ ಸುದ್ದಿ ಎಂದರೆ, ಮತ್ತೆ ಕೆಲವರು ಅವರ ವಿರುದ್ಧ ಅಸಂಬದ್ಧ ಹಾಗೂ ಅವಾಚ್ಯ ಪದಗಳನ್ನು ಬಳಕೆ ಮಾಡುವ ಮೂಲಕ ಕಾರ್ನಾಡ್ ಅವರನ್ನು ನಿಂದಿಸಿದ್ದಾರೆ. ಅಲ್ಲದೆ ಅವರ ಸಾವನ್ನು ಸಂಭ್ರಮಿಸಿದ್ದಾರೆ.
ಜ್ಞಾನಪೀಠ ಪುರಸ್ಕೃತ ಸಾಹಿತಿ ಹಾಗೂ ವಿಚಾರವಾದಿ ಯು.ಆರ್. ಅನಂತಮೂರ್ತಿ ಸಾವನ್ನಪ್ಪಿದ್ದ ಸಂದರ್ಭದಲ್ಲೂ ಈ ಗುಂಪು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಸದ್ದು ಮಾಡಿತ್ತು. ಸಂಭ್ರಮಾಚರಣೆಗೆ ಇಳಿದಿತ್ತು. ಆದರೆ, ಆಗ ಪೊಲೀಸ್ ಇಲಾಖೆ ಈ ಕುರಿತು ಕ್ರಮ ಜರುಗಿಸಬೇಕು ಎಂಬ ಕೂಗು ಕೇಳಿಬಂದರೂ ಇಲಾಖೆಯಾಗಲಿ ಸರ್ಕಾರವಾಗಲಿ ಈ ಕುರಿತು ಗಂಭೀರವಾಗಿ ಚಿಂತಿಸಿರಲಿಲ್ಲ. ಪರಿಣಾಮ ಸಾವನ್ನು ಗೇಲಿಮಾಡಿ ಸಂಭ್ರಮಿಸುತ್ತಿರುವವರ ಸಂಖ್ಯೆ ಅಧಿಕವಾಗುತ್ತಲೇ.
ಅಂದು ಅನಂತಮೂರ್ತಿಯವರ ಸಾವನ್ನು ಸಂಭ್ರಮಿಸಿದ ಅದೇ ಜನ ಇಂದು ಗಿರೀಶ್ ಕಾರ್ನಾಡ್ ಅವರ ಸಾವನ್ನೂ ಸಂಭ್ರಮಿಸುತ್ತಿದ್ದಾರೆ. ಇಂತಹ ಜನರ ವಿರುದ್ಧ ಕ್ರಮ ಜರುಗಿಸಬೇಕು ಎಂಬ ಕೂಗು ಮತ್ತೆ ಕೇಳಿ ಬರುತ್ತಿದೆ. ಇನ್ನಾದರೂ ಪೊಲೀಸ್ ಇಲಾಖೆ ಹಾಗೂ ಆಡಳಿತರೂಢ ಸರ್ಕಾರ ಸಾವನ್ನು ಸಂಭ್ರಮಿಸುವ ಇಂತಹ ಜನರ ವಿರುದ್ಧ ಕ್ರಮ ಜರುಗಿಸುತ್ತದೆಯೇ ಎಂದು ಕಾದುನೋಡಬೇಕಿದೆ.