ಬೆಂಗಳೂರು: ನಿಮ್ಮ ಮನೆಗೆ ಕುಡಿಯುವ ನೀರಿನ ಕ್ಯಾನ್ ಹಾಕಿಸುತ್ತೀರಾ? 20 ಲೀಟರ್ನ ಕ್ಯಾನ್ಗಳಲ್ಲಿ ಸಿಗುವ ನೀರು ನಿಜಕ್ಕೂ ಕುಡಿಯಲು ಯೋಗ್ಯವಾ? ಹೀಗೊಂದು ಪ್ರಶ್ನೆ ಎಲ್ಲರನ್ನು ಕಾಡಿದೆ. ಕಳೆದ ಒಂದು ವರ್ಷದಲ್ಲಿ ಸರ್ಕಾರಿ ಪ್ರಯೋಗಾಲಯದಲ್ಲಿ ಶುದ್ಧತೆಯ ಪರೀಕ್ಷೆ ಮಾಡಿಸಿರುವುದು ಕೇವಲ ಒಂದು ಖಾಸಗಿ ಕಂಪೆನಿ. ಉಳಿದವರು ಪೂರೈಸುವ ನೀರು ನಿಜವಾಗಲೂ ಶುದ್ಧವಾ ಎನ್ನುವುದನ್ನು ಪರೀಕ್ಷೆ ಮಾಡುವವರೇ ಇಲ್ಲ.
ಕುಡಿಯುವ ನೀರಿನ ಶುದ್ಧತೆ ಇಷ್ಟೇ ಇರಬೇಕು ಎನ್ನುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಭಾರತೀಯ ಆಹಾರ ಸುರಕ್ಷತಾ ಇಲಾಖೆಗಳು ಸಾಕಷ್ಟು ನಿಯಮಗಳನ್ನು ವಿಧಿಸಿವೆ. ಯಾರೇ ಆದರೂ ನೀರನ್ನು ಕುಡಿಯಲು ಬಳಸುವ ಮುನ್ನ ಅದರ ಶುದ್ಧತೆಯ ಬಗ್ಗೆ ಪರೀಕ್ಷೆ ಮಾಡಿಸಲೇಬೇಕು. ಲೆಕ್ಕವಿಲ್ಲದಷ್ಟು ನೀರಿನ ಕ್ಯಾನ್ ಪೂರೈಸುವ ಸಂಸ್ಥೆಗಳು ಬೆಂಗಳೂರಿನಲ್ಲಿದ್ದರೂ ಕಳೆದ ಒಂದು ವರ್ಷದಲ್ಲಿ ಒಂದು ಸಂಸ್ಥೆ ಮಾತ್ರ ತಾನು ಮಾರಾಟ ಮಾಡುವ ಕುಡಿಯುವ ನೀರಿನ ಪರೀಕ್ಷೆ ಮಾಡಿಸಿದೆ ಎನ್ನುತ್ತವೆ ಸರ್ಕಾರಿ ಪ್ರಯೋಗಾಲಯದ ಮೂಲಗಳು. ಈ ಸರ್ಕಾರಿ ಪ್ರಯೋಗಾಲಯ ಇಡೀ ರಾಜ್ಯದಲ್ಲೇ ಅತ್ಯುನ್ನತ ಮಟ್ಟದ್ದಾಗಿದ್ದು ಕುಡಿಯುವ ನೀರಿನ ಪರೀಕ್ಷೆಗೆ ಸಮರ್ಪಕ ವರದಿ ನೀಡುತ್ತದೆ.
ಕುಡಿಯುವ ನೀರಿನ ವ್ಯಾಪಾರ ಬೆಂಗಳೂರಿನ ಮಟ್ಟಿಗೆ ಬಹುಕೋಟಿ ವಹಿವಾಟು. ನಗರದ ಹೊರವಲಯದಲ್ಲಿರೋ ಅನೇಕ ಪ್ರದೇಶಗಳಲ್ಲಿ ಕಾವೇರಿ ನೀರು ಬರುವುದಿಲ್ಲ. ಹಾಗಾಗಿ ಅವರೆಲ್ಲಾ ನಿರಂತರವಾಗಿ ಕ್ಯಾನ್ ನೀರನ್ನು ಅವಲಂಬಿಸಿರುತ್ತಾರೆ. ಕುಡಿಯುವ ನೀರನ್ನು ಮಾರಾಟ ಮಾಡುವ ಸಂಸ್ಥೆಗಳು ಸಾಮಾನ್ಯವಾಗಿ ಬೋರ್ವೆಲ್ ಮುಂತಾದ ಅಂತರ್ಜಲ ಮೂಲಗಳನ್ನೇ ನಂಬಿಕೊಂಡಿರುತ್ತವೆ.
ನೀರನ್ನು ಮೊದಲು ಆರ್ಒ ಪ್ಲಾಂಟ್ನಲ್ಲಿ ಶುದ್ಧೀಕರಿಸಿ ನಂತರ ಕ್ಯಾನ್ಗಳಿಗೆ ತುಂಬಿಸಬೇಕು. ಹೀಗೆ ಮಾಡಿದಾಗ ಒಟ್ಟಾರೆ 10 ಲೀಟರ್ ನೀರಿನಲ್ಲಿ ಕೇವಲ 1 ಲೀಟರ್ ಮಾತ್ರ ಕುಡಿಯಲು ಯೋಗ್ಯವಾದ ನೀರು ಸಿಗುತ್ತದೆ. ಆದರೂ ಈ ನೀರಿನ ಶುದ್ಧತೆಯ ವಿಚಾರದಲ್ಲಿ ದೊಡ್ಡ ಮಟ್ಟಿಗಿನ ನಿರ್ಲಕ್ಷ್ಯ ಇರುವುದನ್ನು ಐಐಎಸ್ಸಿಯ ವಿಜ್ಞಾನಿಗಳು ತಮ್ಮ ರಿಸರ್ಚ್ನಲ್ಲಿ ತಿಳಿದಿದ್ದಾರೆ.
ಕ್ಯಾನ್ಗಳಲ್ಲಿ ಮನೆಮನೆಗೆ ಸರಬರಾಜಾಗುವ ಕುಡಿಯುವ ನೀರಿನಲ್ಲಿ ಅಗತ್ಯ ಲವಣಾಂಶಗಳು ಇಲ್ಲ ಎನ್ನುವುದರ ಜೊತೆಗೆ ಅನೇಕ ಬಾರಿ ಹಾನಿಕಾರಕ ಕೀಟಾಣುಗಳು ಇರೋದು ಕೂಡಾ ತಮ್ಮ ಗಮನಕ್ಕೆ ಬಂದಿದೆ ಎನ್ನುತ್ತಾರೆ ಐಐಎಸ್ಸಿಯ ವಿಜ್ಞಾನಿ ಪ್ರೊ ಟಿ ವಿ ರಾಮಚಂದ್ರ.
ಕುಡಿಯುವ ನೀರು ಶುದ್ಧತೆಗೆ ಬದ್ಧವಾಗಿಲ್ಲದಿದ್ದರೆ ಕಾನೂನಿನ ಪ್ರಕಾರ ಅದು ಶಿಕ್ಷಾರ್ಹ ಅಪರಾಧ ಎಂದು ಸರ್ಕಾರದ ಅಧಿಕಾರಿಗಳೇ ಒಪ್ಪಿಕೊಳ್ತಾರೆ. ಆದರೆ ಈ ಬಗ್ಗೆ ಸರ್ಪ್ರೈಸ್ ವಿಸಿಟ್ ಮತ್ತು ಪರಿಶೀಲನೆಗಳು, ತೀವ್ರ ನಿಗಾ ವಹಿಸುವ ಅಗತ್ಯ ಬಹಳ ಇದೆ. ಅಂತರ್ಜಲ ಮಟ್ಟದಲ್ಲಿರುವ ನೀರಿನ ಬಗ್ಗೆ ನಿಗಾ ವಹಿಸುವ ಸರ್ಕಾರ ಕುಡಿಯುವ ನೀರಿನ ಬಗ್ಗೆ ಬಹಳಷ್ಟು ನಿಯಮಗಳನ್ನು ಕಟ್ಟುನಿಟ್ಟು ಮಾಡುವ ಅವಶ್ಯಕತೆ ಇದೆ.
ಬೆರೆಲ್ಲಾ ವಿಚಾರಗಳಿಗಿಂತ ಅತ್ಯಂತ ಸೂಕ್ಷ್ಮವಾದ ವಿಚಾರ ಅಂದರೆ ಕುಡಿಯುವ ನೀರಿನದ್ದು. ಅದರ ಶುದ್ಧತೆಗೇ ಕಂಟಕ ಬಂದಿರುವುದನ್ನು ನೋಡಿಯೂ ನೋಡದಂತೆ ಸರ್ಕಾರ ಇರೋದು ನಿಜಕ್ಕೂ ಆಘಾತಕಾರಿ ವಿಚಾರ. ಸರಾಗವಾಗಿ ಜನರಿಗೆ ಸರಬರಾಜಾಗುವ ನೀರಿನ ಶುದ್ಧತೆಯನ್ನು ನಿಗ್ರಹಿಸುವ ಕೆಲಸ ಮಾಡದಿದ್ರೆ ಜನರ ಜೀವ ಮತ್ತು ಆರೋಗ್ಯದ ಜೊತೆಗೇ ಹೊಂದಾಣಿಕೆ ಮಾಡಿಕೊಂಡಂತೆ. ಇನ್ನಾದ್ರೂ ಈ ಬಗ್ಗೆ ಸೂಕ್ತ ನಿಯಮ ಮತ್ತು ಕಟ್ಟುನಿಟ್ಟಾದ ಕ್ರಮಗಳನ್ನು ಕೈಗೊಳ್ಳುವಲ್ಲಿ ಸರ್ಕಾರ ಆಸಕ್ತಿ ತೋರಿಸುತ್ತಾ ಎಂಬುದನ್ನು ಕಾದು ನೋಡಬೇಕಿದೆ.