ಬೆಂಗಳೂರು: ರಾಜ್ಯಕ್ಕೆ ಬರಬೇಕಿರುವ 2 ಸಾವಿರ ಕೋಟಿ ನರೇಗಾ ಹಣ ಬಿಡುಗಡೆ ಮಾಡಿಸುವಂತೆ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ನೂತನ ಕೇಂದ್ರ ಮಂತ್ರಿ ಡಿ.ವಿ ಸದಾನಂದಗೌಡ, ಪ್ರಹ್ಲಾದ್ ಜೋಶಿ ಅವರಿಗೆ ಟ್ವಿಟರ್ನಲ್ಲಿ ಮನವಿ ಮಾಡಿಕೊಂಡಿದ್ದಾರೆ.
ರಾಜ್ಯದ ನಾಲ್ವರು ಕೇಂದ್ರದಲ್ಲಿ ಮಂತ್ರಿಗಳಾಗಿದ್ದೇವೆ. ನಾವೆಲ್ಲಾರು ರಾಜ್ಯದ ಅಭಿವೃದ್ಧಿಗಾಗಿ ಶ್ರಮಿಸುತ್ತೇವೆ. ರಾಜ್ಯದ ಜನರು ಮೋದಿ ಅವರನ್ನು ನಂಬಿ ನಮಗೆ ಮತ ನೀಡಿದ್ದಾರೆ. ನಾವು ಅವರಿಗಾಗಿ ಕೆಲಸ ಮಾಡುತ್ತೇವೆ ಜೊತೆಗೆ ದೆಹಲಿಯಲ್ಲಿ ರಾಜ್ಯದ ಮಂತ್ರಿಗಳಿಗಾಗಿ ಒಂದು ಪ್ರತ್ಯಕವಾದ ಕಚೇರಿಯಲ್ಲಿ ಇನ್ನು ಕೆಲವೇ ದಿನಗಳಲ್ಲಿ ತೆರೆದು ನಾವು ಅಲ್ಲಿ ರಾಜ್ಯದ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸಿ ಸಂಸತ್ನಲ್ಲಿ ಅದರ ಬಗ್ಗೆ ಪ್ರಸ್ತಾಪ ಮಾಡಲಿದ್ದೇವೆ ಎಂದು ನೂತನ ಮಂತ್ರಿ ಡಿ.ವಿ ಸದಾನಂದಗೌಡ ಅವರು ಮಾಧ್ಯಮಕ್ಕೆ ತಿಳಿಸಿದ್ದರು.
ಈ ಹೇಳಿಕೆಯನ್ನು ಸ್ವಾಗತಿಸಿರುವ ಹೆಚ್.ಡಿ ಕುಮಾರಸ್ವಾಮಿ ರಾಜ್ಯಕ್ಕೆ ನೀಡಬೇಕಾದ ಅನುದಾನವನ್ನು ಆದಷ್ಟು ಬೇಗ ಬಿಡುಗಡೆ ಮಾಡಿಸಿಕೊಡಿ ಈ ಕುರಿತು ಶೀಘ್ರದಲ್ಲೇ ನಾವು ನಿಮಗೆ ವಿವರ ನೀಡುವೆ ಎಂದು ಟ್ವಿಟರ್ ಮೂಲಕ ಸಿಎಂ ತಿಳಿಸಿದ್ದಾರೆ.