ಕರ್ನಾಟಕ

ಯಡಿಯೂರಪ್ಪಗೆ ಆಪರೇಷನ್ ಮಾಡಲು ಮುಂದಾದ ಬಿಎಲ್​ ​ಸಂತೋಷ್?

Pinterest LinkedIn Tumblr


ಬೆಂಗಳೂರು; ಲೋಕಸಭಾ ಚುನಾವಣಾ ಫಲಿತಾಂಶದ ಮೇಲೆ ರಾಜ್ಯ ಸರ್ಕಾರದ ಹಣೆ ಬರಹ ತೀರ್ಮಾನವಾಗಲಿದೆ. ಮೈತ್ರಿ ಪಕ್ಷಗಳು ಕಡಿಮೆ ಸ್ಥಾನಗಳಲ್ಲಿ ಜಯಗಳಿಸಿದರೆ ಸರ್ಕಾರ ಬೀಳುವುದು ಗ್ಯಾರಂಟಿ ಎಂಬ ಮಾತು ಕಳೆದ ನಾಲ್ಕೈದು ತಿಂಗಳಿನಿಂದ ಚಾಲ್ತಿಯಲ್ಲಿದೆ. ಇದೇ ಕಾರಣಕ್ಕೆ ಫಲಿತಾಂಶ ಹೊರಬೀಳುತ್ತಿದ್ದಂತೆ ಅಪರೇಷನ್ ಕಮಲದ ಮೂಲಕ ಸರ್ಕಾರ ರಚಿಸಿ ಮತ್ತೊಮ್ಮೆ ಸಿಎಂ ಆಗಲು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ತಂತ್ರ ಹೆಣೆಯುತ್ತಲೇ ಇದ್ದಾರೆ. ಆದರೆ, ಪಕ್ಷದೊಳಗೆ ಅವರ ವಿರೋಧಿ ಬಣವೊಂದು ಸದ್ದಿಲ್ಲದೆ ಮತ್ತೊಂದು ಬಗೆಯ ತಂತ್ರ ಹೆಣೆಯುತ್ತಿದ್ದು, ಸ್ವತಃ ಬಿಎಸ್​ವೈಗೆ ಆಘಾತ ನೀಡಲು ಮುಂದಾಗಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್​ ಪಕ್ಷಗಳ ಮೈತ್ರಿ ಸರ್ಕಾರ ಚಾಲ್ತಿಯಲ್ಲಿದ್ದು, ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಹಲವಾರು ಶಾಸಕರಿಗೆ ವೈಮನಸ್ಸಿದೆ. ಅಲ್ಲದೆ ಕೇವಲ 37 ಸ್ಥಾನ ಪಡೆದ ಜೆಡಿಎಸ್ ಪಕ್ಷದ ವ್ಯಕ್ಯಿ ಸಿಎಂ ಆಗಿರುವ ಕುರಿತು ಸಹ ಕಾಂಗ್ರೆಸ್​ ಪಕ್ಷದೊಳಗೊಂದು ಬಣಕ್ಕೆ ಅಸಮಾಧಾನವಿದೆ. ಇದೇ ಕಾರಣಕ್ಕೆ ಈ ಮೈತ್ರಿ ಸರ್ಕಾರ ಹೆಚ್ಚು ಬಾಳಲ್ಲ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

ಇದಕ್ಕೆ ಇಂಬು ನೀಡುವಂತೆ ಕಾಂಗ್ರೆಸ್ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬಣ ಮೈತ್ರಿ ಸರ್ಕಾರದ ವಿರುದ್ಧ ತಿರುಗಿ ಬಿದ್ದಿತ್ತು. ಈ ಹಿಂದೆಯೇ ರಮೇಶ್ ಜಾರಕಿಹೊಳಿ, ಉಮೇಶ್ ಜಾಧವ್ ಒಳಗೊಂಡ ನಾಲ್ಕು ಜನ ಶಾಸಕರ ತಂಡ ಮುಂಬೈನಲ್ಲಿ ಠಿಕಾಣಿ ಹೂಡುವ ಮೂಲಕ ಸರ್ಕಾರಕ್ಕೆ ಬೆದರಿಕೆ ಒಡ್ಡಿದ್ದರು. ಆದರೆ, ಈ ಬಂಡಾಯ ಸಫಲವಾಗಿರಲಿಲ್ಲ.

ಆದರೆ, ಇದೀಗ ಕಾಂಗ್ರೆಸ್ ಪಕ್ಷದ ಶಾಸಕರ ಒಂದು ಬಣ ಲೋಕಸಭಾ ಫಲಿತಾಂಶಕ್ಕಾಗಿ ಕಾಯುತ್ತಿದ್ದು, ರಾಜ್ಯದಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗಳಿಸಿದರೆ , ಕನಿಷ್ಟ 20 ಜನ ಕಾಂಗ್ರೆಸ್ ಶಾಸಕರು ಅಪರೇಷನ್ ಕಮಲಕ್ಕೆ ಬಲಿಯಾಗಲಿದ್ದಾರೆ. ಈ ಮೂಲಕ ಬಿಜೆಪಿ ಮತ್ತೆ ಸರ್ಕಾರ ರಚಿಸಲಿದೆ ಯಡಿಯೂರಪ್ಪ ಮತ್ತೊಮ್ಮೆ ಸಿಎಂ ಆಗಲಿದ್ದಾರೆ ಎಂದೇ ರಾಜ್ಯ ರಾಜಕೀಯ ವಠಾರಗಳಲ್ಲಿ ಮಾತುಗಳು ಚಾಲ್ತಿಯಲ್ಲಿವೆ.

ಯಡಿಯೂರಪ್ಪ ಸಹ ಲೋಕಸಭೆ ಫಲಿತಾಂಶಕ್ಕಾಗಿಯೇ ಕಾಯುತ್ತಿದ್ದು, ಸರ್ಕಾರ ರಚಿಸಲು ಬೇಕಾದ ಎಲ್ಲಾ ತಂತ್ರಗಳನ್ನೂ ಹೂಡುತ್ತಿದ್ದಾರೆ. ಆದರೆ, ಬಿಜೆಪಿಯಲ್ಲೇ ಅವರ ವಿರುದ್ಧ ಮತ್ತೊಂದು ಬಣ ಸದ್ದಿಲ್ಲದೆ ಬೇರೆಯದೇ ತಂತ್ರ ಹೆಣೆಯುತ್ತಿದ್ದು, ಮೇ.23ರ ಫಲಿತಾಂಶದ ನಂತರ ಬಿಜೆಪಿ ಅಧಿಕಾರಕ್ಕೇರಿದರು ಬಿಎಸ್​ವೈ ಸಿಎಂ ಆಗಲಾರರು ಎನ್ನುತ್ತಿದೆ ಪಕ್ಷದ ಚಟುವಟಿಕೆಗಳು.

ಬಿಎಸ್​ವೈ ವಿರುದ್ಧ ಬಂಡಾಯ ಬಣ : 2019ರ ಲೋಕಸಭಾ ಚುನಾವಣೆಯನ್ನು ಯಡಿಯೂರಪ್ಪ ಪಾಲಿಗೆ ಅಕ್ಷರಶಃ ಮಾಡು ಇಲ್ಲವೆ ಮಡಿ ಪ್ರಯತ್ನ ಎನ್ನಲಾಗುತ್ತಿದೆ. ಈ ಚುನಾವಣೆಯಲ್ಲಿ ಬಿಜೆಪಿ ಅಧಿಕ ಸ್ಥಾನ ಗಳಿಸದಿದ್ದರೆ ಬಿಜೆಪಿ ಹಿರಿಯ ನಾಯಕ ಎಲ್​.ಕೆ. ಅಡ್ವಾನಿಯಂತೆ ಬಿಎಸ್​ವೈ ಅವರನ್ನು ಸಹ ತೆರೆಮರೆಗೆ ಸರಿಸಲಿದೆ ಎಂದೇ ಹೇಳಲಾಗುತ್ತಿತ್ತು.

ಆದರೆ, ಇದೀಗ ಚುನಾವಣೋತ್ತರ ಸಮೀಕ್ಷೆಗಳು ಹೊರ ಬೀಳುತ್ತಿದ್ದು ರಾಜ್ಯದಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳಲ್ಲಿ ಜಯ ಗಳಿಸುವುದು ಸ್ಪಷ್ಟವಾಗಿದೆ. ಪರಿಣಾಮ ಬಿಎಸ್​ವೈ ಇನ್ನೊಂದು ಅವಧಿಗೆ ಮುಖ್ಯಮಂತ್ರಿ ಆಗುವ ಕನಸು ಕಾಣುತ್ತಿದ್ದರೆ, ಪಕ್ಷದ ಹಿರಿಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅದಕ್ಕೆ ತಣ್ಣೀರೆರಚಲು ಬೇಕಾದ ಎಲ್ಲಾ ಸಿದ್ಧತೆ ನಡೆಸಿದ್ದಾರೆ.

ಆರ್​ಎಸ್​ಎಸ್​ ಮೂಲದ ಬಿ.ಎಲ್​. ಸಂತೋಷ್​ಗೂ ಸಿಎಂ ಸ್ಥಾನದ ಮೇಲೆ ಕಣ್ಣಿದೆ. ಅಲ್ಲದೆ ಸಮೀಕ್ಷೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗಳಿಸುವುದು ಪಕ್ಕಾ ಆಗುತ್ತಿದ್ದಂತೆ ಸಂತೋಷ್​ ಬಣ ಕಣಕ್ಕಿಳಿದಿದೆ. ಸುಮಾರು 40 ರಿಂದ 45 ಶಾಸಕರ ಜೊತೆಗೆ ಎಲ್ಲಾ ಜಿಲ್ಲೆಗಳ ಸಂಘಟಕರನ್ನೂ ಅಂಡಮಾನ್​ಗೆ ಕರೆದೊಯ್ದಿರುವ ಸಂತೊಷ್ ಮೇ.23ರ ಫಲಿತಾಂಶದ ನಂತರ ಬಿಎಸ್​ವೈ ವಿರುದ್ಧ ಹೊಸ ತಂತ್ರ ಹೆಣೆಯುತ್ತಿದ್ದಾರೆ. ಅಲ್ಲದೆ ಅವರನ್ನು ಮೂಲೆಗುಂಪು ಮಾಡುವ ಹುನ್ನಾರ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಒಂದು ಕಾಲದಲ್ಲಿ ಬಿಎಸ್​ವೈ ಆಪ್ತ ಎನಿಸಿಕೊಂಡಿದ್ದ ಮಾಜಿ ಸಚಿವ ಸಿ.ಟಿ. ರವಿ ಹಾಗೂ ಹಿರಿಯ ನಾಯಕ ಭಾನು ಪ್ರಕಾಶ್ ಸಹ ಸಂತೋಷ್ ಪರ ನಿಂತಿರುವುದು ಬಿಎಸ್​ವೈಗೆ ಭಾರೀ ಮುಖಭಂಗ ಮಾಡಿದಂತಾಗಿದೆ. ಹೀಗಾಗಿ ಮೇ.23ರ ಫಲಿತಾಂಶದ ನಂತರ ಮೈತ್ರಿ ಪಕ್ಷಗಳ ಒಳಗೆ ಯಾವ ರೀತಿಯ ಬೆಳವಣಿಗೆಯಾಗಲಿದೆ ಎಂಬುದಕ್ಕಿಂತ ಬಿಜೆಪಿಯ ಒಳಗೆ ಯಾವ ಬೆಳವಣಿಗೆಯಾಗಲಿದೆ ಎಂಬುದರ ಕುರಿತು ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದಾರೆ.

 

Comments are closed.