ರಾಷ್ಟ್ರೀಯ

ಸೋನಿಯಾ ಭೇಟಿ, ಕಾಂಗ್ರೆಸ್ ಜೊತೆಗಿನ ಮೈತ್ರಿ ಸಾಧ್ಯವಿಲ್ಲ ಎಂದ ಮಾಯಾವತಿ

Pinterest LinkedIn Tumblr


ನವದೆಹಲಿ; ಚುನಾವಣೋತ್ತರ ಸಮೀಕ್ಷೆಗಳ ಹಿನ್ನೆಲೆಯಲ್ಲಿ ಬಿಎಸ್​ಪಿ ಪಕ್ಷದ ಮುಖ್ಯಸ್ಥೆ ಮಾಯಾವತಿ ಸೋಮವಾರ ದೆಹಲಿಯಲ್ಲಿ ಯುಪಿಎ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿತ್ತು. ಆದರೆ, ಮಾಯಾವತಿ ಇದನ್ನು ತಳ್ಳಿ ಹಾಕಿದ್ದು ಸೋನಿಯಾ ಗಾಂಧಿ ಜೊತೆಗೆ ಯಾವುದೇ ಭೇಟಿ ಇಲ್ಲ ಎಂದು ವದಂತಿಗಳನ್ನು ಅಲ್ಲಗೆಳೆದಿದ್ದಾರೆ.

ಸೋಮವಾರ ದೆಹಲಿಯಲ್ಲಿ ಮಾಯಾವತಿಗೆ ಯಾವುದೇ ಕಾರ್ಯಕ್ರಮವಿಲ್ಲ. ಸೋನಿಯಾ ಗಾಂಧಿಯನ್ನು ಭೇಟಿಯಾಗುವುದಿಲ್ಲ. ಬದಲಿಗೆ ಇಡೀ ದಿನ ಅವರು ಲಕ್ನೋದಲ್ಲೇ ಇರಲಿದ್ದಾರೆ ಎಂದು ಬಿಎಸ್​ಪಿ ನಾಯಕ ಸತೀಶ್ ಚಂದ್ರ ಸ್ಪಷ್ಟಪಡಿಸಿದ್ದಾರೆ.

ಕೈಗೂಡದ ಚಂದ್ರಬಾಬು ನಾಯ್ಡು ಶ್ರಮ : ಲೋಕಸಭೆ ಚುನಾವಣೆ ನಂತರ ಎಲ್ಲಾ ಸಮೀಕ್ಷೆಗಳು ಎನ್​ಡಿಎ ಪರವಾಗಿದ್ದು, ಪರಿಣಾಮ ಬಿಎಸ್​ಪಿ, ಕಾಂಗ್ರೆಸ್ ಸೇರಿದಂತೆ ಎಲ್ಲಾ ವಿರೋಧ ಪಕ್ಷಗಳು ಒಟ್ಟಾಗಲಿವೆ ಎನ್ನಲಾಗಿತ್ತು. ಅಲ್ಲದೆ ಕಳೆದ ಕೆಲ ದಿನಗಳಿಂದ ರಾಷ್ಟ್ರ ರಾಜಕಾರಣದಲ್ಲಿ ಸಕ್ರೀಯರಾಗಿರುವ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಶಪಥ ತೊಟ್ಟಂತೆ ವಿವಿಧ ತಂತ್ರಗಳನ್ನು ಹೆಣೆಯುತ್ತಿದ್ದಾರೆ.

ಅದರ ಭಾಗವಾಗಿ ಬಿಎಸ್​ಪಿ ನಾಯಕಿ ಮಾಯಾವತಿ ಹಾಗೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯನ್ನು ಒಂದೇ ಮೈತ್ರಿ ಸಿದ್ದಾಂತಕ್ಕೆ ತರಲು ಸಾಕಷ್ಟು ಶ್ರಮಿಸಿದ್ದರು. ಹೀಗಾಗಿ ಎಲ್ಲಾ ವಿರೋಧ ಪಕ್ಷಗಳ ನಾಯಕರ ಸಭೆ ಕರೆದಿರುವ ಸೋನಿಯಾ ಗಾಂಧಿ ಮಾತಿಗೆ ಬೆಲೆ ಕೊಟ್ಟು ಮಾಯಾವತಿ ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದೇ ಹೇಳಲಾಗಿತ್ತು. ಆದರೆ, ಮಾಯಾವತಿ ಈ ಸಭೆಗೆ ಪಾಲ್ಗೊಳ್ಳುವ ಕುರಿತು ಖಡಾಖಂಡಿತವಾಗಿ ನಿರಾಕರಿಸಿದ್ದು, ಸೋನಿಯಾ ಗಾಂಧಿ ಜೊತೆಗೆ ಯಾವುದೇ ಮಾತುಕತೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರಧಾನಿ ಹುದ್ದೆ ಮೇಲೆ ಕಣ್ಣಿಟ್ಟಿರುವ ಮಾಯಾವತಿ : ಬಿಎಸ್​ಪಿ ಪಕ್ಷದ ಮುಖ್ಯಸ್ಥೆ ಹಾಗೂ ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿಗೂ ಸಹ ಪ್ರಧಾನಿ ಹುದ್ದೆಯ ಮೇಲೆ ಕಣ್ಣಿದೆ. ಇದೇ ಕಾರಣಕ್ಕೆ ಅವರು ಆರಂಭದಿಂದಲೂ ಬಿಜೆಪಿಯಷ್ಟೇ ಕಾಂಗ್ರೆಸ್​ ಜೊತೆಗೂ ಸಮಾನ ಅಂತರ ಕಾಯ್ದುಕೊಂಡಿದ್ದರು.

ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಸಲುವಾಗಿ ಎಲ್ಲಾ ವಿರೋಧ ಪಕ್ಷಗಳು ಚುನಾವಣೆಗೂ ಮುನ್ನವೇ ಮಹಾಮೈತ್ರಿ ಸಾಧಿಸಿಕೊಳ್ಳಲು ಮುಂದಾಗಿದ್ದವು. ಆದರೆ, ಉತ್ತರಪ್ರದೇಶದಲ್ಲಿ ಅಧಿಕ ಸ್ಥಾನ ಗೆಲ್ಲುವ ಸಲುವಾಗಿ ಸಮಾಜವಾದಿ ಪಕ್ಷದ ಅಖಿಲೇಶ್ ಜೊತೆಗೆ ಮೈತ್ರಿ ಸಾಧಿಸಿಕೊಂಡ ಮಾಯಾವತಿ ಪ್ರಜ್ಞಾಪೂರ್ವಕವಾಗಿಯೇ ಮಹಾಘಟಬಂಧನ್​ ನಿಂದ ಕಾಂಗ್ರೆಸ್ ಪಕ್ಷವನ್ನು ದೂರವಿಟ್ಟಿದ್ದರು.

ಇದೀಗ ಚುನಾವಣೋತ್ತರ ಸಮೀಕ್ಷೆಗಳೆಲ್ಲ ಎನ್​ಡಿಎ ಬಹುಮತ ಗಳಿಸಲಿದೆ ಎಂದು ಭವಿಷ್ಯ ನುಡಿಯುತ್ತಿದ್ದಂತೆ ಎಲ್ಲಾ ವಿರೋಧ ಪಕ್ಷಗಳು ಮತ್ತೆ ಧೃವೀಕರಣಗೊಳ್ಳುವ ಕುರಿತು ಚರ್ಚೆ ನಡೆಸುತ್ತಿವೆ. ಆದರೂ, ಪ್ರಧಾನಿ ಕನಸಿನಲ್ಲೇ ಇರುವ ಮಾಯಾವತಿ ಇದೇ ಕಾರಣಕ್ಕೆ ಈಗಲೂ ಕಾಂಗ್ರೆಸ್​ ಜೊತೆ ಮೈತ್ರಿ ಮಾಡಿಕೊಳ್ಳಲು ಸಿದ್ದರಾಗಿಲ್ಲ ಎನ್ನಲಾಗುತ್ತಿದೆ.

Comments are closed.