ಕರ್ನಾಟಕ

ಗೌರಿ ಲಂಕೇಶ್ ಹತ್ಯೆಯಲ್ಲಿ ಸಾಧ್ವಿ ಪ್ರಗ್ಯಾ ಕೈವಾಡವಿರುವ ಯಾವುದೇ ಸಾಕ್ಷಿಗಳಿಲ್ಲ: ವಿಶೇಷ ತನಿಖಾ ದಳ

Pinterest LinkedIn Tumblr

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಲ್ಲಿ ಭೋಪಾಲ್ ನ ಬಿಜೆಪಿ ಸಂಸದೆ ಅಭ್ಯರ್ಥಿ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಅವರ ಕೈವಾಡ ಇದೆ ಎಂದು ಮಾಧ್ಯಮದಲ್ಲಿ ಬಂದ ವರದಿಯನ್ನು ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳ(ಎಸ್ಐಟಿ) ಗುರುವಾರ ನಿರಾಕರಿಸಿದೆ.

ಗೌರಿ ಲಂಕೇಶ್ ಹತ್ಯೆಯಲ್ಲಿ ಸಾಧ್ವಿ ಪ್ರಗ್ಯಾ ಅವರ ಕೈವಾಡವಿರುವ ಸಾಧ್ಯತೆಯಿದೆ ಎಂದು ಇಂಗ್ಲಿಷ್ ದೈನಿಕವೊಂದು ಗುರುವಾರ ವರದಿ ಪ್ರಕಟಿಸಿತ್ತು. ಈ ಕುರಿತು ಅಧಿಕೃತ ಹೇಳಿಕೆ ಹೊರಡಿಸಿರುವ ವಿಶೇಷ ತನಿಖಾ ತಂಡ, ಸಾಧ್ವಿ ಪ್ರಗ್ಯಾ ಅವರ ಕೈವಾಡ ಹತ್ಯೆಯ ಹಿಂದೆ ಇರಬಹುದೆಂದು ತಮಗೆ ತನಿಖೆಯ ಯಾವುದೇ ಹಂತದಲ್ಲಿಯೂ ಕಂಡುಬಂದಿಲ್ಲ, ಅವರ ಹೆಸರು ಆರೋಪಪಟ್ಟಿಯಲ್ಲಿ ಕೂಡ ದಾಖಲಾಗಿಲ್ಲ ಎಂದು ಸ್ಪಷ್ಟಪಡಿಸಿದೆ.

ಸಾಧ್ವಿ ಪ್ರಗ್ಯಾರಿಗೂ, ಮಾಲೆಗಾಂವ್ ಸ್ಫೋಟ ಮತ್ತು ಅಭಿನವ ಭಾರತ್ ಪ್ರಕರಣಕ್ಕೂ ಸಂಬಂಧವಿದೆ ಎಂದು ತನಿಖೆಯ ಹಂತದಲ್ಲಿ ಕಂಡುಬಂದಿಲ್ಲ ಅಥವಾ ಆರೋಪಪಟ್ಟಿಯಲ್ಲಿ ನಮೂದಿಸಿಲ್ಲ. ಅವುಗಳಿಗೆ ಸಂಬಂಧಪಟ್ಟಂತೆ ಯಾವುದೇ ಸಾಕ್ಷಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿದೆ.

2017ರ ಸೆಪ್ಟೆಂಬರ್ 5ರಂದು ರಾತ್ರಿ ವೇಳೆ ಗೌರಿ ಲಂಕೇಶ್ ನಿವಾಸದ ಹೊರಗೆ ಅವರನ್ನು ಹತ್ಯೆ ಮಾಡಿದ ಕೇಸಿನ ವಿಚಾರಣೆಗೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ ಇದುವರೆಗೆ 16 ಮಂದಿಯನ್ನು ಬಂಧಿಸಿದ್ದು ಅವರಲ್ಲಿ ಇಬ್ಬರ ಕೈವಾಡ ಬಲವಾಗಿ ಇತ್ತು ಎಂದು ಶಂಕಿಸಲಾಗಿದೆ.

ಸನಾತನ ಸಂತದ ಪುಸ್ತಕವನ್ನು ಓದಿ ಪ್ರೇರಿತಗೊಂಡ ಬಲಪಂಥೀಯ ಕಾರ್ಯಕರ್ತರು ಗೌರಿ ಹತ್ಯೆ ಮಾಡಿರಬಹುದು ಎಂದು ವಿಶೇಷ ತನಿಖಾ ತಂಡ ಆರೋಪಿಸಿದೆ.

2015ರ ಆಗಸ್ಟ್ ನಲ್ಲಿ ಸಾಹಿತಿ ಎಂ ಎಂ ಕಲಬುರ್ಗಿ ಹತ್ಯೆಯ ತನಿಖೆ ನಡೆಸುವಂತೆ ಕಳೆದ ಫೆಬ್ರವರಿಯಲ್ಲಿ ಸುಪ್ರೀಂ ಕೋರ್ಟ್ ಇದೇ ತನಿಖಾ ತಂಡಕ್ಕೆ ಆದೇಶ ನೀಡಿತ್ತು.

Comments are closed.