ಕರ್ನಾಟಕ

ಕುಂದಗೋಳ ವಿಧಾನಸಭಾ ಉಪಚುನಾವಣೆ: ನಾಮಪತ್ರ ವಾಪಸ್ಸು ಪಡೆದು ರಾಜಕೀಯ ನಿವೃತ್ತಿ ಘೋಷಿಸಿದ ಶಿವಾನಂದ ಬೆಂತೂರು

Pinterest LinkedIn Tumblr


ಹುಬ್ಬಳ್ಳಿ: ಕುಂದಗೋಳ ವಿಧಾನಸಭಾ ಉಪಚುನಾವಣೆಯಲ್ಲಿ ಟಿಕೆಟ್​ ಸಿಗದ ಹಿನ್ನೆಲೆ ಬಂಡಾಯವೆದ್ದಿದ್ದ ಕಾಂಗ್ರೆಸ್​ ಅಭ್ಯರ್ಥಿ ಶಿವಾನಂದ ಬೆಂತೂರು ಕಡೆಗೂ ನಾಮಪತ್ರವನ್ನು ಹಿಂಪಡೆದಿದ್ದಾರೆ. ಇದರ ಜೊತೆಗೆ ರಾಜಕೀಯ ನಿವೃತ್ತಿ ಘೋಷಿಸಿ ಅಚ್ಚರಿ ಮೂಡಿಸಿದ್ದಾರೆ.

ಸಚಿವ ಸಿಎಸ್​ ಶಿವಳ್ಳಿ ನಿಧನದಿಂದ ತೆರವಾಗಿದ್ದ ಕುಂದಗೋಳ ವಿಧಾನಸಭಾ ಉಪಚುನಾವಣೆಯಲ್ಲಿ ಶಿವಾನಂದ ಬೆಂತೂರು ಕೂಡ ಆಕಾಂಕ್ಷಿಯಾಗಿದ್ದರು. ಆದರೆ ಪಕ್ಷ ಟಿಕೆಟ್​ ಅನ್ನು ಶಿವಳ್ಳಿ ಅವರ ಹೆಂಡತಿ ಕುಸುಮಾ ಶಿವಳ್ಳಿ ಅವರಿಗೆ ಟಿಕೆಟ್​ ನೀಡಲಾಗಿತ್ತು. ಟಿಕೆಟ್​ ಸಿಗದ ಹಿನ್ನೆಲೆ ಅಸಮಾಧಾನ ವ್ಯಕ್ತಪಡಿಸಿದ್ದರು,

ಟಿಕೆಟ್​ ಸಿಗದ ಹಿನ್ನೆಲೆ ಸಚಿವ ಸತೀಶ್​ ಜಾರಕಿಹೊಳಿ ಮುಂದೆಯೇ ಶಿವಾನಂದ ಪರ ಬೆಂಬಲಿಗರು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ವೇಳೆ ಪಕ್ಷ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿದೆ ಎಂದು ಕೂಡ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ವೇಳೆ ಬಂಡಾಯವೆದ್ದ ಶಿವಾನಂದ ಬೆಂತೂರು ಏಕಾಂಗಿಯಾಗಿ ನಾಮಪತ್ರ ಸಲ್ಲಿಸಿದ್ದರು.

ಆದರೆ, ಇಂದು ದಿಢೀರ್​ ಎಂದು ನಾಮಪತ್ರ ವಾಪಸ್ಸು ಪಡೆದಿದ್ದು, ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಈ ಹಿಂದೆ ನನಗೆ ಬೆಂಬಲ ನೀಡಿದ ಅಭ್ಯರ್ಥಿಗಳು ಕೂಡ ಕಡೆಯ ಕ್ಷಣದಲ್ಲಿ ಕೈ ಬಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಶಿವಾನಂದ ಬೆಂತೂರು ತಿಳಿಸಿದ್ದಾರೆ.

ಇದೇ ವೇಳೆ ಶಿವಳ್ಳಿ ಕುಟುಂಬದ ವಿರುದ್ಧವೂ ಹರಿಹಾಯ್ದ ಅವರು, ಚುನಾವಣೆಯಲ್ಲಿ ಕುಸುಮಾ ಶಿವಳ್ಳಿಗೆ ಬೆಂಬಲ ನೀಡುವ ಕೆಲಸ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. 23 ವರ್ಷಗಳ ಕಾಲ ಕಾಂಗ್ರೆಸ್​ ಪಕ್ಷಕ್ಕಾಗಿ ದುಡಿದಿದ್ದೇನೆ. ಎರಡು ಬಾರಿ ಶಿವಳ್ಳಿ ಅವರಿಗಾಗಿ ತ್ಯಾಗ ಮಾಡಿದೆ. ಶಿವಳ್ಳಿ ನಂತರ ಶಿವಾನಂದ ಬೆಂತೂರು ಅವರಿಗೆ ಟಿಕೆಟ್​ ಎಂಬ ಮಾತು ತಾಲೂಕಿನಲ್ಲಿ ಕೇಳಿ ಬಂದಿತ್ತು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ನಾನು ನಂಬಿದ ಮುಖಂಡರೇ ನನ್ನ ಕೈ ಬಿಟ್ಟರು ಎಂಬ ಮಾತನ್ನು ಅವರು ಹೇಳಿದ್ದಾರೆ.

ಶಿವಾನಂದ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದಾಗಿನಿಂದ ಅವರ ಮನವೊಲಿಕೆಗೆ ಕಾಂಗ್ರೆಸ್​ ಮುಖಂಡರು ಮುಂದಾಗಿದ್ದರು. ಧಾರವಾಡ ಅಭ್ಯರ್ಥಿ ವಿನಯ್​ ಕುಲಕರ್ಣಿ ಸೇರಿದಂತೆ ಅನೇಕ ರಾಜ್ಯ ನಾಯಕರು ಅವರ ಮನವೊಲಿಕೆ ಮಾಡಿದ್ದರು. ಸಿದ್ದರಾಮಯ್ಯ ಕೂಡ, “ಈ ಬಾರಿ ಚುನಾವಣೆಯಲ್ಲಿ ಅಭ್ಯರ್ಥಿ ಪರವಾಗಿ ಕೆಲಸ ಮಾಡಿ. ಮುಂದಿನ ದಿನಗಳಲ್ಲಿ ನಿಮ್ಮ ಕಾರ್ಯವನ್ನು ಪಕ್ಷ ಗುರುತಿಸಿ, ಅವಕಾಶ ನೀಡಲಿದೆ” ಎಂದು ಸಮಾಧಾನ ಮಾಡುವ ಯತ್ನ ನಡೆಸಿದ್ದರು.

ಬಂಡಾಯ ಅಭ್ಯರ್ಥಿಗಳಾಗಿ ಕಣಕ್ಕೆ ಇಳಿದಿದ್ದ ಆರು ಮಂದಿ ಕಾಂಗ್ರೆಸಿಗರೊಂದಿಗೆ ಸಚಿವ ಜಮೀರ್​ ಅಹ್ಮದ್​ ನಡೆಸಿದ ಸಂಧಾನ ಮಾತುಕತೆ ಯಶಸ್ವಿಯಾಗಿದೆ. ಅವರೆಲ್ಲ ಮೂಲ ಕಾಂಗ್ರೆಸ್‌ನವರು, ಟಿಕೆಟ್ ಸಿಗದಿದ್ದಕ್ಕೆ ಬೇಸರಗೊಂಡಿದ್ದರು. ಈಗ ಅಸಮಾಧಾನ ಶಮನವಾಗಿದೆ, ಬೇಷರತ್ ನಾಮಪತ್ರ ಹಿಂಪಡೆದಿದ್ದಾರೆ‌. ಪ್ರೀತಿಯಿದ್ದಲ್ಲಿ ನೋವು ಜಾಸ್ತಿ ಇರುತ್ತೆ, ಹೀಗಾಗಿ ನೋವು ಹೊರಹಾಕಿದ್ದರು ಎಂದು ಸಚಿವ ಜಮೀರ್ ತಿಳಿಸಿದರು.

ಟಿಕೆಟ್​ ಆಕಾಂಕ್ಷಿಗಳಾಗಿದ್ದ ಸುರೇಶ್​ ಸವಣೂರ, ಎಚ್​.ಎಲ್​. ನದಾಫ್​, ಚಂದ್ರಶೇಖರ್​ ಜುಟ್ಟಲ್​, ಜೆ.ಡಿ. ಘೋರ್ಪಡೆ, ವಿಶ್ವನಾಥ ಕುಬಿಹಾಳ ಬಂಡಾಯ ಅಭ್ಯರ್ಥಿಗಳಾಗಿ ನಾಮಪತ್ರ ವಾಪಸ್ಸು ಪಡೆದಿದ್ದಾರೆ.

Comments are closed.