ಕರ್ನಾಟಕ

ಧರ್ಮಸ್ಥಳದಲ್ಲಿ ಆಣೆ ಮಾಡಿದ ತುಮಕೂರು ಸಂಸದ ಮುದ್ದ ಹನುಮೇಗೌಡ

Pinterest LinkedIn Tumblr


ಧರ್ಮಸ್ಥಳ: ತುಮಕೂರು ಲೋಕಸಭಾ ಕ್ಷೇತ್ರ ಬಿಟ್ಟುಕೊಡಲು ಹಾಗೂ ನಾಮಪತ್ರ ಹಿಂಪಡೆಯಲು ಯಾರಿಂದಲೂ ಒಂದು ನಯಾ ಪೈಸೆ ಹಣ ಪಡೆದಿಲ್ಲ. ಹಣ ಪಡೆದಿದ್ದಾರೆಂಬ ನನ್ನ ವಿರುದ್ಧದ ಆರೋಪ ಸುಳ್ಳು ಎಂದು ತುಮಕೂರು ಕ್ಷೇತ್ರದ ಕಾಂಗ್ರೆಸ್​ ಸಂಸದ ಮುದ್ದಹನುಮೇಗೌಡ ಧರ್ಮಸ್ಥಳದ ಮಂಜುನಾಥನ ಸನ್ನಿಧಿಯಲ್ಲಿ ಆಣೆ ಮಾಡಿ ತನ್ನ ಮೇಲಿನ ಆರೋಪವನ್ನು ತಳ್ಳಿಹಾಕಿದ್ದಾರೆ.

ಬೆಳ್ತಂಗಡಿ ತಾಲ್ಲೂಕಿನ ಧರ್ಮಸ್ಥಳ ಶ್ರೀ ಮಂಜುನಾಥನ ಸನ್ನಿಧಿಗೆ ಭೇಟಿ ನೀಡಿದ ಅವರು ದೇವರ ದರ್ಶನದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾನು ಮೂಲತಃ ರಾಜಕಾರಣಿ ಅಲ್ಲ. ತುಮಕೂರಿನ ರಾಜಕೀಯ ಬೆಳವಣಿಗೆ ಎಲ್ಲರಿಗೂ ಗೊತ್ತಿದೆ. ನಾನು ಜನರ ಜತೆಗಿದ್ದು ಸಂಸದನಾಗಿ ಕೆಲಸ ನಿರ್ವಹಿಸಿದ್ದೇನೆ ಎಂದರು.

ಚುನಾವಣಾ ಪ್ರಕ್ರಿಯೆ ಮುಗಿದ ಮೇಲೆ ನಾಮಪತ್ರ ವಾಪಸ್ ಪಡೆಯಲು ಕೋಟಿ ರೂಪಾಯಿ ಡೀಲ್​ ನಡೆದಿದೆ ಎನ್ನಲಾದ ಸಂಭಾಷಣೆಯುಳ್ಳ ಆಡಿಯೋ ಬಿಡುಗಡೆಯಾಯಿತು. ಯಾರೋ ಪ್ರಮುಖವಲ್ಲದ ವ್ಯಕ್ತಿಗಳು ಮಾತನಾಡಿರುವ ಆಡಿಯೋ ಬಿಡುಗಡೆ ಮಾಡಿ, ಯಾವುದೇ ತನಿಖೆಯೂ ಇಲ್ಲದೆ ನನ್ನ ಮೇಲೆ ಆರೋಪ ಮಾಡಲಾಯಿತು. ಅಲ್ಲದೆ, ರಾಜ್ಯದಲ್ಲಿ ನನ್ನ ಬಗ್ಗೆ ತಪ್ಪು ಸಂದೇಶ ರವಾನೆಯಾಯಿತು. ನನ್ನ ರಾಜಕೀಯ ಬೆಳವಣಿಗೆ ಸಹಿಸದವರಿಂದ ಈ ಕೃತ್ಯ ನಡೆದಿದೆ. ಅಂಥ ವಿಕೃತ ಮನಸ್ಸಿನವರಿಗೆ ದೇವರು ಒಳ್ಳೆಯ ಮನಸ್ಸು ಕೊಡಲಿ. ಯಾರು ನನಗೆ ಹಣ ಕೊಟ್ಟಿದ್ದಾರೆಂದು ಹೇಳಬೇಕಿತ್ತು ಎಂದು ಸವಾಲೆಸೆದರು.

ಲೋಕಸಭೆಯಲ್ಲೂ ನನ್ನ ಕ್ಷೇತ್ರದ ಅಭಿವೃದ್ಧಿಗೆ ಪ್ರಸ್ತಾಪ ಮಾಡಿದ್ದೆ. ಆದರೂ ಈ ಬಾರಿ ನನಗೆ ಸ್ಪರ್ಧೆ ಮಾಡುವುದಕ್ಕೆ ಅವಕಾಶ ತಪ್ಪಿಸಲಾಯಿತು. ಕ್ರಿಯಾಶೀಲನಾಗಿ ಕೆಲಸ ಮಾಡಿದ್ದರೂ ಅವಕಾಶ ಸಿಗಲಿಲ್ಲ. ನಮ್ಮ ಪಕ್ಷ ಕ್ಷೇತ್ರವನ್ನು ಜೆಡಿಎಸ್​ಗೆ ಬಿಟ್ಟು ಕೊಟ್ಟಿತು. ಆಗ ಪಕ್ಷೇತರವಾಗಿ ಸ್ಪರ್ಧಿಸಲು ನಾಮಪತ್ರ ಹಾಕಿದ್ದೆ. ಆದರೆ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್​, ಸಿದ್ದರಾಮಯ್ಯ, ಪರಮೇಶ್ವರ್ ಹಾಗೂ ರಾಹುಲ್ ಗಾಂಧಿ ತಮ್ಮೊಂದಿಗೆ ಮಾತನಾಡಿದರು. ರಾಜ್ಯದಲ್ಲಿ ಮೈತ್ರಿಯ ಅನಿವಾರ್ಯತೆಯ ಬಗ್ಗೆ ತಿಳಿಸಿದರು. ರಾಜ್ಯ, ರಾಷ್ಟ್ರದ ಹಿತದೃಷ್ಟಿಯಿಂದ ತ್ಯಾಗದ ಮನವರಿಕೆ ಮಾಡಿದ್ದರಿಂದ ತ್ಯಾಗ ಮಾಡಿದ್ದೇನೆ ಹಾಗೂ ಪ್ರಚಾರದಲ್ಲಿಯೂ ಭಾಗಿಯಾಗಿದ್ದೇನೆ ಎಂದು ಮುದ್ದಹನುಮೇಗೌಡ ತಿಳಿಸಿದರು.

ಕಾಂಗ್ರೆಸ್​ನಲ್ಲೇ ಇದ್ದೇನೆ, ಕಾಂಗ್ರೆಸ್​ನಲ್ಲೇ ಇರುತ್ತೇನೆ : ನಾನು ಯಾವ ಪಕ್ಷದವರಿಂದಲೂ ಹಣ ಪಡೆದುಕೊಂಡಿಲ್ಲ. ಯಾವುದೇ ಹಣ ಪಡೆಯದೆ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದೇನೆ. ನನ್ನ ರಾಜಕೀಯ ಬೆಳವಣಿಗೆ ಸಹಿಸದೆ ಈ ರೀತಿ ಆರೋಪ ಮಾಡಿದ್ದಾರೆ. ನನ್ನ ಮೇಲಿನ ಆರೋಪದಿಂದ ನನಗೆ ತುಂಬ ನೋವಾಗಿದೆ. ನಾನು ಕಾಂಗ್ರೆಸ್ ಪಕ್ಷದಲ್ಲಿಯೇ ಇದ್ದೇನೆ, ಮುಂದೆಯೂ ಇರುತ್ತೇನೆ ಎಂದು ಅವರು ಸ್ಪಷ್ಟಪಡಿಸಿದರು.

Comments are closed.