ಕರ್ನಾಟಕ

ಕಾರ್ಮಿಕರ ದಿನದ ಆಘಾತಕಾರಿ ಸುದ್ದಿ; ಮಲೆನಾಡಿನ ಪ್ರಖ್ಯಾತ ಕಾರ್ಮಿಕ ಬಸ್ಸುಗಳ ಓಡಾಟ ಶೀಘ್ರ ಬಂದ್?

Pinterest LinkedIn Tumblr


ಚಿಕ್ಕಮಗಳೂರು: ಜಪಾನ್ ಮೆಚ್ಚಿಕೊಳ್ತು. ಮಂಗಳೂರು ವಿವಿ ಪ್ರಾಧ್ಯಾಪಕರು ಡಾಕ್ಟರೇಟ್ ಪದವಿ ಪಡೆದ್ರು. ಮಣಿಪಾಲ್ ಸ್ನಾತಕೋತ್ತರ ಪದವಿಗೆ ಪಠ್ಯವೇ ಆಯ್ತು. ಕೊಲ್ಲಾಪುರ ಶಿವಾಜಿ ವಿವಿ ಪಿಎಚ್‍ಡಿಯನ್ನೇ ಕೊಡ್ತು. ಕಾರ್ಮಿಕರೇ ಕಟ್ಟಿ ಕಾರ್ಮಿಕರೇ ಮಾಲೀಕರಾಗಿ 30 ವರ್ಷ ಹಳ್ಳಿಗರ ಮನಮುಟ್ಟಿದ ಸಹಕಾರ ಸಂಸ್ಥೆಯ ಸಾಧನೆಗಳಿವು. ಅಂದು ಅನಭಿಷಕ್ತ ದೊರೆಯಂತೆ ಮೆರೆದ ಸಹಕಾರ ಸಂಸ್ಥೆಯಲ್ಲೀಗ ಅಸಹಕಾರ. ಸಂಬಳ ಕೊಡೋಕೂ ಆಗದೇ ಮುಚ್ಚುವ ಹೊಸ್ತಿಲಲ್ಲಿದೆ. ಕಾರ್ಮಿಕರ ಮನವಿಗೆ ಸರ್ಕಾರದ ಬಳಿಯೂ ಉತ್ತರವಿಲ್ಲ. ಈ ಸಂಸ್ಥೆ ಮುಚ್ಚಿದ್ರೆ, ಮಲೆನಾಡು ಮುಳುಗುತ್ತೆ. ಇದಕ್ಕೂ ಕಾರಣಗಳಿವೆ…

ಚಿಕ್ಕಮಗಳೂರಿನ ಸಹಕಾರ ಸಾರಿಗೆ ಬಸ್ಸಿನ ಚಕ್ರಗಳು ಕಾಫಿನಾಡು ಸೇರಿ ಮಂಗಳೂರು, ಉಡುಪಿ, ಶಿವಮೊಗ್ಗಾದ ಬೆಟ್ಟಗುಡ್ಡಗಳ ಬಹುತೇಕ ಗ್ರಾಮವನ್ನ ಕಂಡಿವೆ. ಮಲೆನಾಡ ಕುಗ್ರಾಮಗಳ ಮನೆ-ಮನ ಬೆಸೆದೆ ಪರಿಗೆ ಏಷ್ಯಾದಲ್ಲೇ ಬೆಸ್ಟ್ ಸಹಕಾರ ಸಂಸ್ಥೆ ಎಂಬ ಹೆಗ್ಗಳಿಕೆ ಗಳಿಸ್ತು. ಕಾರ್ಮಿಕರೇ ಕಟ್ಟಿ, ಕಾರ್ಮಿಕರೇ ಮಾಲೀಕರಾಗಿ 6 ಬಸ್‍ನಿಂದ 76 ಬಸ್‍ಗೆ ತಂದಿದ್ದಾರೆ. ರಾಜ್ಯಕ್ಕೆ ಕೆ.ಎಸ್.ಆರ್.ಟಿ.ಸಿ., ಮಲೆನಾಡಿಗೆ ಸಹಕಾರ ಸಾರಿಗೆ. ಯಾಕಂದ್ರೆ, ಸ್ವಾತಂತ್ರ್ಯ ಹೋರಾಟಗಾರರು, ಕರ್ನಾಟಕ ಏಕೀಕರಣಕ್ಕೆ ಹೋರಾಡಿದವರು, ವಿಧ್ಯಾರ್ಥಿಗಳು, ಸಂಸ್ಥೆಯ ಕಾರ್ಮಿಕ ಮಕ್ಕಳು, ವಿಕಲಚೇತನರು, ಹಿರಿಯ ನಾಗರಿಕರಿಗೆ ಶೇ. 50 ರಿಯಾಯಿತಿ ಕೊಟ್ಟು, ದಟ್ಟಕಾನನ, ಕಲ್ಲು-ಮಣ್ಣಿನ ದುರ್ಗಮ ಹಾದಿಯಲ್ಲೂ ಲಕ್ಷಾಂತರ ಮಕ್ಕಳ ಭವಿಷ್ಯ ರೂಪಿಸಿದ ಹೆಗ್ಗಳಿಕೆ ಈ ಸಂಸ್ಥೆಯದ್ದು. ಅಂತಹ ಸಂಸ್ಥೆ ಈಗ ಸರ್ಕಾರದ ನೀತಿ-ನಿರ್ಧಾರಗಳು, ಡೀಸೆಲ್ ಬೆಲೆ, ವಿಮೆ-ಟ್ಯಾಕ್ಸ್ ಮಧ್ಯೆ ಸಂಬಳ ನೀಡೋಕೂ ಆಗದೇ ಬಾಗಿಲು ಹಾಕುವ ಹೊಸ್ತಿಲಲ್ಲಿದೆ. ಸಹಕಾರ ಕೋರಿ ಸರ್ಕಾರದ ಕದ ಬಡಿದರೂ ಪ್ರಯೋಜನವಾಗಿಲ್ಲ.

ಸಹಕಾರ ಸಂಸ್ಥೆ ಶುರುವಾಗಿದ್ದು ಹೀಗೆ:

1990ರಲ್ಲಿದ್ದ ಶಂಕರ್ ಟ್ರಾನ್ಸ್‍ಪೋರ್ಟ್ ಮುಚ್ಚಿದ ಬಳಿಕ ಅಲ್ಲಿದ್ದ ಕಾರ್ಮಿಕರು ತಮಗೆ ಬಂದ ಪರಿಹಾರದ ಹಣದಿಂದಲೇ ಕಟ್ಟಿಕೊಂಡ ಸಂಸ್ಥೆ. ಅಂದಿನಿಂದ ಈ ಬಸ್ ಮಲೆನಾಡ ಮನೆ-ಮನಗಳ ಮಧ್ಯೆ ಬಾಂಧವ್ಯ ಬೆಸೆದಿತ್ತು. ಆದರಿಂದು ಅವನತಿಯ ಅಂಚಿನಲ್ಲಿದೆ. ತಿಂಗಳಿಗೆ ಡೀಸೆಲ್‍ನಿಂದ 24 ಲಕ್ಷ ರೂ ನಷ್ಟವಾದ್ರೆ, ವರ್ಷಕ್ಕೆ ಒಂದೂವರೆ ಕೋಟಿ ಟ್ಯಾಕ್ಸ್, ಜೊತೆಗೆ, ರಿಯಾಯಿತಿ ಪಾಸ್‍ನ ಹೊರೆ. ಹಾಗಾಗಿ, ಡೀಸೆಲ್ ಸಬ್ಸಿಡಿ, ಟ್ಯಾಕ್ಸ್ ಕಡಿತ ಹಾಗೂ ಪಾಸ್‍ಗಳ ಉಳಿಕೆ ಹಣವನ್ನ ನೀಡುವಂತೆ ಸರ್ಕಾರದ ಸಹಾಯ ಹಸ್ತವನ್ನ ಎದುರುನೋಡ್ತಿದೆ. ಡೀಸೆಲ್ ದರ ಹೆಚ್ಚಾದಾಗಲೂ ಟಿಕೆಟ್ ದರ ಏರಿಸಿಲ್ಲ. ಸರ್ಕಾರ ಈ ಸಂಸ್ಥೆಗೆ ಸ್ಪಂದಿಸದಿದ್ರೆ, ಏಷ್ಯಾ ಖಂಡದಲ್ಲೇ ಮಾದರಿಯಾಗಿದ್ದ ಸಂಸ್ಥೆ ಬಾಗಿಲು ಹಾಕಿ, 300ಕ್ಕೂ ಅಧಿಕ ಕಾರ್ಮಿಕರು ಬೀದಿಗೆ ಬರೋದು ಗ್ಯಾರಂಟಿ.

ಸಹಕಾರ ಸಚಿವರಾಗಿದ್ದ ಮಹದೇವಪ್ಪ ಈ ಸಂಸ್ಥೆಯ ರಜತ ಮಹೋತ್ಸವದ ಕಾರ್ಯಕ್ರಮಕ್ಕೆ ಬಂದಾಗ್ಲೇ ಕಾಫಿನಾಡಲ್ಲಿ ಮೃತರಾದದ್ದು. ಮೈತ್ರಿ ಸರ್ಕಾರದ ಪಾಲುದಾರ ಕಾಂಗ್ರೆಸ್ ಮಹದೇವಪ್ಪಗೆ ಗೌರವ ಸೂಚಿಸುವ ನಿಟ್ಟಿನಲ್ಲಾದರೂ ಈ ಸಂಸ್ಥೆಗೆ ನೆರವಿನ ಹಸ್ತ ನೀಡಬೇಕಾಗಿದೆ. ಯಾಕಂದ್ರೆ, ಮಲೆನಾಡ ಹಳ್ಳಿಗರ ಬದುಕು ಈ ಬಸ್ ಮೇಲೆ ನಿಂತಿದೆ. ಒಂದ್ ವೇಳೆ, ಸರ್ಕಾರ ಇವ್ರಿಗೆ ಸ್ಪಂದಿಸಿದ್ದೇ ಆದಲ್ಲಿ ಸಹಕಾರ ಸಾರಿಗೆ ಸಂಸ್ಥೆಯ ಗತವೈಭವ ಮತ್ತೆ ಮರುಕಳಿಸೋದ್ರಲ್ಲಿ ಆಶ್ಚರ್ಯವಿಲ್ಲ.

Comments are closed.