ಕರ್ನಾಟಕ

ಸುಮಲತಾ ತಂಡ, ಸಿದ್ದರಾಮಯ್ಯ ಆಪ್ತರ ರಹಸ್ಯ ಸಭೆ – ತೆರೆಮರೆಯಲ್ಲಿ ಕೈ ಹಿಡಿದ್ರಾ ಮಾಜಿ ಸಿಎಂ?

Pinterest LinkedIn Tumblr


ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಬೆಂಬಲಿಗರು ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಆಪ್ತರು ಭೋಜನ ಕೂಟದ ನೆಪದಲ್ಲಿ ಮಂಗಳವಾರ ತಡರಾತ್ರಿ ಸಭೆ ಮಾಡಿದ್ದಾರೆ.

ಬೆಂಗಳೂರಿನ ಖಾಸಗಿ ಹೋಟೆಲ್‍ನಲ್ಲಿ ಮಂಡ್ಯದ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರು ತಮ್ಮ ಬೆಂಬಲಿಗರಿಗಾಗಿ ಭೋಜನ ಕೂಟ ಏರ್ಪಡಿಸಿದ್ದರು. ಕಾಂಗ್ರೆಸ್‍ನ ಮುಖಂಡರಾದ ಚಲುವರಾಯಸ್ವಾಮಿ, ನರೇಂದ್ರ ಸ್ವಾಮಿ, ಕೆ.ಬಿ.ಚಂದ್ರಶೇಖರ್, ಬಾಲಕೃಷ್ಣ, ವಿಧಾನ ಪರಿಷತ್ ಸದಸ್ಯ ಪುಟ್ಟರಾಜು ಹಾಗೂ ಅಮಾನತುಗೊಂಡ ಕೆಪಿಸಿಸಿ ಸದಸ್ಯ ಸಚ್ಚಿದಾನಂದ ಈ ಭೋಜನ ಕೂಟದಲ್ಲಿ ಪಾಲ್ಗೊಂಡಿದ್ದರು.

ಈ ತಂಡದಲ್ಲಿ ಮಾಜಿ ಸಿಎಂ ಆಪ್ತ ದಡದಪುರದ ಶಿವಣ್ಣ ಅವರು ಕೂಡ ಇದ್ದರು. ಸಿದ್ದರಾಮಯ್ಯ ಬೆಂಬಲಿತರ ಜೊತೆಗೆ ದಡದಪುರದ ಶಿವಣ್ಣ ಕಾಣಿಸಿಕೊಂಡಿದ್ದು, ಸಿದ್ದರಾಮಯ್ಯನವರ ಕೈವಾಡದ ಬಗ್ಗೆಯೆ ಅನುಮಾನ ಮೂಡುವಂತಾಗಿದೆ. ಈ ಮೂಲಕ ಮಂಡ್ಯದಲ್ಲಿ ಕಾಂಗ್ರೆಸ್ ಮತಗಳು ಸುಮಲತಾ ಅವರಿಗೆ ಬಿದ್ದಿದ್ಯಾ ಎನ್ನುವ ಪ್ರಶ್ನೆ ಎದ್ದಿದೆ.

ಅತ್ತ ಸಿಎಂ ಕುಮಾರಸ್ವಾಮಿ ರೆಸಾರ್ಟ್ ನಲ್ಲಿ ಕುಳಿತು ಸೋಲು ಗೆಲುವಿನ ಲೆಕ್ಕಾಚಾರ ಹಾಕುತ್ತಿದ್ದರೆ ಇತ್ತ ಸುಮಲತಾ ಅವರು ಕಾಂಗ್ರೆಸ್ ಮುಖಂಡರು ಹಾಗೂ ಸಿದ್ದರಾಮಯ್ಯ ಆಪ್ತರ ಜೊತೆ ಸಮಾಲೋಚನೆ ನಡೆಸಿ ಅಚ್ಚರಿ ಮೂಡಿಸಿದ್ದಾರೆ.

ತುಮಕೂರು, ಹಾಸನ, ಮೈಸೂರು ಕ್ಷೇತ್ರಗಳಲ್ಲಿ ಕೊನೆಗಳಿಗೆಯಲ್ಲಿ ಬಂಡಾಯ ಕಡಿಮೆಯಾಗಿದ್ದರೆ ಮಂಡ್ಯದಲ್ಲಿ ಬಂಡಾಯ ಶಮನವೇ ಆಗಿರಲಿಲ್ಲ. ಇದರ ಜೊತೆ ಸಿದ್ದರಾಮಯ್ಯ ಹಿಂದುಗಡೆಯಿಂದ ನಿಂತು ಸುಮಲತಾ ಅವರ ಬೆಂಬಲಿಕ್ಕೆ ನಿಂತಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿತ್ತು. ಆದರೆ ಸಿದ್ದರಾಮಯ್ಯ ನಾನು ಬೆಂಬಲ ನೀಡಿಲ್ಲ ಎಂದು ಹೇಳಿ ಈ ಎಲ್ಲ ಸುದ್ದಿಗಳಿಗೆ ಬ್ರೇಕ್ ಹಾಕಿದ್ದರು. ಆದರೆ ಭೋಜನ ಕೂಟದಲ್ಲಿ ಸಿದ್ದರಾಮಯ್ಯನವರ ಆಪ್ತರೇ ಭಾಗವಹಿಸಿದ್ದರಿಂದ ಕಾಂಗ್ರೆಸ್ ನಾಯಕರು ಮಂಡ್ಯದಲ್ಲಿ ಸುಮಲತಾ ಪರವಾಗಿ ಕೆಲಸ ಮಾಡಿದ್ದಾರಾ ಎನ್ನುವ ಪ್ರಶ್ನೆ ಈಗ ಮತ್ತೊಮ್ಮೆ ಎದ್ದಿದೆ.

Comments are closed.