ರಾಷ್ಟ್ರೀಯ

ಕಾಂಗ್ರೆಸ್‌ ಗೆ ಸರಕಾರ ರಚಿಸಲು ಕೊಟ್ಟ ಬೆಂಬಲ ವಾಪಾಸ್‌ ಬೆದರಿಕೆ

Pinterest LinkedIn Tumblr


ಭೋಪಾಲ್‌: ಮಧ್ಯಪ್ರದೇಶದ ಗುಣ ಲೋಕಸಭಾ ಕ್ಷೇತ್ರದ ಬಿಎಸ್‌ಪಿ ಅಭ್ಯರ್ಥಿ ತಮ್ಮ ನಾಮಪತ್ರ ಹಿಂಪಡೆದು ಕಾಂಗ್ರೆಸ್‌ಗೆ ಬೆಂಬಲ ಘೋಷಣೆ ಮಾಡಿದ ಬೆನ್ನಲ್ಲೇ, ಬಿಎಸ್‌ಪಿ ವರಿಷ್ಠೆ ಮಾಯಾವತಿ ಅವರು, ಕಮಲ್‌ನಾಥ್‌ ನೇತೃತ್ವದ ಸರ್ಕಾರಕ್ಕೆ ನೀಡಲಾದ ಬೆಂಬಲ ವಾಪಸ್‌ ಪಡೆಯುವ ಎಚ್ಚರಿಕೆ ನೀಡಿದ್ದಾರೆ.

ಜ್ಯೋತಿರಾಧಿತ್ಯ ಸಿಂಧಿಯಾ ಸ್ಪರ್ಧಿಸಿರುವ ಗುಣ ಲೋಕಸಭಾ ಕ್ಷೇತ್ರದಲ್ಲಿ ಬಿಎಸ್‌ಪಿಯಿಂದ ಲೋಕೇಂದ್ರ ಸಿಂಗ್‌ ರಜಪೂತ್‌ ಕಣಕ್ಕೆ ಇಳಿದಿದ್ದರು. ಆದರೆ ಇದೀಗ ರಜಪೂತ್‌ ಕಾಂಗ್ರೆಸ್‌ ಸೇರಿಕೊಂಡಿದ್ದಾರೆ. ಇದರಿಂದ ಆಕ್ರೋಶಗೊಂಡಿರುವ ಮಾಯಾ, ‘ಸರ್ಕಾರಿ ಯಂತ್ರ ದುರುಪಯೋಗ ವಿಚಾರದಲ್ಲಿ ಬಿಜೆಪಿಗಿಂತ ಕಾಂಗ್ರೆಸ್‌ ಹಿಂದೆ ಬಿದ್ದಿಲ್ಲ.

ಕಾಂಗ್ರೆಸ್‌, ಬೆದರಿಕೆ ಹಾಕುವ ಮೂಲಕ ಬಿಎಸ್‌ಪಿ ಅಭ್ಯರ್ಥಿ ನಾಮಪತ್ರ ಹಿಂಪಡೆಯುವಂತೆ ಮಾಡಿದೆ. ಆದರೆ, ಅಭ್ಯರ್ಥಿ ಇಲ್ಲದಿದ್ದರೂ, ಆನೆ ಗುರುತಿನಲ್ಲಿ ಚುನಾವಣೆ ಎದುರಿಸಿ ಕಾಂಗ್ರೆಸ್‌ಗೆ ಉತ್ತರಿಸುತ್ತೇವೆ. ಅಲ್ಲದೆ, ಕಾಂಗ್ರೆಸ್‌ಗೆ ಸರ್ಕಾರ ರಚಿಸಲು ನೀಡಲಾದ ಬೆಂಬಲ ವಾಪಸ್‌ ಪಡೆವ ಬಗ್ಗೆ ಚಿಂತನೆ ಮಾಡುತ್ತೇನೆ,’ ಎಂದು ಎಚ್ಚರಿಕೆ ನೀಡಿದ್ದಾರೆ.

230 ಸಂಖ್ಯಾಬಲ ಹೊಂದಿದ ಮಧ್ಯಪ್ರದೇಶದ ವಿಧಾನಸಭೆಯಲ್ಲಿ ಕಾಂಗ್ರೆಸ್‌ 114 ಕ್ಷೇತ್ರಗಳಲ್ಲಿ ಜಯ ಸಾಧಿಸಿತ್ತು. ಬಹುಮತಕ್ಕೆ 2 ಸ್ಥಾನ ಕೊರತೆ ಹೊಂದಿದ್ದ ಕಾರಣ,2 ಬಿಎಸ್‌ಪಿ ಶಾಸಕರು, ಓರ್ವ ಎಸ್‌ಪಿ ಹಾಗೂ 4 ಸ್ವತಂತ್ರ ಅಭ್ಯರ್ಥಿ ಬೆಂಬಲ ಪಡೆದು ಕಾಂಗ್ರೆಸ್‌ ಸರ್ಕಾರ ರಚನೆ ಮಾಡಿತ್ತು.

Comments are closed.