ಶಿವಮೊಗ್ಗ: ಮೆಸ್ಕಾಂ ಇಂಜಿನಿಯರ್ ಒಬ್ಬರು ತಮ್ಮ ವೃತ್ತಿ ಜೀವನದಿಂದ ನಿವೃತ್ತಿ ಹೊಂದುವ ದಿನವೇ, ತಮ್ಮ ಕುಟುಂಬದ ಐವರು ಸದಸ್ಯರನ್ನು ಕಳೆದು ಕೊಂಡಿರುವ ದಾರುಣ ಘಟನೆ ಶಿವಮೊಗ್ಗದಲ್ಲಿ ಸಂಭವಿಸಿದೆ.
ಜಿಲ್ಲೆಯ ಆಯನೂರು ಹೊರವಲಯದ ಚಿಕ್ಕದಾನವಂದಿ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಅಪಘಾತಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು ಕೂತಲ್ಲಿಯೇ ಸಾವನ್ನಪ್ಪಿದ್ದು, ಮೃತ ದೇಹಗಳು ಕಾರಿನೊಳಗೆ ಸಿಲುಕಿಕೊಂಡಿವೆ.
ಮೃತರೆಲ್ಲರೂ, ಶಿವಮೊಗ್ಗ ಮೂಲದವರಾಗಿದ್ದು, ಮೆಸ್ಕಾಂ ಇಂಜಿನಿಯರ್ ಚಂದ್ರಪ್ಪ ಅವರ ಪತ್ನಿ ಮಂಗಳಾ, ಪುತ್ರ ಮಂಜುನಾಥ, ಅಳಿಯ ನೀಲಕಂಠ, ಪುತ್ರಿ ಉಷಾ ಮೊಮ್ಮಗ ನಂದೀಶ್ ಸಾವನ್ನಪ್ಪಿದ್ದಾರೆ. ಕಾರಿನಲ್ಲಿದ್ದ ಮಗವೊಂದಕ್ಕೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಬಾಳಿನಲ್ಲಿ ವಿಧಿ ಚೆಲ್ಲಾಟವಾಡಿದ್ದು, ಅವರ ಗೋಳು ಹೇಳತೀರದಾಗಿದೆ. ಸ್ಥಳಕ್ಕೆ ಪೊಲೀಸರು ಧಾವಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ಘಟನೆ ಹೇಗಾಯ್ತು ?
ಮೆಸ್ಕಾಂ ಇಲಾಖೆಯಲ್ಲಿ ಸುಮಾರು 40 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಚಂದ್ರಪ್ಪ, ಇಂದು ನಿವೃತ್ತಿ ಹೊಂದಿದ್ದರು. ಈ ಹಿನ್ನೆಲೆಯಲ್ಲಿ ಅವರಿಗೆ ಇಂದು ಕುಂಸಿ ಗ್ರಾಮದಲ್ಲಿ ಮೆಸ್ಕಾಂ ಇಲಾಖೆ ಅಧಿಕಾರಿಗಳು, ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಂಡಿದ್ದರು.
ಹೀಗಾಗಿ ಇಂದು ಚಂದ್ರಪ್ಪ ಕುಟುಂಬ, ಶಿವಮೊಗ್ಗ ಸಮೀಪದ ಇಟ್ಟಿಗೆ ಹಳ್ಳಿಯಲ್ಲಿ ಪೂಜೆ ನೆರವೇರಿಸಿಕೊಂಡು, ಕುಂಸಿಯ ಸಮಾರಂಭಕ್ಕೆ ಕಾರಿನಲ್ಲಿ ಹೊರಟಿದ್ದರು. ಅದರೆ ಕ್ಯಾಂಟರ್ ಲಾರಿಯಲ್ಲಿದ್ದ ಜವರಾಯ, ಕಾರಿನಲ್ಲಿದ್ದ ಐವರನ್ನು ಬಲಿ ತೆಗೆದುಕೊಂಡಿದ್ದು, ನಿವೃತ್ತಿ ಜೀವನದಲ್ಲಿ, ಕುಟುಂಬದೊಂದಿಗೆ ಸಂತೋಷದಿಂದ ಕಾಲ ಕಳೆಯಬೇಕೆಂದುಕೊಂಡಿದ್ದ ಚಂದ್ರಪ್ಪ, ಇದೀಗ ಏಕಾಂಗಿಯಾಗಿದ್ದಾರೆ.