ನವದೆಹಲಿ: ಮಹಿಳೆಯೊಬ್ಬರನ್ನು ರೇಪ್ ಮಾಡಿದ ಪ್ರಕರಣದಲ್ಲಿ ಧಾರ್ಮಿಕ ಗುರು ನಾರಾಯಣ್ ಸಾಯಿ ಅವರಿಗೆ ಗುಜರಾತ್ ನ್ಯಾಯಾಲಯವೊಂದು ಜೀವಾವಧಿ ಶಿಕ್ಷೆ ನೀಡಲಾಗಿದೆ. ಏಪ್ರಿಲ್ 26ರಂದು ನಾರಾಯಣ್ ಸಾಯಿ ಅವರನ್ನು ದೋಷಿ ಎಂದು ತೀರ್ಪಿತ್ತಿತ್ತು. ಇವತ್ತು ಶಿಕ್ಷೆಯ ಪ್ರಮಾಣ ಪ್ರಕಟಿಸಿದ ಕೋರ್ಟ್, ನಾರಾಯಣ್ ಸಾಯಿ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿ 1 ಲಕ್ಷ ರೂ ದಂಡವನ್ನೂ ಹಾಕಿದೆ. ಪ್ರಕರಣದಲ್ಲಿ ಇತರ ಆರೋಪಿಗಳಾದ ಗಂಗಾ, ಜಮುನಾ ಮತ್ತು ಹನುಮಾನ್ ಎಂಬುವವರಿಗೆ 10 ವರ್ಷ ಸೆರೆಮನೆವಾಸ ಹಾಗೂ ತಲಾ 10 ಸಾವಿರ ರೂ ದಂಡ ವಿಧಿಸಿದೆ. ರಮೇಶ್ ಮಲ್ಹೋತ್ರಾ ಎಂಬ ಮತ್ತೊಬ್ಬ ಆರೋಪಿಗೆ 6 ತಿಂಗಳು ಜೈಲುವಾಸದ ಶಿಕ್ಷೆ ಸಿಕ್ಕಿದೆ. ಹಾಗೆಯೇ, ಅತ್ಯಾಚಾರ ಸಂತ್ರಸ್ತೆ ಮಹಿಳೆಗೆ 5 ಲಕ್ಷ ರೂ ಪರಿಹಾರವನ್ನೂ ಒದಗಿಸಲು ಕೋರ್ಟ್ ಆದೇಶಿಸಿದೆ.
ನಾರಾಯಣ ಸಾಯಿ ಅವರು ಸ್ವಘೋಷಿತ ದೇವಮಾನವ ಅಸಾರಾಮ್ ಬಾಪು ಅವರ ಮಗನಾಗಿದ್ದಾರೆ. ಅಸಾರಾಮ್ ಅವರು ವಿವಿಧ ರೇಪ್ ಆರೋಪಗಳನ್ನು ಎದುರಿಸುತ್ತಿದ್ದು, ಒಂದು ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಈಗ ಮಗ ನಾರಾಯಣ ಸಾಯಿ ಅವರಿಗೂ ಜೀವಾವಧಿ ಶಿಕ್ಷೆ ಸಿಕ್ಕಿದೆ.
ಸೂರತ್ನ ಇಬ್ಬರು ಸೋದರಿಯರು ಅಸಾರಾಮ್ ಮತ್ತು ನಾರಾಯಣ ಸಾಯಿ ವಿರುದ್ಧ ಅತ್ಯಾಚಾರದ ಆರೋಪಗಳನ್ನು ಮಾಡಿದ್ದರು. ಮೋಟೇರಾದ ಆಶ್ರಮದಲ್ಲಿ 1997ರಿಂದ 2006ರ ಅವಧಿಯಲ್ಲಿ ಅಸಾರಾಮ್ ಅವರು ತನ್ನ ಮೇಲೆ ಅನೇಕ ಬಾರಿ ಅತ್ಯಾಚಾರ ಎಸಗಿದ್ದರು ಎಂದು ಹಿರಿಯ ಸೋದರಿಯು ದೂರು ನೀಡಿದ್ದರು. ಸೂರತ್ನ ಆಶ್ರಮದಲ್ಲಿ 2002-2005ರ ಅವಧಿಯಲ್ಲಿ ನಾರಾಯಣ ಸಾಯಿಯಿಂದ ತನ್ನ ಮೇಲೆ ಅತ್ಯಾಚಾರಗಳಾಗಿದ್ದವು ಎಂದು ಕಿರಿಯ ಸೋದರಿ ದೂರು ನೀಡಿದ್ದರು. 2013ರಲ್ಲಿ ಎಫ್ಐಆರ್ ದಾಖಲಾಯಿತು. ಆ ನಂತರ ನಾರಾಯಣ ಸಾಯಿ ತಮ್ಮ ಆಶ್ರಮದಿಂದ ನಾಪತ್ತೆಯಾಗಿದ್ದರು. ಅವರನ್ನು ಹುಡುಕಲು ಸೂರತ್ ಪೊಲೀಸರು 58 ತಂಡಗಳನ್ನು ರಚಿಸಿದ ಫಲವಾಗಿ ನಾರಾಯಣ ಸಾಯಿ ಅದೇ ವರ್ಷದ ಡಿಸೆಂಬರ್ನಲ್ಲಿ ಸಿಕ್ಕಿಬಿದ್ದರು. ಕಾರಾಗೃಹದಲ್ಲಿದ್ದಾಗಲೇ ಅವರು ಪೊಲೀಸ್ ಅದಿಕಾರಿಗಳಿಗೆ 13 ಕೋಟಿ ರೂ ಲಂಚ ಕೊಡಲು ಯತ್ನಿಸಿದ ಆರೋಪವೂ ಇದೆ.
ಕಿರಿಯ ಸೋದರಿ ನೀಡಿರುವ ದೂರಿನ ಮೇಲೆ ದಾಖಲಾದ ಪ್ರಕರಣದಲ್ಲಿ ನಾರಾಯಣ ಸಾಯಿ ಅತ್ಯಾಚಾರಿ ಎಂಬುದು ಕೋರ್ಟ್ನಲ್ಲಿ ಸಾಬೀತಾಗಿ ಈಗ ಶಿಕ್ಷೆ ಪ್ರಕಟಿಸಲಾಗಿದೆ.
Comments are closed.