ಕರ್ನಾಟಕ

ವೇಣುಗೋಪಾಲ ದೇವಸ್ಥಾನದಲ್ಲಿ ಆನಂದ್ ಸಿಂಗ್ ಭೇಟಿಯಾದ ಕಂಪ್ಲಿ ಶಾಸಕ ಗಣೇಶ್!

Pinterest LinkedIn Tumblr


ಬಳ್ಳಾರಿ: ಬಳ್ಳಾರಿ ಕೈ ಶಾಸಕರಿಬ್ಬರ ಬಡಿದಾಟ ಪ್ರಕರಣ ಸುಖಾಂತ್ಯವಾಗುತ್ತಾ? ಹೀಗೊಂದು ಪ್ರಶ್ನೆ ಗಣಿನಾಡು ಬಳ್ಳಾರಿಯಲ್ಲಿ ಹೆಚ್ಚಾಗಿ ಹರಿದಾಡುತ್ತಿದೆ. ಅದರಲ್ಲೂ ಆರೋಪಿ ಶಾಸಕ ಜೆ ಎನ್ ಗಣೇಶ್ ಜಾಮೀನು ಮೇಲೆ ಹೊಸಪೇಟೆಗೆ ಬಂದಾಗಿನಿಂದ ಆ ಪ್ರಶ್ನೆ ಹೆಚ್ಚಾಗಿ ಕೇಳಿಬರುತ್ತಿದೆ. ‘ಆನಂದ್ ಸಿಂಗ್ ಈಗಲೂ ನನಗೆ ಅಣ್ಣ! ಮುಂದೆ ಎಲ್ಲ ಒಳ್ಳೆಯದಾಗುತ್ತೆ’ ಎಂದು ನ್ಯೂಸ್ 18 ಗೆ ಸಂದರ್ಶನ ನೀಡುವ ಮೊದಲು ಹೊಸಪೇಟೆಯಲ್ಲಿ ಬೆಳಗ್ಗೆ ಮಹತ್ತರವಾದ ಘಟನೆ ನಡೆದಿದೆ.

ಎರಡುವರೆ ತಿಂಗಳು ಜೈಲುವಾಸ ಅನುಭವಿಸಿ ಜಾಮೀನಿನ ಮೇಲೆ ಜೈಲಿನಿಂದ ಹೊರ ಬಂದಿರುವ ಕಂಪ್ಲಿ ಕ್ಷೇತ್ರದ ಶಾಸಕ ಜೆ ಎನ್ ಗಣೇಶ್ ಫುಲ್ ಆಕ್ಟಿವ್ ಆಗಿದ್ದಾರೆ. ಬಿಡದಿ ರೆಸಾರ್ಟ್ ನಲ್ಲಿ ವಿಜಯನಗರ ಕ್ಷೇತ್ರದ ಶಾಸಕ ಬಿ ಎಸ್ ಆನಂದ್ ಸಿಂಗ್ ಮೇಲೆ ಹಲ್ಲೆ ಪ್ರಕರಣದಲ್ಲಿ ಜೈಲುಪಾಲಾಗಿದ್ದ ಗಣೇಶ್ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿತ್ತು. ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಈ ಪ್ರಕರಣದಿಂದಾಗಿ ಎರಡೂ ಕ್ಷೇತ್ರದಲ್ಲಿಯೂ ಕಾಂಗ್ರೆಸ್ ಹೊಡೆತ ಬಿದ್ದಿರುವುದು ಸತ್ಯ. ಇಂಥ ಸಂದರ್ಭದಲ್ಲಿ ಕಳೆದೆರಡು ದಿನಗಳಿಂದ ಹೊಸಪೇಟೆಯಲ್ಲಿ ಬಹಳಷ್ಟು ಬೆಳವಣಿಗೆ ನಡೆಯುತ್ತಿದೆ.

ದೇವಸ್ಥಾನಕ್ಕೆ ಭೇಟಿ ನೀಡಿದ ಶಾಸಕ ಗಣೇಶ್

ಜೆಎನ್ ಗಣೇಶ್ ಅವರು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಿಂದ ಹೊರ ಬಂದ ಬಳಿಕ ಹೊಸಪೇಟೆಯ ಪಟೇಲ್ ನಗರದಲ್ಲಿರುವ ವೇಣುಗೋಪಾಲ ಶ್ರೀಕೃಷ್ಣ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಈ ವೇಳೆ ಕೆಲವೇ ಕೆಲವು ಆಪ್ತರು ಬಿಟ್ಟರು ಮತ್ತಾರು ಇರುವುದಿಲ್ಲ. ದೇವಸ್ಥಾನಕ್ಕೆ ತೆರಳುವ ಸಂದರ್ಭದಲ್ಲಿ ತಾವೊಬ್ಬರೇ ಸೈಲೆಂಟ್ ಆಗಿ ಅಲ್ಲಿಗೆ ದರ್ಶನಕ್ಕೆ ಹೋಗುತ್ತಾರೆ. ಆಗಲೇ ಗೊತ್ತಾಗುತ್ತೆ, ಅಲ್ಲಿಯೇ ಆನಂದ್ ಸಿಂಗ್ ಇದ್ದಾರೆಂದು!
ಏಪ್ರಿಲ್ 26ರ ಬೆಳಗ್ಗೆ 9 ಗಂಟೆ ಸುಮಾರಿಗೆ ವೇಣುಗೋಪಾಲ ಕೃಷ್ಣನ ದೇಗುಲಕ್ಕೆ ತೆರಳಿದ ಶಾಸಕ ಗಣೇಶ್ ಬರೋಬ್ಬರಿ ಒಂದು ಗಂಟೆಯ ನಂತರ ವಾಪಸ್ಸಾಗುತ್ತಾರೆ. ಮೇಲಾಗಿ ದೇವಸ್ಥಾನದಲ್ಲಿ ಹೊರಗಡೆಯವರು ಇರುವುದಿಲ್ಲ. ಯಾರಿಗೂ ಅನುಮಾನ ಬಾರದಂತೆ ಒಂದು ಗಂಟೆ ಕಾಲ ಗಹನವಾದ ಚರ್ಚೆ ನಡೆದಿದೆ.

ಪ್ರಕರಣ ಸಂಬಂಧ ಕುರಿತು ವಿಸ್ತಾರವಾಗಿ ಮುಖಾಮುಖಿಯಲ್ಲಿ ಚರ್ಚೆಯಾಗಿದೆ. ಈ ಸಂದರ್ಭ ಗಣೇಶ್ ದೇಗುಲ ಸಮ್ಮುಖದಲ್ಲಿ ಕ್ಷಮಾಪಣೆ ಕೇಳಿದ್ದಾರೆ. ಮುಂದೆ ಎಂದೆಂದೂ ಈ ರೀತಿ ನಡೆಯುವುದಿಲ್ಲ ಎಂದು ಪ್ರಮಾಣ ಮಾಡುತ್ತಾರೆ. ಘಟನೆಯ ಹಿಂದಿನ ಮರ್ಮದ ಬಗ್ಗೆ ಚರ್ಚೆಯಾಗಿದೆ. ಕಾಣದ ಕೈಗಳ ಬಗ್ಗೆಯೂ ಇವರು ಮಾತಾಡಿದ್ದಾರೆ. ಈ ಭೇಟಿ ವೇಳೆ ಗಣೇಶ್ ಜೊತೆ ಒಬ್ಬರು, ಆನಂದ್ ಸಿಂಗ್ ಜೊತೆ ಒಬ್ಬರು ಮಾತ್ರ ಇದ್ದರು. ಅಷ್ಟಕ್ಕೂ ದೇವಸ್ಥಾನದಲ್ಲಿ ಮೀಟಿಂಗ್ ಏರ್ಪಾಟು ಮಾಡಿ ಇಬ್ಬರು ಕೈ ಶಾಸಕರನ್ನು ಒಂದೆಡೆ ಸೇರಿಸಿದ್ದು ಸೈಯದ್ ಸಮೀವುಲ್ಲ. ಹೊಸಪೇಟೆಯ ಕಮಲಾಪುರ ಪಟ್ಟಣದ ಸಮೀವುಲ್ಲ ಅವರು ಆನಂದ್ ಸಿಂಗ್ ಹಾಗೂ ಗಣೇಶ್ ಇಬ್ಬರಿಗೂ ಆಪ್ತರು. ಇವರ ಮಧ್ಯಸ್ತಿಕೆಯಲ್ಲಿ ರಾಜ್ಯ ನಾಯಕರ ಸೂಚನೆಯ ಮೇರೆಗೆ ಮೀಟಿಂಗ್ ನಡೆದಿದೆಯೆಂದು ಹೇಳಲಾಗುತ್ತಿದೆ ಎಂದು  ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಬೆಂಬಲಿಗರು ಹಾಗೂ ಆನಂದ ಸಿಂಗ್ ಆಪ್ತರೊಂದಿಗೆ ಚರ್ಚೆ

ಹಲ್ಲೆ ಘಟನೆ ನಡೆದ ಬಳಿಕ ಇದೇ ಮೊದಲ ಬಾರಿಗೆ ತಮ್ಮ ರಾಜಕೀಯ ಗುರುವಾಗಿರುವ ಆನಂದ್ ಸಿಂಗ್ ಭೇಟಿ ಮಾಡಿದ ಗಣೇಶ್ ಆನಂತರ ಮನೆಗೆ ತೆರಳಿ ಹಾಯಾಗಿ ಮಧ್ಯಾಹ್ನದವರೆಗೆ ನಿದ್ರೆ ಮಾಡಿದ್ದಾರೆ. ಅದಾದ ಬಳಿಕ ಕಾರ್ಯಕರ್ತರು, ಬೆಂಬಲಿಗರ ಜೊತೆ ಚರ್ಚೆ, ಸಮಾಲೋಚನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಗಣೇಶ್ ನ್ಯೂಸ್ 18ಗೆ ನೀಡಿದ ಸಂದರ್ಶನದಲ್ಲಿ ‘ಮುಂದೆ ಎಲ್ಲವೂ ಒಳ್ಳೆಯದಾಗುತ್ತದೆ. ನೀವೇ ನೋಡುತ್ತಿರಿ, ಆನಂದ್ ಸಿಂಗ್ ಈಗಲೂ ನನಗೆ ಅಣ್ಣನೇ! ಎಂದು ಭೇಟಿ ಕಾರಣಕ್ಕೆ ವಿಶ್ವಾಸದ ಮಾತಾಡಿದ್ದಾರೆ ಎಂದನಿಸುತ್ತದೆ.

ಇಂದು ತಮ್ಮ ರಾಜಕೀಯ ಗುರು, ಮಾರ್ಗದರ್ಶಕರಾದ ಕೆಪಿಸಿಸಿ ಉಪಾಧ್ಯಕ್ಷ ಸೂರ್ಯನಾರಾಯಣ ರೆಡ್ಡಿ ಅವರನ್ನು ಭೇಟಿ ಮಾಡಿ ಆರ್ಶಿವಾದ ಪಡೆದು, ಬೆಂಬಲ ಪಡೆದಿದ್ದಾರೆ. ಪ್ರಕರಣದಲ್ಲಿ ಇಬ್ಬರ ನಡುವೆ ಸಂಧಾನ ಮಾಡುವ ಕಾರ್ಯವನ್ನು ಮಾಡುತ್ತೇವೆ ಎಂದು ಇದೇ ಸಂದರ್ಭದಲ್ಲಿ ರೆಡ್ಡಿ ಪುನರುಚ್ಚರಿಸಿರುವುದು ಪ್ರಕರಣ ಸುಖಾಂತ್ಯ ಮಾಡಲು ಕೈ ನಾಯಕರು ಬಹುತೇಕ ಯಶಸ್ವಿ ಕಾಣಲು ದಿಟ್ಟ ಹಜ್ಜೆ ಇಟ್ಟಿದ್ದಾರೆ.

Comments are closed.