
ಲಕ್ನೋ: ಪ್ರಧಾನಿ ನರೇಂದ್ರ ಮೋದಿ ಹಿಂದುಳಿದ ವರ್ಗದ ಸಮುದಾಯಕ್ಕೆ ಸೇರಿದವರಾ ಅಲ್ಲವಾ ಎಂಬ ಚರ್ಚೆ ಕಳೆದ 5 ವರ್ಷಗಳಿಂದಲೂ ನಡೆಯುತ್ತಲೇ ಬಂದಿದೆ. ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಅವರೂ ಈ ವಿಚಾರವನ್ನು ಕೆದಕಿ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮೋದಿ ಅವರು ಅತ್ಯಂತ ಹಿಂದುಳಿದ ಜಾತಿಗೆ ಸೇರಿದ್ದೇನೆಂದು ನೀಡಿದ್ದ ಹೇಳಿಕೆಯನ್ನು ಮಾಯಾವತಿ ಅಲ್ಲಗಳೆದಿದ್ದಾರೆ. ಮೋದಿ ಅವರು ಮೇಲ್ಜಾತಿಯವರಾಗಿದ್ದಾರೆ. ಗುಜರಾತ್ ಸಿಎಂ ಆದಾಗ ಅವರು ತಮ್ಮ ಸಮುದಾಯವನ್ನು ಓಬಿಸಿ ಕೆಟಗರಿಗೆ ಸೇರಿಸಿದ್ದಾರೆ. ಇದು ರಾಜಕೀಯ ಲಾಭಕ್ಕಾಗಿ ಅವರು ಮಾಡಿದ ನಿರ್ಧಾರವಾಗಿತ್ತು ಎಂದು ಮಾಯಾವತಿ ಆರೋಪಿಸಿದ್ದಾರೆ.
ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುತ್ತಿದ್ದ ಮಾಯಾವತಿ ಅವರು ತಾವಾಗಲೀ ಅಥವಾ ತಮ್ಮ ಪಕ್ಷದ ಕಾರ್ಯಕರ್ತರಾಗಲೀ ಮೋದಿ ಅವರ ಜಾತಿಯನ್ನುದ್ದೇಶಿಸಿ ನೀಚ ಎಂದು ಹೇಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
“ನಾವು ಯಾವತ್ತೂ ಅವರನ್ನು ನೀಚ ಎಂದು ಸಂಬೋಧಿಸಿಲ್ಲ. ಅವರು ಮೇಲ್ಜಾತಿ ಎಂದು ಗೌರವಪೂರ್ವಕವಾಗಿಯೇ ಹೇಳಿದ್ದೇವೆ. ಮುಲಾಯಂ ಮತ್ತು ಅಖಿಲೇಶ್ ಅವರಂತೆ ಮೋದಿ ಅವರು ಹಿಂದುಳಿದವರಲ್ಲ ಎಂದು ನಾನು ಹೇಳಿದ್ದರಲ್ಲಿ ತಪ್ಪೇನಿಲ್ಲ. ಇವತ್ತಿನಿಂದ ನರೇಂದ್ರ ಮೋದಿ ಅವರು ಜಾತಿ ರಾಜಕಾರಣ ಮಾಡುವುದನ್ನು ನಿಲ್ಲಿಸಬಹುದೆಂಬ ನಂಬಿಕೆ ಇದೆ” ಎಂದು ಮಾಯಾವತಿ ಹೇಳಿದ್ದಾರೆ.
ಇದಕ್ಕೂ ಮುನ್ನ ಕನ್ನೌಜ್ನಲ್ಲಿ ಮಾತನಾಡುತ್ತಾ ಪ್ರಧಾನಿ ಮೋದಿ ಅವರು ತಮ್ಮ ಜಾತಿ ಬಗ್ಗೆ ಕೆಲ ಸ್ಪಷ್ಟನೆಗಳನ್ನ ಕೊಟ್ಟರು.
“ನಾನು ಹಿಂದುಳಿದವನಲ್ಲ, ಆದರೆ ಅತ್ಯಂತ ಹಿಂದುಳಿದ ವರ್ಗಗಳಿಗೆ ಸೇರಿದವನು. ನನ್ನ ಜಾತಿಯನ್ನು ನೆನಪು ಮಾಡಿದ್ದಕ್ಕೆ ಮಾಯಾವತಿ, ಅಖಿಲೇಶ್ ಮತ್ತು ಕಾಂಗ್ರೆಸ್ಗೆ ಧನ್ಯವಾದ ಹೇಳಬಯಸುತ್ತೇನೆ. ನನ್ನ ಜಾತಿ ಎಷ್ಟು ಸಣ್ಣದೆಂದರೆ ನನ್ನ ಗ್ರಾಮದಲ್ಲಿ ನನ್ನ ಜಾತಿಯ 2-3 ಮನೆಗಳು ಮಾತ್ರ ಇವೆ” ಎಂದು ನರೇಂದ್ರ ಮೋದಿ ಹೇಳಿದರು.
“ಹಿಂದುಳಿದ ಜಾತಿ ಎಂಬುದು ಎಸ್ಪಿ-ಬಿಎಸ್ಪಿಗೆ ರಾಜಕಾರಣದ ವಿಚಾರವಾಗಿರಬಹುದು. ನನಗೆ ಅದು ನನ್ನ ದೇಶ ಸೇವೆ ಮಾಡಲು ಒಂದು ಅವಕಾಶವಾಗಿದೆ. ನನ್ನನ್ನು ಜಾತಿ ರಾಜಕಾರಣಕ್ಕೆ ಎಳೆಯಬೇಡಿ ಎಂದು ಕೇಳಿಕೊಳ್ಳುತ್ತೇನೆ” ಎಂದು ಮೋದಿ ಟೀಕಿಸಿದ್ದರು.
Comments are closed.