ಬೆಂಗಳೂರು: ಡಾ. ಉಮೇಶ್ ಜಾಧವ್ ಅವರು ರಾಜೀನಾಮೆಯಿಂದ ತೆರವಾದ ಚಿಂಚೋಳಿ ಹಾಗೂ ಸಿಎಸ್ ಶಿವಳ್ಳಿ ನಿಧನದಿಂದ ತೆರವಾದ ಕುಂದಗೋಳ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಕಲಬುರ್ಗಿ ಜಿಲ್ಲೆಯಲ್ಲಿರುವ ಚಿಂಚೊಳ್ಳಿ ಕ್ಷೇತ್ರಕ್ಕೆ ಮಲ್ಲಿಕಾರ್ಜುನ ಖರ್ಗೆ ಆಪ್ತ ಸುಭಾಷ್ ರಾಠೋಡ ಅವರಿಗೆ ಕೈ ಟಿಕೆಟ್ ಸಿಕ್ಕಿದೆ. ಧಾರವಾಡ ಜಿಲ್ಲೆಯ ಕುಂದಗೋಳ ಕ್ಷೇತ್ರಕ್ಕೆ ದಿವಂಗತ ಸಿಎಸ್ ಶಿವಳ್ಳಿ ಅವರ ಪತ್ನಿ ಕುಸುಮಾವತಿ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ನಿರ್ಧರಿಸಿದೆ. ಕೆಪಿಸಿಸಿ ಕಚೇರಿಯಲ್ಲಿ ಇಂದು ನಡೆದ ಸಭೆಯಲ್ಲಿ ಈ ಇಬ್ಬರ ಹೆಸರನ್ನು ಅಂತಿಮಗೊಳಿಸಲಾಯಿತು.
ಚಿಂಚೊಳ್ಳಿ ಕ್ಷೇತ್ರಕ್ಕೆ ಸಖತ್ ಫೈಟ್:
ಚಿಂಚೋಳಿ ಕ್ಷೇತ್ರದ ಟಿಕೆಟ್ಗೆ ತೀವ್ರ ಕಸರತ್ತು, ಲಾಬಿ ನಡೆದಿತ್ತು. ಬಾಬುರಾವ್ ಚವ್ಹಾಣ, ಹೊನ್ನನಾಯಕ್, ಸುಭಾಷ್ ರಾಠೋಡ್, ಜೈ ಸಿಂಗ್ ರಾಠೋಡ್ ಮೊದಲಾದವರು ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಮಲ್ಲಿಕಾರ್ಜುನ ಖರ್ಗೆ ಅವರು ಸುಭಾಷ್ ರಾಠೋಡ ಅವರ ಪರ ಬಲವಾಗಿ ಲಾಬಿ ನಡೆಸಿದರೆ, ಬೀದರ್ನ ಪ್ರಬಲ ಮುಖಂಡ ಈಶ್ವರ್ ಖಂಡ್ರೆ ಅವರು ಜೈ ಸಿಂಗ್ ರಾಠೋಡ ಅವರಿಗೆ ಟಿಕೆಟ್ ಕೊಡಿಸಲು ಇನ್ನಿಲ್ಲದ ಪ್ರಯತ್ನ ನಡೆಸಿದ್ದರು.
ಖರ್ಗೆ ಹೇಳಿದವರಿಗೆ ಟಿಕೆಟ್ ನೀಡಲು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆಗೆ ಇಷ್ಟವಿರಲಿಲ್ಲ. ಈ ಕ್ಷೇತ್ರ ತನ್ನ ವ್ಯಾಪ್ತಿಗೆ ಬರುತ್ತದೆ. ಖರ್ಗೆ ನಿರ್ಧಾರ ತೆಗೆದುಕೊಳ್ಳುವುದು ಸರಿ ಅಲ್ಲ ಎಂದು ಖಂಡ್ರೆ ಅಸಮಾಧಾನವನ್ನು ಹೊರಹಾಕಿದ್ದಾರೆ. ಜಿಲ್ಲಾ ಪಂಚಾಯತ್ ಸದಸ್ಯ ಜೈಸಿಂಗ್ ರಾಠೋಡ್ ಅವರನ್ನು ಅಭ್ಯರ್ಥಿಯನ್ನಾಗಿಸಲು ಅವರು ತೆರೆಮರೆಯಲ್ಲಿ ಕಸರತ್ತು ನಡೆಸಿದ್ದರೆನ್ನಲಾಗಿದೆ.
ಇನ್ನು, ಈಶ್ವರ್ ಖಂಡ್ರೆ ಅವರ ಹಸ್ತಕ್ಷೇಪದ ಬಗ್ಗೆ ಮಲ್ಲಿಕಾರ್ಜುನ್ ಖರ್ಗೆ ಅವರಿಗೂ ಇರಿಸುಮುರಿಸು ಉಂಟಾಗಿತ್ತು. ಪಕ್ಕದ ಜಿಲ್ಲೆಯವರಿಗೆ ನಮ್ಮ ಜಿಲ್ಲೆಯ ಬಗ್ಗೆ ತಲೆ ಹಾಕುವುದು ಎಷ್ಟರ ಮಟ್ಟಿಗೆ ಸರಿ ಎಂದು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದರೆನ್ನಲಾಗಿದೆ.
ಚಿಂಚೋಳಿಯು ಕಲಬುರ್ಗಿ ಜಿಲ್ಲೆಗೆ ಸೇರಿದ್ದಾದರೂ ಬೀದರ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಹೀಗಾಗಿ, ಮಲ್ಲಿಕಾರ್ಜುನ ಖರ್ಗೆ ಮತ್ತು ಈಶ್ವರ್ ಖಂಡ್ರೆ ಇಬ್ಬರೂ ಈ ಕ್ಷೇತ್ರದ ಮೇಲೆ ಅಧಿಕಾರ ತೋರಿಸಲು ಆಸಕ್ತರಾಗಿದ್ದರು.
ಚಿಂಚೋಳಿ ಕ್ಷೇತ್ರಕ್ಕೆ ಡಿಸಿಎಂ ಉಸ್ತುವಾರಿ
ಇದೇ ವೇಳೆ, ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕುಂದಗೋಳ ಕ್ಷೇತ್ರಕ್ಕೆ ಕುಸುಮಾವತಿ ಶಿವಳ್ಳಿ ಅವರ ಹೆಸರನ್ನು ಅಂತಿಮಗೊಳಿಸಲು ಕಾಂಗ್ರೆಸ್ ಮುಖಂಡರಿಗೆ ಹೆಚ್ಚೇನೂ ಸಮಸ್ಯೆ ಸೃಷ್ಟಿಯಾಗಲಿಲ್ಲ.
ಇದೇ ವೇಳೆ, ಚಿಂಚೊಳ್ಳಿ ಕ್ಷೇತ್ರದ ಕಾಂಗ್ರೆಸ್ ಚುನಾವಣಾ ಉಸ್ತುವಾರಿಯನ್ನು ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರಿಗೆ ವಹಿಲಾಗಿದೆ. ಇವರ ಜೊತೆ ಪ್ರಿಯಾಂಕ್ ಖರ್ಗೆ, ರಾಜಶೇಖರ ಪಾಟೀಲ್, ರಹೀಂ ಖಾನ್, ಪರಮೇಶ್ವರ್ ನಾಯ್ಕ್, ತುಕಾರಾಂ ನೆರವಾಗಲಿದ್ದಾರೆ. ಹಾಗೆಯೇ ಪ್ರತಿ ಜಿಲ್ಲಾ ಪಂಚಾಯತಿಗೆ ಒಬ್ಬ ಮಂತ್ರಿ ಹಾಗೂ ಇಬ್ಬರು ಶಾಸಕರು ಜೊತೆಗೆ ಚುನಾವಣಾ ಉಸ್ತುವಾರಿ ಆದೇಶ ಪಾಲಿಸಬೇಕು. ಜವಾಬ್ದಾರಿ ಹೊತ್ತ ಸಚಿವರು, ಶಾಸಕರು 15 ದಿನ ಅಲ್ಲಿಯೇ ವಾಸ್ತವ್ಯ ಹೂಡುವಂತೆ ಕೆ ಸಿ ವೇಣುಗೋಪಾಲ್ ಸೂಚನೆ ನೀಡಿದ್ದಾರೆ
ಇದೇ ರೀತಿ ಕುಂದಗೋಳ ಕ್ಷೇತ್ರಕ್ಕೆ ಸಚಿವ ಡಿಕೆ ಶಿವಕುಮಾರ ವಹಿಸಲಾಗಿದೆ. ಇವರಿಗೆ ಸಚಿವರಾದ ಎಂ ಬಿ ಪಾಟೀಲ್, ಶಿವಾನಂದ ಪಾಟೀಲ, ಎಂಟಿಬಿ ನಾಗರಾಜ್, ಶಾಸಕರಾದ ಭೈರತಿ ಸುರೇಶ, ಭೈರತಿ ಬಸವರಾಜ ಸೇರಿ ಪ್ರತಿ ಜಿಲ್ಲಾ ಪಂಚಾಯತಿಗೆ ಒಬ್ಬ ಸಚಿವರು ಹಾಗೂ ಶಾಸಕರು ಉಸ್ತುವಾರಿ ಮಾಡಿ ನೇಮಕ ಮಾಡಲಾಗಿದೆ.
ಚಿಂಚೋಳಿ ಮತ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಉಮೇಶ್ ಜಾಧವ್ ಅವರು 19 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಜಯಭೇರಿ ಭಾರಿಸಿದ್ದರು. ಬಿಜೆಪಿಯ ಸುನೀಲ್ ವಲ್ಯಾಪುರೆ ಅವರು 54,693 ಮತ ಪಡೆದು ಎರಡನೇ ಸ್ಥಾನ ಪಡೆದಿದ್ದರು.
ಚಿಂಚೋಳಿಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಡಾ. ಉಮೇಶ್ ಜಾಧವ್ ಅವರ ಸಹೋದರ ರಾಮಚಂದ್ರ ಜಾಧವ್ ಅಥವಾ ಪುತ್ರ ಡಾ. ಅವಿನಾಶ್ ಜಾಧವ್ ಕಣಕ್ಕಿಳಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಉಮೇಶ್ ಜಾಧವ್ ಸೂಚಿಸಿದವರಿಗೆ ಟಿಕೆಟ್ ನೀಡಲು ಪಕ್ಷ ಮುಂದಾಗಿದ್ದು, ಈ ಹಿಂದೆ ನೀಡಿದ್ದ ಮಾತಿನಂತೆಯೇ ಬಿಜೆಪಿ ನಾಯಕರು ಜಾಧವ್ ಕುಟುಂಬಕ್ಕೆ ಟಿಕೆಟ್ ನೀಡಲು ತೀರ್ಮಾನಿಸಿದ್ದಾರೆ.
ಮೇ 19ರಂದು ಈ ಎರಡೂ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ಮೇ 23ರಂದು ಫಲಿತಾಂಶ ಪ್ರಕಟವಾಗುತ್ತದೆ.
Comments are closed.