ಅಂತರಾಷ್ಟ್ರೀಯ

ಚೀನಾದಿಂದ ನಮ್ಮ ದೇಶಕ್ಕೆ ವಲಸೆ ಬರಲು 200 ಅಮೆರಿಕನ್ ಕಂಪನಿಗಳು ಆಸಕ್ತಿ?

Pinterest LinkedIn Tumblr


ವಾಷಿಂಗ್ಟನ್: ಚೀನಾದ ಆರ್ಥಿಕ ಅಭಿವೃದ್ಧಿಗೆ ತಯಾರಿಕಾ ಕ್ಷೇತ್ರದ ಕೊಡುಗೆ ಪ್ರಮುಖವಾದುದು. ವಿಶ್ವಮಟ್ಟದಲ್ಲಿ ಭಾರತಕ್ಕಿಂತ ವೇಗವಾಗಿ ಚೀನಾ ನಾಗಾಲೋಟ ನಡೆಸಲು ಈ ಕ್ಷೇತ್ರದಲ್ಲಿ ಅದು ತೋರಿದ ಗಣನೀಯ ಪ್ರಗತಿಯೇ ಕಾರಣ. ಸ್ಥಳೀಯ ಚೀನೀ ಕಂಪನಿಗಳಷ್ಟೇ ಅಲ್ಲ ವಿಶ್ವದ ಅನೇಕ ರಾಷ್ಟ್ರಗಳ ಕಂಪನಿಗಳು ಚೀನಾದಲ್ಲಿ ತಯಾರಿಕಾ ಘಟಕಗಳನ್ನ ಹೊಂದಿವೆ. ಇಂತಹ ಅನೇಕ ಕಂಪನಿಗಳು ಈಗ ಚೀನಾದಿಂದ ಆಚೆ ಸೂಕ್ತ ಸ್ಥಳಗಳನ್ನು ಹುಡುಕುತ್ತಿವೆ. ಅವುಗಳ ಆಯ್ಕೆ ಪಟ್ಟಿಯಲ್ಲಿ ಭಾರತವೂ ಸೇರಿದೆ. ಅಮೆರಿಕ-ಭಾರತ ಕಾರ್ಯತಂತ್ರ ಮತ್ತು ಪಾಲುದಾರಿಕೆ ವೇದಿಕೆ(ಯುಎಸ್​ಐಎಸ್​ಪಿಎಫ್ – USISPF) ಎಂಬ ಸಂಸ್ಥೆಯ ಪ್ರಕಾರ ಚೀನಾದಲ್ಲಿ ಮ್ಯಾನುಫ್ಯಾಕ್ಚರಿಂಗ್ ಘಟಕಗಳನ್ನ ಹೊಂದಿರುವ ಸುಮಾರು 200 ಅಮೆರಿಕನ್ ಕಂಪನಿಗಳು ಭಾರತದ ಬಗ್ಗೆ ಆಸಕ್ತಿ ತಳೆದಿವೆಯಂತೆ. ಚೀನಾದ ಬದಲು ಭಾರತದಲ್ಲಿ ತಯಾರಿಕಾ ಘಟಕಗಳನ್ನ ಸ್ಥಾಪಿಸಲು ಈ ಕಂಪನಿಗಳು ಯೋಜಿಸಿವೆ. ಆದರೆ, ಭಾರತದಲ್ಲಿ ಇದಕ್ಕೆ ಬೇಕಾದ ಕೆಲ ಪೂರಕ ವಾತಾವರಣವನ್ನು ಈ ಕಂಪನಿಗಳು ನಿರೀಕ್ಷಿಸುತ್ತಿವೆ.

ಸಾರ್ವತ್ರಿಕ ಚುನಾವಣೆಗಳ ಬಳಿಕ ಈ ನಿಟ್ಟಿನಲ್ಲಿ ಮಹತ್ವದ ಪ್ರಸ್ತಾವನೆಗಳು ನಡೆದು ಸೂಕ್ತ ಕಾರ್ಯತಂತ್ರ ರೂಪಿಸುವ ಸಾಧ್ಯತೆ ಇದೆ. USISPF ಅಧ್ಯಕ್ಷ ಮುಕೇಶ್ ಆಘಿ ಅವರು ಈ ಬೆಳವಣಿಗೆಗೆ ಪೂರಕವಾದ ಕಾರ್ಯತಂತ್ರ ರೂಪಿಸಲು ಈಗಾಗಲೇ ಶ್ರಮ ವಹಿಸುತ್ತಿದ್ದಾರೆ. ಚುನಾವಣೆ ನಂತರ ಅಸ್ತಿತ್ವಕ್ಕೆ ಬರುವ ನೂತನ ಸರಕಾರದ ಆರ್ಥಿಕ ನೀತಿ ಮತ್ತು ಸುಧಾರಣೆ ಕ್ರಮಗಳನ್ನು ಇವರು ಅವಲೋಕಿಸಿ ತಮ್ಮ ಸಲಹೆಗಳನ್ನೂ ನೀಡಲಿದ್ಧಾರೆ.

ಪೂರಕ ವಾತಾವರಣ ಏನಿರಬೇಕು?

ಕಳೆದ ಒಂದೆರಡು ವರ್ಷಗಳಿಂದ ಅಮೆರಿಕನ್ ಕಂಪನಿಗಳು ಭಾರತದತ್ತ ಒಂದು ಕಣ್ಣಿಟ್ಟಿವೆ. ಇ-ಕಾಮರ್ಸ್, ಡೇಟಾ ಲೋಕಲೈಸೇಶನ್ ಇತ್ಯಾದಿ ವಿಚಾರದಲ್ಲಿ ಸರಕಾರ ಕೈಗೊಂಡ ಕ್ರಮಗಳನ್ನು ಗಮನಿಸುತ್ತಿವೆ. ಈ ಹಿನ್ನೆಲೆಯಲ್ಲಿ ಆರ್ಥಿಕ ಸುಧಾರಣೆ ಕ್ರಮಗಳು ಇನ್ನಷ್ಟು ಪಾರದರ್ಶಕವಾಗಿರುವಂತೆ ನೋಡಿಕೊಳ್ಳಬೇಕು ಎಂದು ಮುಕೇಶ್ ಆಘಿ ಹೇಳುತ್ತಾರೆ.

ಅಮೆರಿಕನ್ ಕಂಪನಿಗಳನ್ನು ಆಕರ್ಷಿಸಲು ಭಾರತ ತನ್ನ ಸುಧಾರಣಾ ಕ್ರಮಗಳಿಗೆ ಇನ್ನಷ್ಟು ವೇಗ ಕೊಡಬೇಕು. ಅಮೆರಿಕನ್ ಕಂಪನಿಗಳಿಗೆ ಅಗತ್ಯಗಳೇನು ಎಂಬುದನ್ನು ತಿಳಿದು ಅದಕ್ಕೆ ತಕ್ಕಂತಹ ವಾತಾರಣ ನಿರ್ಮಿಸಬೇಕು. ಕಂಪನಿಗಳ ಅಸ್ತಿತ್ವಕ್ಕೆ ಮೂಲಭೂತವಾಗಿರುವ ಭೂವ್ಯಾಜ್ಯಗಳಿಂದ ಹಿಡಿದು ಸುಂಕದ ಸಮಸ್ಯೆಗಳವರೆಗೂ ಎಲ್ಲವನ್ನೂ ಸರಿ ಮಾಡಬೇಕು. ಬಹಳ ಬಹಳ ಸುಧಾರಣೆಗಳನ್ನು ಮಾಡಬೇಕಿದೆ ಎಂದು ಮುಕೇಶ್ ಆಘಿ ತಿಳಿಸುತ್ತಾರೆ.

ಇದೇ ವೇಳೆ, ಭಾರತದಲ್ಲಿ ಚೀನಾದ ಕಡಿಮೆ ಬೆಲೆಯ ವಸ್ತುಗಳ ಪೈಪೋಟಿಯನ್ನು ಎದುರಿಸಲು ಮುಕೇಶ್ ಅವರು ಅತ್ಯಮೂಲ್ಯ ಸಲಹೆಯೊಂದನ್ನು ನೀಡಿದ್ದಾರೆ. ಅಮೆರಿಕ ಜೊತೆ ಭಾರತವು ಮುಕ್ತ ವ್ಯಾಪಾರ ಒಪ್ಪಂದ(ಎಫ್​ಟಿಎ) ಮಾಡಿಕೊಳ್ಳಬೇಕು. ಆಗ ಭಾರತೀಯ ಉತ್ಪನ್ನಗಳಿಗೆ ಅಮೆರಿಕದ ಮಾರುಕಟ್ಟೆ ಹೆಚ್ಚು ತೆರೆದುಕೊಳ್ಳುತ್ತದೆ. ಅಮೆರಿಕದ ಉತ್ಪನ್ನಗಳು ಭಾರತಕ್ಕೆ ಸರಾಗವಾಗಿ ಹರಿದುಬರುತ್ತವೆ. ಆಗ ಚೀನಾದ ಉತ್ಪನ್ನಗಳಿಗೆ ಭಾರತವು ಒಂದಷ್ಟು ತಡೆಗಳನ್ನು ನಿರ್ಮಿಸಲು ಸಾಧ್ಯವಾಗುತ್ತದೆ ಎಂದು ಮುಕೇಶ್ ಅಭಿಪ್ರಾಯಪಟ್ಟಿದ್ಧಾರೆ.

ಈ ಕಂಪನಿಗಳು ಬಂದರೆ ಭಾರತಕ್ಕೆ ಎಷ್ಟು ಬಂಡವಾಳ ಹರಿದುಬರುತ್ತದೆ?

ಭಾರತದ ಬಗ್ಗೆ ಆಸಕ್ತಿ ಹೊಂದಿರುವ ಈ ಅಮೆರಿಕನ್ ಕಂಪನಿಗಳು ಕಳೆದ 4 ವರ್ಷದಲ್ಲಿ 50 ಬಿಲಿಯನ್ ಅಮೆರಿಕನ್ ಡಾಲರ್, ಅಂದರೆ, ಸುಮಾರು 3.5 ಲಕ್ಷ ಕೋಟಿ ರೂ ಬಂಡವಾಳ ಹಾಕಿವೆಯಂತೆ. ಭಾರತದಲ್ಲೂ ಈ ಕಂಪನಿಗಳಿಂದ ಲಕ್ಷಾಂತರ ಕೋಟಿ ಬಂಡವಾಳ ಹೂಡಿಕೆಯನ್ನು ನಿರೀಕ್ಷಿಸಲು ಸಾಧ್ಯ ಎನ್ನುತ್ತಾರೆ ಮುಕೇಶ್ ಆಘಿ.

Comments are closed.