ರಾಷ್ಟ್ರೀಯ

ಜಾತಿ ರಾಜಕಾರಣಕ್ಕೆ ನನ್ನನ್ನ ಎಳೆದುತರಬೇಡಿ: ನರೇಂದ್ರ ಮೋದಿ

Pinterest LinkedIn Tumblr


ಕನೌಜ್​ (ಉತ್ತರ ಪ್ರದೇಶ): ‘ನಾನು ನಿಮ್ಮನ್ನು ಕೈಮುಗಿದು ಕೇಳಿಕೊಳ್ಳುತ್ತೇನೆ ನನ್ನನ್ನು ಜಾತಿ ರಾಜಕಾರಣಕ್ಕೆ ಎಳೆಯಬೇಡಿ. ಭಾರತದ 130 ಕೋಟಿ ಜನರೇ ನನ್ನ ಪರಿವಾರ’ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಉತ್ತರ ಪ್ರದೇಶದ ಕನೌಜ್​ನಲ್ಲಿ ಇಂದು [ಶನಿವಾರ] ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಮೋದಿ, ‘ನಾನು ಎಂದಿಗೂ ನನ್ನ ಜಾತಿಯ ಬಗ್ಗೆ ಮಾತನಾಡಿಲ್ಲ. ಆದರೆ ವಿರೋಧ ಪಕ್ಷಗಳ ನಾಯಕರು ನನ್ನ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದೇಶದ ಜನತೆಗೆ ನನ್ನ ಜಾತಿ ಯಾವುದು ಎಂದು ಗೊತ್ತಿಲ್ಲ. ಈ ವಿಷಯದಲ್ಲಿ ನಾನು ಹಿಂದುಳಿದಿರುವುದರ ಕುರಿತು ಮಾತನಾಡುತ್ತಿರುವ ಮಾಯಾವತಿ, ಅಖಿಲೇಶ್​ ಯಾದವ್​, ಕಾಂಗ್ರೆಸ್​ ನಾಯಕರು ಮತ್ತು ಇತರೆ ಮಹಾಮಿಲಾವಟಿ ಪಕ್ಷಗಳ ನಾಯಕರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ ಎಂದು ತಿಳಿಸಿದರು.

ನನ್ನ ಜಾತಿ ಎಷ್ಟು ಚಿಕ್ಕದಿದೆ ಎಂದರೆ, ಊರಿನಲ್ಲಿ ನಮ್ಮ ಜಾತಿಯವರ ಅರ್ಧ ಮನೆಗಳೂ ಇರುವುದಿಲ್ಲ. ಅತ್ಯಂತ ಹೆಚ್ಚು ಹಿಂದುಳಿದ ಜಾತಿಯಲ್ಲಿ ಹುಟ್ಟಿದ್ದೇನೆ. ನೀವು ನನ್ನ ಬಾಯಿಂದ ಹೇಳಿಸುತ್ತಿದ್ದೀರಿ. ಅದಕ್ಕೆ ಹೇಳುತ್ತಿದ್ದೇನೆ. ನನ್ನ ದೇಶ ಹಿಂದುಳಿದಿರುವಾಗ ಮುಂದುವರಿದ ಎಂಬುದು ಯಾವುದಿದೆ. ನನಗೆ ನನ್ನ ದೇಶವನ್ನು ಅಭಿವೃದ್ಧಿ ಮಾಡಬೇಕಿದೆ ಎಂದರು.

ಭಯೋತ್ಪಾದಕರು ಭಾರತವನ್ನು ಗುರಿಯಾಗಿಸಿಕೊಂಡಿದ್ದಾರೆ. ನೆರೆಯ ಪಾಕಿಸ್ತಾನದಲ್ಲಿ ಹಲವು ಭಯೋತ್ಪಾದಕ ಸಂಘಟನೆಗಳು ಸಕ್ರಿಯವಾಗಿದೆ. ಎಸ್​ಪಿ ಮತ್ತು ಬಿಎಸ್​ಪಿ ಬಳಿ ಭಯೋತ್ಪಾದನೆಯನ್ನು ಎದುರಿಸುವ ಯೋಜನೆ ಇದೆಯೇ? ಅವರು ಒಮ್ಮೆಯಾದರೂ ಭಯೋತ್ಪಾದನೆ ಕುರಿತು ಮಾತನಾಡಿದ್ದಾರಾ? ನನ್ನ ವಿರುದ್ಧ ಅವರು ವಾಗ್ದಾಳಿ ಮಾಡುತ್ತಾರೆ.

ಆದರೆ ಭಯೋತ್ಪಾದನೆ ವಿರುದ್ಧ ಮಾತನಾಡುವುದೇ ಇಲ್ಲ. ಹೀಗೆ ಏಕೆ? ಎಸ್​ಪಿ ಮತ್ತು ಬಿಎಸ್​ಪಿಯ ಮುಖಂಡರು ಭಯೋತ್ಪಾದನೆಗೆ ಹೆದರುತ್ತಾರಾ ಅಥವಾ ಅವರನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರಾ ಎಂಬುದನ್ನು ಸ್ಪಷ್ಟಪಡಿಸಲಿ ಎಂದು ವಿರೋಧ ಪಕ್ಷಗಳಿಗೆ ಸವಾಲೆಸೆದರು.

Comments are closed.