ಕರ್ನಾಟಕ

ದೇವೇಗೌಡ, ಖರ್ಗೆ, ಮುನಿಯಪ್ಪ ಸೋಲು ಖಚಿತ; ಯಡಿಯೂರಪ್ಪ

Pinterest LinkedIn Tumblr


ಬೆಂಗಳೂರು: ಕೋಲಾರದಲ್ಲಿ ಕಾಂಗ್ರೆಸ್​​ ಅಭ್ಯರ್ಥಿ ಕೆ.ಹೆಚ್.ಮುನಿಯಪ್ಪ, ಕಲ್ಬುರ್ಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಸೋಲು ಖಚಿತ. ತುಮಕೂರಲ್ಲಿ ದೇವೇಗೌಡರು ಸೋತರೂ ಅಚ್ಚರಿ ಪಡಬೇಕಾಗಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​ ಯಡಿಯೂರಪ್ಪ ಭವಿಷ್ಯ ನುಡಿದಿದ್ದಾರೆ.

ಬಿಜೆಪಿ ಲೋಕಸಭೆ ಅಭ್ಯರ್ಥಿಗಳ ಜೊತೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಕೆ.ಹೆಚ್.ಮುನಿಯಪ್ಪ, ಖರ್ಗೆ ಸೋಲಲಿದ್ದಾರೆ. ದೇವೇಗೌಡರು ಸೋತರೂ ಆಶ್ಚರ್ಯ ಪಡಬೇಕಿಲ್ಲ. ಕಾಂಗ್ರೆಸ್, ಜೆಡಿಎಸ್ ಘಟಾನುಘಟಿಗಳು ಹಿನ್ನಡೆ ಅನುಭವಿಸುವುದು ನಿಶ್ಚಿತ. ನಾನು ನಿಮ್ಮನ್ನು ಮೆಚ್ಚಿಸಲು ಈ ಮಾತುಗಳನ್ನು ಹೇಳುತ್ತಿಲ್ಲ. ಸರಿಯಾದ ಮಾಹಿತಿ ತೆಗೆದುಕೊಂಡು ಈ ಮಾತನ್ನು ಹೇಳುತ್ತಿದ್ದೇನೆ ಅಂತಾ ಭವಿಷ್ಯ ನುಡಿದರು.

ಮೇ 23ರವರೆಗೆ ಯಾರು ಎಲ್ಲಿಗೂ ತೆರಳುವಂತಿಲ್ಲ

ಈಗಾಗಲೇ ರಾಜ್ಯ ರಾಜಕೀಯದಲ್ಲಿ ಗೊಂದಲಗಳು ಶುರುವಾಗಿದೆ. ಫಲಿತಾಂಶದ ಬಳಿಕ ಅದು ಉಲ್ಬಣವಾಗಲಿದೆ. ಸದ್ಯ ಈಗ ಎರಡು ಉಪ ಚುನಾವಣೆ ಬಂದಿದೆ. ಕುಂದಗೋಳ, ಚಿಂಚೋಳಿ ನಾವು ಗೆಲ್ಲಲೇಬೇಕು. ಆಕಾಂಕ್ಷಿಗಳ ಹೆಸರನ್ನು ದೆಹಲಿಗೆ ಕಳಿಸಿದ್ದೇವೆ. ಮೇ 23ರವರೆಗೆ ಯಾರು ಎಲ್ಲಿಗೂ ತೆರಳುವಂತಿಲ್ಲ. ಮೇ 23 ರ ಬಳಿಕ ಬೇಕಾದರೇ ಎಲ್ಲಿಗಾದರೂ ಹೋಗಿ, ಉಪ ಚುನಾವಣೆ ಮುಕ್ತಾಯವಾಗುವವರೆಗೂ ಎಲ್ಲರೂ ಕೆಲಸ ಮಾಡಬೇಕು‌. ಗೆಲುವಿನ ಮೂಲಕ ಸರ್ಕಾರಕ್ಕೆ ತಕ್ಕ ಏಟು ನೀಡಬೇಕು ಅಂತಾ ಬಿ.ಎಸ್.ಯಡಿಯೂರಪ್ಪ ಸೂಚನೆ ನೀಡಿದ್ದರು.

ವರದಿ ನೀಡಿದ ಶಿವಮೊಗ್ಗ ಬಿಜೆಪಿ ಘಟಕ

ಸಭೆಯಲ್ಲಿ ಶಿವಮೊಗ್ಗ ಲೋಕಸಭೆ ಕ್ಷೇತ್ರದ ಬಗ್ಗೆ ಭರ್ಜರಿ ಚರ್ಚೆ‌‌ ನಡೆಯಿತು. ಸಭೆಗೆ ಚುನಾವಣೆ ಮತ ಲೆಕ್ಕಾಚಾರ ವರದಿಯನ್ನು ಶಿವಮೊಗ್ಗ ಜಿಲ್ಲಾ ಬಿಜೆಪಿ ಘಟಕ ಸಲ್ಲಿಸಿತು.

ಬೈ ಎಲೆಕ್ಷನ್ ಗಿಂತ ಈ ಭಾರಿ ಹೆಚ್ಚಿನ ಲೀಡ್ ನಲ್ಲಿ ಬಿಜೆಪಿ‌ ಗೆಲ್ಲಲಿದ್ದು, ಸಾಗರ ಮತ್ತು ಸೊರಬದಲ್ಲಿ ಅಲ್ಪ ಹಿನ್ನಡೆಯಾಗಬಹುದು, ಶಿವಮೊಗ್ಗ ನಗರ ಮತ್ತು ಶಿವಮೊಗ್ಗ ಗ್ರಾಮಾಂತರ, ಬೈಂದೂರು, ತೀರ್ಥಹಳ್ಳಿ, ಶಿಕಾರಿಪುರ ಕ್ಷೇತ್ರಗಳಿಂದ ಅಧಿಕ ಲೀಡ್ ಸಿಗುವ ಸಾಧ್ಯತೆ ಇದೆ ಎಂದು ವರದಿ ನೀಡಿದೆ

Comments are closed.