ಕರ್ನಾಟಕ

ತಂದೆಯ ಸೂಚನೆ ಮೇರೆಗೆ ಕುಮಾರಸ್ವಾಮಿ ಭರ್ಜರಿ ಯೋಜನೆ!

Pinterest LinkedIn Tumblr


ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ ಸಮರದ ಬಳಿಕ ಮೈತ್ರಿ ಸರ್ಕಾರಕ್ಕೆ ಆಪತ್ತು ಎದುರಾಗಿದೆ. ಸರ್ಕಾರ ಉಳಿಸಿಕೊಳ್ಳಲು ದೋಸ್ತಿಗಳು ಕಸರತ್ತು ನಡೆಸುತ್ತಿದ್ದು, ಅತೃಪ್ತರ ಮನವೊಲಿಕೆಗೆ ಮುಂದಾಗಿದ್ದಾರೆ. ಇವತ್ತು ಕಾಗವಾಡ ಶಾಸಕ ಶ್ರೀಮಂತ್ ಪಾಟೀಲ್‌ ಅವರನ್ನ ಮನೆಗೆ ಕರೆಸಿಕೊಂಡ ಸಚಿವ ಡಿ.ಕೆ.ಶಿವಕುಮಾರ್‌ ಮಾತುಕತೆ ನಡೆಸಿದರು. ಈ ವೇಳೆ ಡಿಸಿಎಂ ಪರಮೇಶ್ವರ್ ಕೂಡ ಡಿಕೆಶಿ ನಿವಾಸಕ್ಕೆ ಭೇಟಿ ನೀಡಿ ಚರ್ಚಿಸಿದರ. ಬಳಿಕ ಇಬ್ಬರೂ ನಾಯಕರು ಅವರನ್ನ ಜೆಪಿ ನಗರಕ್ಕೆ ಕರೆದೊಯ್ದು ಸಿಎಂ ಭೇಟಿ ಮಾಡಿಸಿ ಮಾತುಕತೆ ನಡೆಸಿದರು. ಇದು ಕುತೂಹಲ ಹುಟ್ಟಿಸಿದೆ.

ಸರ್ಕಾರ ಬೀಳುತ್ತೆ ಅಂತ ಕಾಂಗ್ರೆಸ್ ಶಾಸಕರು ಎಲ್ಲೂ ಹೇಳಿಲ್ಲ ಎಂದಿರುವ ಡಿಕೆಶಿ, ರಮೇಶ್ ಜಾರಕಿಹೋಳಿ ಬೇಕಾದ್ರೆ ನನಗೆ ಎರಡು ಏಟು ಹೊಡೆಯಲಿ. ನನಗೇನೂ ಬೇಜಾರಿಲ್ಲ. ರಮೇಶ್ ನಮ್ಮ ಫ್ರೆಂಡ್ , ನಮ್ಮ ಮನೆಯವರು ಎಂದು ಹೇಳಿದ್ದಾರೆ.

ಇತ್ತ, ಬೆಂಗಳೂರಿನ ನಿವಾಸದಲ್ಲಿ ತಂಗಿರುವ ರಮೇಶ್ ಜಾರಕಿಹೊಳಿ, ಇವತ್ತು ಬೆಂಬಲಿತ ಶಾಸಕರ ಜೊತೆ ಸಭೆ ಮಾಡುತ್ತಾರೆಂದು ಹೇಳಲಾಗಿತ್ತು. ಆದ್ರೆ, ಅವರ್ಯಾರು ಬಾರದಿದ್ದರಿಂದ ಸಭೆ ನಡೆಸಲಿಲ್ಲ. ಆದ್ರೆ, ರಮೇಶ್ ಎರಡು ಬಾರಿ ಅಜ್ಞಾತ ಸ್ಥಳಕ್ಕೆ ಹೋಗಿ ಬಂದದ್ದು ಮಾತ್ರ ಅನುಮಾನ ಮೂಡಿಸಿದೆ. ಆದ್ರೆ, ಕಾಂಗ್ರೆಸ್ ನಾಯಕರು ರಮೇಶ್ ಜಾರಕಿಹೊಳಿ ರಾಜಿನಾಮೆ ಕೊಡಲ್ಲ. ಪಕ್ಷದಲ್ಲೇ ಇರ್ತಾರೆ ಅಂತಿದ್ದಾರೆ.

ದೇವೇಗೌಡರ ಸೂಚನೆಯಂತೆ ರಮೇಶ್ ರಾಜೀನಾಮೆಗೆ ಬ್ರೇಕ್ ಹಾಕಲು ಸಿಎಂ ಕುಮಾರಸ್ವಾಮಿ ಪ್ಲಾನ್ ರೂಪಿಸಿದ್ದಾರೆ. ನಿನ್ನೆಯೇ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ರಮೇಶ್‌ ಜೊತೆ ಚರ್ಚಿಸಿದ್ದು, ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳುವ ಮತ್ತು ಎಲ್ಲ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ. ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಬೇಡಿ. ಕಾಂಗ್ರೆಸ್ ಕೋಟಾದಲ್ಲಿ ಅವಕಾಶ ಇಲ್ಲದಿದ್ದರೂ ಜೆಡಿಎಸ್ ಕೋಟಾದಲ್ಲಿ ಸ್ಥಾನ ನೀಡೋಣ ಎಂದು ಹೇಳಿದ್ದಾರೆ. ಇದಕ್ಕೆ ರಮೇಶ್ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿದುಬಂದಿದೆ.

ಆದ್ರೆ, ಸಹೋದರನ ವಿರುದ್ಧ ವಾಕ್ಸಮರ ನಡೆಸಿರುವ ಸತೀಶ್‌ ಜಾರಕಿಹೊಳಿ, ಸರ್ಕಾರ ಬೀಳಿಸುವಷ್ಟು ಸಂಖ್ಯಾಬಲ ರಮೇಶ ಬಳಿ ಇಲ್ಲ. 3-4 ಬಾರಿ ಸರ್ಕಾರ ಕೆಡವಲು ವಿಫಲ ಯತ್ನ ನಡೆಸಿದ್ದಾರೆ. ಈಗಲೂ ಅದನ್ನೆ ಮಾಡ್ತಿದ್ದಾರೆ ಎಂದು ವ್ಯಂಗ್ಯ ಮಾಡಿದ್ದಾರೆ. ಅವನು ಈಗ ಖಾಲಿ ಇದ್ದಾನೆ. ಬೇರೆ ಕೆಲಸ ಇಲ್ಲ. ಮುಂಜಾನೆಯೊಂದು ಸಂಜೆಯೊಂದು ಮಾತಾಡ್ತಾನೆ. ಅವನಿಗೆ ಬದ್ದತೆ ಇಲ್ಲ ಎಂದು ಕಿಡಿಕಾರಿದ್ದಾರೆ.

ಮೈತ್ರಿ ಸರ್ಕಾರದಲ್ಲಿ ಇಷ್ಟೆಲ್ಲ ಬೆಳವಣಿಗೆ ನಡೆಯುತ್ತಿದ್ರೂ ಕಾಂಗ್ರೆಸ್ ನಾಯಕರು ಮಾತ್ರ ಏನೂ ಆಗ್ತಿಲ್ಲ ಅಂತ ಮೇಲ್ನೋಟಕ್ಕೆ ತೋರಿಸಿಕೊಳ್ತಿದ್ದಾರೆ. ಇತ್ತ, ಬಿಜೆಪಿ ಕೂಡ ತಟಸ್ಥವಾಗಿದೆ. ರಮೇಶ್ ರಾಜೀನಾಮೆ ವಿಚಾರದ ಬಗ್ಗೆ ಬಿಜೆಪಿ ಕಾದು ನೋಡುವ ತಂತ್ರ ಅನುಸರಿಸಿದೆ. ಆದ್ರೆ, ರಮೇಶ್ ತಮ್ಮ ತೀರ್ಮಾನದಲ್ಲಿ ಖಡಕ್ ಆಗಿದ್ದು, ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಅತೃಪ್ತ ಶಾಸಕರ ಜೊತೆಗೆ ರಾಜೀನಾಮೆ ಕೊಡುವ ತೀರ್ಮಾನ ಮಾಡಿದ್ದಾರೆ ಎನ್ನಲಾಗಿದೆ. ಅಲ್ಲಿಗೆ ಸರ್ಕಾರ ಉರುಳಿಸಲು ಅಥವಾ ಸರ್ಕಾರ ಉಳಿಸಿಕೊಳ್ಳಲು ಉಭಯ ಪಡೆಗಳಿಗೂ ಇನ್ನೂ ಒಂದು ತಿಂಗಳ ಅವಕಾಶ ಇದೆ.

Comments are closed.