ಕರ್ನಾಟಕ

ಆನಂದ್​ ಸಿಂಗ್​ ಏನೇ ಹೇಳಲಿ ನಾನು ಅವರ ಸಹೋದರ: ಕಂಪ್ಲಿ ಶಾಸಕ ಗಣೇಶ್

Pinterest LinkedIn Tumblr


ಬಳ್ಳಾರಿ: ಈಗಲ್ಟನ್​ ರೆಸಾರ್ಟ್​ನಲ್ಲಿ ಕಾಂಗ್ರೆಸ್​ ಶಾಸಕ ಆನಂದ್​ ಸಿಂಗ್ ಮೇಲೆ ಜಲ್ಲೆ ನಡೆಸಿದ್ದ ಆರೋಪದಲ್ಲಿ ಜೈಲು ಸೇರಿದ್ದ ಕಂಪ್ಲಿ ಶಾಸಕ ಜೆ.ಎನ್​. ಗಣೇಶ್​ಗೆ ಎರಡು ದಿನಗಳ ಹಿಂದೆ ಷರತ್ತುಬದ್ಧ ಜಾಮೀನು ಮಂಜೂರಾಗಿತ್ತು. ಅನಾರೋಗ್ಯದಿಂದ ವಿಕ್ಟೋರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ನಿನ್ನೆ ಡಿಸ್ಚಾರ್ಜ್​ ಆಗಿದ್ದಾರೆ.

ನಿನ್ನೆಯಷ್ಟೇ ಬಿಡುಗಡೆಗೊಂಡಿರುವ ಕಂಪ್ಲಿ ಗಣೇಶ್​ ಇಂದು 3 ತಿಂಗಳ ನಂತರ ಸ್ವಕ್ಷೇತ್ರ ಹೊಸಪೇಟೆಗೆ ಧಾವಿಸಿದ್ದಾರೆ. ಈ ವೇಳೆ ಮಾತನಾಡಿರುವ ಅವರು, ಈಗಲೂ ಆನಂದ್ ಸಿಂಗ್ ನನಗೆ ಅಣ್ಣನೇ. 15 ವರ್ಷದಿಂದ ನನ್ನ ಕಷ್ಟಸುಖದ ಬಗ್ಗೆ ಅವರಿಗೆಲ್ಲ ಗೊತ್ತಿದೆ. ನಾನು ಏನು ಎಂಬುದು ಆನಂದ್ ಸಿಂಗ್​ಗೆ ಚೆನ್ನಾಗಿ ಗೊತ್ತಿದೆ. ಅವರು ಈಗಲೂ ನನ್ನ ಬೆಂಬಲಕ್ಕಿದ್ದಾರೆ. ಅವರೇ ಬೇಡವೆಂದರೂ ನಾನು ಆನಂದ್​ ಸಿಂಗ್​ಗೆ ತಮ್ಮನಾಗಿಯೇ ಇರುತ್ತೇನೆ. ಮುಂದಿನ ದಿನಗಳಲ್ಲಿ ಎಲ್ಲವೂ ಒಳ್ಳೆಯದಾಗುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.

3 ತಿಂಗಳು ನಾನು ಕ್ಷೇತ್ರದಲ್ಲಿರಲಿಲ್ಲ. ಈ ಅವಧಿಯಲ್ಲಿ ಏನೆಲ್ಲಾ ಘಟನೆಗಳು ನಡೆದಿದೆ ಎಂಬುದು ನನಗೆ ಗೊತ್ತಿದೆ. ಲೋಕಸಭಾ ಚುನಾವಣೆಯಲ್ಲಿ ನಾನು ಇಲ್ಲದ್ದಕ್ಕೆ ಬಹಳ ನೋವಿದೆ. ಸಣ್ಣದಾಗಿದ್ದ ಈ ಘಟನೆ ದೊಡ್ಡದಾಗಿದ್ದೇ ಅಚ್ಚರಿ. ನನ್ನ ತಪ್ಪನ್ನು ನಾನು ತಿದ್ದಿಕೊಳ್ಳುತ್ತೇನೆ. ರೆಸಾರ್ಟ್​ನಲ್ಲಿ ನಡೆದ ಘಟನೆಯ ಬಗ್ಗೆ ಹೆಚ್ಚಾಗಿ ಏನೂ ಹೇಳುವುದಿಲ್ಲ ಎಂದಿದ್ದಾರೆ.

ಇದೇವೇಳೆ ರಮೇಶ್​ ಜಾರಕಿಹೊಳಿ ಬಗ್ಗೆ ಮಾತನಾಡಿರುವ ಕಂಪ್ಲಿ ಗಣೇಶ್, ರಮೇಶ್ ಜಾರಕಿಹೊಳಿ ನಮ್ಮ ಸಮಾಜದ ಮುಖಂಡರು. ಅವರು ರಾಜೀನಾಮೆ ಕೊಡುವುದಿಲ್ಲ. ಆ ರೀತಿ ಆಗಲು ಸಾಧ್ಯವೇ ಇಲ್ಲ. 5 ವರ್ಷ ಸರ್ಕಾರಕ್ಕೆ ಯಾವುದೇ ತೊಂದರೆಯಿಲ್ಲ. ಸರ್ಕಾರ ಸುಭದ್ರವಾಗಿರುತ್ತದೆ. ಕಾಂಗ್ರೆಸ್​ ಪಕ್ಷ ನನ್ನ ಅಮಾನತು ಆದೇಶವನ್ನು ವಾಪಾಸ್ ಪಡೆಯುತ್ತದೆ ಎಂಬ ವಿಶ್ವಾಸವಿದೆ. ಎಂತೆಂಥವರೋ ಏನೋ ಮಾಡಿದ್ದಾರೆ. ನಾನು ಮಾಡಿದ್ದೊಂದು ಸಣ್ಣ ತಪ್ಪು. ಆದರೆ, ಅದನ್ನೇ ದೊಡ್ಡ ವಿಷಯವನ್ನಾಗಿ ಮಾಡಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

Comments are closed.