ಕರ್ನಾಟಕ

ರಮೇಶ್ ಜಾರಕಿಹೊಳಿ ಜೊತೆಗೆ ಯಾರು ಇದ್ದಾರೆ?: ಸತೀಶ್ ಜಾರಕಿಹೊಳಿ

Pinterest LinkedIn Tumblr


ಬೆಳಗಾವಿ: ಬೆಂಬಲಿಗರೊಂದಿಗೆ ಸೇರಿಕೊಂಡು ಶಾಸಕ ಸ್ಥಾನಕ್ಕೆ ಸಾಮೂಹಿಕ ರಾಜಿನಾಮೆ ನೀಡುವುದಾಗಿ ಹೇಳುವ ಮೂಲಕ ಶಾಸಕ ರಮೇಶ್‌ ಜಾರಕಿಹೊಳಿ ಸಮ್ಮಿಶ್ರ ಸರ್ಕಾರ ಕೆಡಹುವ ಪರೋಕ್ಷ ಎಚ್ಚರಿಕೆ ನೀಡುತ್ತಿದ್ದರೆ ಇನ್ನೊಂದು ಕಡೆ, ರಮೇಶ್‌ ಕೈಯಲ್ಲಿ ಅಷ್ಟುಸಂಖ್ಯಾಬಲವೇ ಇಲ್ಲ ಎಂದು ಅರಣ್ಯ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ.

‘ರಮೇಶ್‌ ಅವರು ಸರ್ಕಾರ ಕೆಡವಲು ಈಗಾಗಲೇ ಮೂರ್ನಾಲ್ಕು ಬಾರಿ ಯತ್ನಿಸಿ ವಿಫಲವಾಗಿದ್ದಾರೆ. ಆದ್ರೂ ಈಗಲೂ ಅದನ್ನೇ ಮಾಡುತ್ತಿದ್ದಾರೆ. ಅವರ ಬಳಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರ ಕೆಡಹುವಷ್ಟು ಸಂಖ್ಯಾಬಲವೇ ಇಲ್ಲ’ ಎಂದು ಸಹೋದರನೂ ಆಗಿರುವ ಸತೀಶ್‌ ಮತ್ತೊಮ್ಮೆ ಟಾಂಗ್‌ ನೀಡಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಮೇಶ್‌ರಿಂದ ಮೈತ್ರಿ ಸರ್ಕಾರಕ್ಕೆ ಯಾವುದೇ ಸಮಸ್ಯೆಯಾಗದು. ಸರ್ಕಾರ ಉಳಿಸಿಕೊಳ್ಳಲು ಜೆಡಿಎಸ್‌ನವರಿಗೂ ಶಕ್ತಿಯಿದೆ, ಕಾಂಗ್ರೆಸ್‌ನವರಿಗೂ ಶಕ್ತಿಯಿದೆ ಎಂದು ಸ್ಪಷ್ಟಪಡಿಸಿದರು.

ಪಕ್ಷದಲ್ಲಿ ರಮೇಶ್‌ಗೆ ವೈಯಕ್ತಿಕವಾಗಿ ತೊಂದರೆಯಾಗಿರಬಹುದು. ಆದರೆ, ಬೇರೆಯವರಿಗೆ ಆಗಿಲ್ಲ. ರಮೇಶ್‌ ಬಗ್ಗೆ ನಾನು ಏನೂ ಪ್ರತಿಕ್ರಿಯೆ ನೀಡಲ್ಲ. ಒಂದು ವರ್ಷದಿಂದ ರಾಜಿನಾಮೆ ನೀಡುತ್ತೇನೆ ಎಂದು ಹೇಳುತ್ತಲೇ ಇದ್ದಾರೆ. ಯಾಕೆ ನೀಡುತ್ತೇನೆ, ಏನು ಅನ್ಯಾಯವಾಗಿದೆ, ಸಮಸ್ಯೆ ಏನು ಎಂಬುದನ್ನು ಅವರೇ ಬಹಿರಂಗಪಡಿಸಬೇಕು. ಒಂದು ವೇಳೆ ಅವರು ಇದ್ಯಾವುದನ್ನೂ ಬಹಿರಂಗಪಡಿಸದಿದ್ದರೆ ನಮಗೂ ಗೊತ್ತಾಗುವುದಿಲ್ಲ, ನಿಮಗೂ ಗೊತ್ತಾಗುವುದಿಲ್ಲ. ರಾಜ್ಯದ ಜನ ಏನು ಸಮಸ್ಯೆಯಿದೆ ಎಂಬುದನ್ನು ತಿಳಿಯಬಯಸುತ್ತಾರೆ. ಇದು ಹುಡುಗಾಟಿಕೆಯ ವಿಚಾರ ಅಲ್ಲ, ಅವರೊಬ್ಬ ಜವಾಬ್ದಾರಿಯುತ ಸ್ಥಾನದಲ್ಲಿರುವ ಜನಪ್ರತಿನಿಧಿ ಎಂದು ಇದೇ ವೇಳೆ ಸಹೋದರನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು ಸತೀಶ್‌.

ನಿತ್ಯ ಅದನ್ನೇ ಹೇಳಲು ನಾನು ಖಾಲಿ ಇಲ್ಲ: ಎರಡು ದಿನಗಳಿಂದ ಏನೆಲ್ಲ ಹೇಳಬೇಕಿತ್ತೋ ಅದನ್ನು ಹೇಳಿದ್ದೇನೆ. ನಿತ್ಯ ಅದನ್ನೇ ಹೇಳಲು ನಾನು ಖಾಲಿ ಕುಳಿತಿಲ್ಲ. ನನಗೆ ಸಾಕಷ್ಟುಕೆಲಸವಿದೆ. ಆದರೆ, ರಮೇಶ್‌ ಖಾಲಿ ಇದ್ದಾನೆ. ಹೀಗಾಗಿ ಮುಂಜಾನೆಯೊಂದು, ಸಂಜೆಯೊಂದು ಹೇಳಿಕೆ ನೀಡುತ್ತಾನೆ. ನಿನ್ನೆ (ಬುಧವಾರ) ಮಧ್ಯಾಹ್ನ ರಾಜೀನಾಮೆ ಕೊಡುತ್ತೇನೆ ಎಂದಿದ್ದ, ಸಂಜೆ ಕೊಡಲ್ಲ ಎಂದು ಹೇಳಿ ಯೂ ಟರ್ನ್‌ ಹೊಡೆದ. ಅದಕ್ಕಾಗಿಯೇ ನಾನು ಆತನಿಗೆ ಬದ್ಧತೆ ಇಲ್ಲ ಎಂದಿದ್ದೆ. ನಿತ್ಯ ಆತನ ಬಗ್ಗೆ ಹೇಳಿಕೆ ನೀಡಲು ನನಗೂ ಸಮಯವಿಲ್ಲ. ಅವಶ್ಯಕತೆ ಇದ್ದರೆ ಮಾತ್ರ ಹೇಳುತ್ತೇನೆ. ಪದೇ ಪದೆ ಆತನ ಬಗ್ಗೆ ಮಾತನಾಡುವುದರಲ್ಲಿ ಯಾವುದೇ ಅರ್ಥವಿಲ್ಲ. ಈಗಾಗಲೇ ಸ್ಪೀಕರ್‌ಗೆ ರಮೇಶ್‌ ವಿರುದ್ಧ ದೂರು ನೀಡಲಾಗಿದೆ. ಕ್ರಮ ಕೈಗೊಳ್ಳುವುದು ಸ್ಪೀಕರ್‌ಗೆ ಬಿಟ್ಟವಿಚಾರ. ಅವರನ್ನು ಪ್ರಶ್ನಿಸಲು ಆಗುವುದಿಲ್ಲ ಎಂದರು.

ಕುಮಟಳ್ಳಿ ಬಗ್ಗೆ ಅನುಮಾನ ಬೇಡ: ರಮೇಶ್‌ ಜಾರಕಿಹೊಳಿ ಅವರಿಗೆ ಆತ್ಮೀಯರಾಗಿರುವ ಅಥಣಿ ಶಾಸಕ ಮಹೇಶ ಕುಮಟಳ್ಳಿ ತಮ್ಮ ಮೊಬೈಲ್‌ ಸ್ವಿಚ್‌್ಡ ಆಫ್‌ ಮಾಡಿಕೊಂಡು ಬೆಂಗಳೂರಿಗೆ ತೆರಳಿರುವ ಕುರಿತು ಪ್ರತಿಕ್ರಿಯಿಸಿದ ಸತೀಶ್‌, ಆ ಕುರಿತು ನನಗೆ ಗೊತ್ತಿಲ್ಲ. ರಮೇಶ್‌ನೇ ಇರಲಿ, ಮಹೇಶ್‌ನೇ ಆಗಿರಲಿ ರಾಜಿನಾಮೆ ಕೊಡುವುದು, ಬಿಡುವುದು ಅವರಿಗೆ ಬಿಟ್ಟವಿಚಾರ. ರಮೇಶ್‌ ಬಿಜೆಪಿ ಪರ ಪ್ರಚಾರ ಮಾಡುವಂತೆ ಹೇಳಿದ್ದರೂ ಕುಮಟಳ್ಳಿ ಕಾಂಗ್ರೆಸ್‌ ಪರ ಪ್ರಚಾರ ಕಾರ್ಯ ಕೈಗೊಂಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಮಹೇಶ್‌ ನಮ್ಮ ಜೊತೆ ಕೆಲಸ ಮಾಡಿದ್ದಾರೆ. ಹೀಗಾಗಿ ಅನುಮಾನ ಪಡುವುದು ಬೇಡ ಎಂದು ಹೇಳಿದರು.

Comments are closed.