
ತುಮಕೂರು, ಮಂಡ್ಯ ಮತ್ತು ಹಾಸನ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಗೆಲ್ಲುವುದು ನಿಶ್ಚಿತ ಎಂದು ರೇವಣ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹಾಸನ: ಮಂಡ್ಯ, ಹಾಸನ ಮತ್ತು ತುಮಕೂರಿನಲ್ಲಿ ನೂರಕ್ಕೆ ನೂರು ಜೆಡಿಎಸ್ ಅಭ್ಯರ್ಥಿಗಳು ಗೆಲ್ತಾರೆ. ಬೇಕಾದ್ರೆ ಬರೆದಿಟ್ಟುಕೊಳ್ಳಿ. ನಾನು ಶಾಸ್ತ್ರ ಹೇಳ್ತಿದ್ದೀನಿ. ನಾನು ಶಾಸ್ತ್ರ ಹೇಳಿದ್ರೆ ಯಾವುದೇ ಕಾರಣಕ್ಕೂ ಮಿಸ್ ಆಗಲ್ಲ ಎಂದು ಸಚಿವ ರೇವಣ್ಣ ಹೇಳಿದ್ದಾರೆ.
ನಾವು ಗೆದ್ದೇ ಗೆಲ್ತೀವಿ. ನೀವು ಮಾಧ್ಯಮದವರು ಎಲ್ಲರೂ ಚೆನ್ನಾಗಿ ಸುದ್ದಿ ಮಾಡಿದ್ದೀರಿ. ಆದರಿಂದ ಜನರು ಏನಾಗುತ್ತೆ ನೋಡೋಣ ಅಂತಾ ಜೆಡಿಎಸ್ಗೆ ವೋಟು ಹಾಕಿದ್ದಾರೆ. ಜಿಲ್ಲೆಯ ಮತದಾರರು, ಶಾಸಕರು ಮತ್ತು ಕಾರ್ಯಕರ್ತರಿಗೆ ಕೃತಜ್ಞತೆಗಳು. ಜಿಲ್ಲೆಯಲ್ಲಿ ಶಾಂತಿಯುತವಾಗಿ ಮತದಾನವಾಗಿದೆ ಎಂದು ಹೆಚ್.ಡಿ. ರೇವಣ್ಣ ತಿಳಿಸಿದ್ದಾರೆ.
ಚುನಾವಣೆಯಲ್ಲಿ ಗೆದ್ದು ಹೆಚ್.ಡಿ .ದೇವೇಗೌಡ, ನಿಖಿಲ್ ಹಾಗೂ ಪ್ರಜ್ವಲ್ ಎಲ್ಲರೂ ದೆಹಲಿಗೆ ಹೋಗೋದು ನಿಜ. ಇವರೆಲ್ಲರೂ ಸಂಸತ್ತಿನಲ್ಲಿ ರೈತರ ಸಮಸ್ಯೆ ಬಗ್ಗೆ ಚರ್ಚಿಸುತ್ತಾರೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ರೇವಣ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಿಡುವಿಲ್ಲದ ಚುನಾವಣಾ ಪ್ರಚಾರ ಕಾರ್ಯದ ಬಗ್ಗೆ ಮಾತನಾಡಿದ ರೇವಣ್ಣ, ತಮಗೆ ಯಾವ ವಿಶ್ರಾಂತಿಯೂ ಇಲ್ಲ. ತಾನು ಶಿವಮೊಗ್ಗದಲ್ಲಿ ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ಪರವಾಗಿ ಪ್ರಚಾರಕ್ಕೆ ಹೋಗುತ್ತೇನೆ ಎಂದರು.
ತರಕಾರಿ ತರುವವನಿಂದಲೂ ಹಣ ಕಿತ್ತರು:
ತಮ್ಮ ಬೆಂಗಾವಲು ಪಡೆ ವಾಹನದಲ್ಲಿ ಐಟಿಯವರಿಗೆ ಹಣ ಸಿಕ್ಕ ಸುದ್ದಿ ಬಗ್ಗೆ ಪ್ರತಿಕ್ರಿಯೆ ನೀಡಿದ ಹೆಚ್.ಡಿ. ರೇವಣ್ಣ, ಬಿಜೆಪಿ ಮುಖಂಡರು ಸರ್ಕಾರದ ಯಂತ್ರ ದುರುಪಯೋಗ ಮಾಡಿಕೊಂಡಿದ್ದಾರೆ. ಐಟಿ ದಾಳಿಯಾದಾಗ ಮಾಜಿ ಎಂಎಲ್ಸಿ ಪಟೇಲರ ಬಳಿ ಇದ್ದದ್ದು ಬರೀ 5 ಸಾವಿರ, ಹೆಂಡತಿ ಬಳಿ 30 ಸಾವಿರ ಮತ್ತು ಮಗಳ ಬಳಿ 8 ಸಾವಿರ ಹಾಗೂ ನಮ್ಮ ಪಿಎ ರಘು ಹತ್ತಿರ 20ಸಾವಿರ ಇದ್ದ ಹಣವನ್ನು ಐಟಿಯವರು ಕಿತ್ಕೊಂಡು ಹೋಗಿದ್ದಾರೆ. ಈ ಹಣವನ್ನು ಬೆಂಗಾವಲು ಪಡೆ ವಾಹನದಲ್ಲಿ ಇಟ್ಟು ಫೋಟೋ ತೆಗೆದಿದ್ದಾರೆ.
ನಮ್ಮ ಚಿತ್ರಮಂದಿರದ ಕಲೆಕ್ಷನ್ ಹಣ 60 ಸಾವಿರ ಹಣವನ್ನೂ ಕಿತ್ಕೊಂಡರು. ನಮ್ಮ ಮನೆಗೆ ತರಕಾರಿ ತರುವವನ ಬಳಿಯೂ ಐಟಿಯವರೆಂದು ಹೇಳಿ 80 ಸಾವಿರ ರೂ ಹಣ ತೆಗೆದುಕೊಂಡು ಹೋದರು ಎಂದು ವಿವರಿಸಿದ್ದಾರೆ.
ಐಎಎಸ್ ಅಧಿಕಾರಿ ಅಮಾನತಿಗೆ ರೇವಣ್ಣ ಆಕ್ರೋಶ:
ಪ್ರಧಾನಿ ಮೋದಿ ಅವರ ವಿಮಾನ ಪರಿಶೀಲನೆ ನಡೆಸಿದ್ದ ಕರ್ನಾಟಕ ಕೆಡರ್ನ ಐಎಎಸ್ ಅಧಿಕಾರಿ ಅಮಾನತು ವಿಚಾರವಾಗಿ ಮಾತನಾಡಿದ ಅವರು, ಯಾರಾದರೂ ಚೆಕ್ ಮಾಡುವುದು ಸಾಮಾನ್ಯ. ಸಿಎಂ ಹಾಗೂ ನನ್ನನ್ನು ಹಲವಾರು ಬಾರಿ ಚೆಕ್ ಮಾಡಿದ್ದಾರೆ. ಆ ಅಧಿಕಾರಿ ಒಳ್ಳೆ ಮನುಷ್ಯ, ಅವರನ್ನ ಅಮಾನತು ಮಾಡಿದ್ದಾರೆ. ಇಷ್ಟು ಕೀಳು ಮಟ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿ ನಡೆದುಕೊಳ್ಳಬಾರದು. ಚುನಾವಣೆ ನೀತಿ ಸಂಹಿತೆ ಎಲ್ಲರಿಗೂ ಒಂದೇ ಎಂದು ಪ್ರಧಾನಿ ವಿರುದ್ಧ ಸಚಿವ ರೇವಣ್ಣ ಕಿಡಿಕಾರಿದರು.
Comments are closed.