ಬೆಂಗಳೂರು: ಕಾಂಗ್ರೆಸ್ನ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ, ನಟಿ ರಮ್ಯಾ ಅವರು ಹ್ಯಾಟ್ರಿಕ್ಸಾಧನೆ ಮಾಡಿದ್ದಾರೆ ಎಂದು ಬಿಜೆಪಿ ಶಾಸಕ ಸುರೇಶ್ ಕುಮಾರ್ ವ್ಯಂಗ್ಯವಾಡಿದ್ದಾರೆ.
ಕೊನೆಗೂ ಮತದಾನಕ್ಕೆ ಬರದೆ ವೋಟಿಂಗ್ ಗೆ ಗೈರಾಗಿ ಹ್ಯಾಟ್ರಿಕ್ ಸಾಧಿಸಿದ ನಟಿ ರಮ್ಯ!! ಇವರು ಕಾಂಗ್ರೆಸ್ ನ ಸೋಷಿಯಲ್ ಮೀಡಿಯಾ ಪ್ರಮುಖರು!
— Chowkidar Sureshkumar (@nimmasuresh) April 19, 2019
ತಮ್ಮ ಟ್ವಿಟರ್ ಖಾತೆಯ ಮೂಲಕ ನಟಿ ರಮ್ಯಾ ಅವರನ್ನು ಕುಟುಕಿರುವ ಸುರೇಶ್ ಕುಮಾರ್ ಕೊನೆಗೂ ಮತದಾನ ಮಾಡುವುದಕ್ಕೆ ಬರದೆ ನಟಿ ರಮ್ಯಾ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ಇವರು ಕಾಂಗ್ರೆಸ್ನ ಸೋಷಿಯಲ್ ಮೀಡಿಯಾ ಪ್ರಮುಖರು ಎಂದು ಕಾಲೆಳೆದಿದ್ದಾರೆ.
ರಾಜ್ಯದಲ್ಲಿ ಕಳೆದ ಬಾರಿ ನಡೆದ ವಿಧಾನಸಭಾ ಚುನಾವಣೆ ವೇಳೆಯಲ್ಲಿಯೂ ನಟಿ ರಮ್ಯಾ ಮತದಾನ ಮಾಡಲು ಗೈರಾಗಿದ್ದರು. ಮಂಡ್ಯದಲ್ಲಿ ಸಂಸದರಾಗಿದ್ದ ಸಿ.ಎಸ್.ಪುಟ್ಟರಾಜು ಅವರು ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ತೆರವಾಗಿದ್ದ ಸಂಸದ ಸ್ಥಾನಕ್ಕೆ ನಡೆದ ಲೋಕಸಭೆಯ ಉಪಚುನಾವಣೆಯಲ್ಲಿಯೂ ರಮ್ಯಾ ಕಾಣಲೇ ಇಲ್ಲ.
ಇದೀಗ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಮತದಾನ ಮಾಡದೇ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.