ಕರ್ನಾಟಕ

ಗೊಣ್ಣೆ ಸುರಿಸಿಕೊಂಡಿದ್ದ ರೇವಣ್ಣನನ್ನು ಡೈರಿ ಅಧ್ಯಕ್ಷನನ್ನಾಗಿ ಮಾಡಿದ್ದೆ ನಾನು: ಎ. ಮಂಜು

Pinterest LinkedIn Tumblr


ಹಾಸನ: “ಕೇವಲ ಏಳನೇ ತರಗತಿಯಷ್ಟೆ ಓದಿರುವ ರೇವಣ್ಣ ಸ್ವಲ್ಪ ಎಚ್ಚರಿಕೆಯಿಂದಿರು. ಗೊಣ್ಣೆ ಸುರಿಸಿಕೊಂಡು ನಿಂತಿದ್ದ ನಿನ್ನನ್ನು ಮೊದ ಮೊದಲು ಕೆಎಂಎಫ್​ ಡೈರಿ ಅಧ್ಯಕ್ಷನನ್ನಾಗಿ ಮಾಡಿದ್ದೆ ನಾನು” ಎಂದು ಮಾಜಿ ಸಚಿವ ಹಾಗೂ ಹಾಸನ ಬಿಜೆಪಿ ಅಭ್ಯರ್ಥಿ ಎ.ಮಂಜು ಲೇವಡಿ ಮಾಡಿದ್ದಾರೆ.

ಚುನಾವಣಾ ಪ್ರಚಾರದ ಕೊನೆಯ ದಿನವಾದ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಸಚಿವ ರೇವಣ್ಣನ ವಿರುದ್ಧ ಟೀಕಾಪ್ರಹಾರ ನಡೆಸಿರುವ ಎ.ಮಂಜು, “ ರೇವಣ್ಣ ಗಾಜಿನ ಮನೆಯಲ್ಲಿ ನಿಂತು ಕಲ್ಲು ಒಡೆಯುವ ಕೆಲಸ ಮಾಡುತ್ತಿದ್ದಾರೆ. 1991ರಲ್ಲಿ ರೇವಣ್ಣ ಗೊಣ್ಣೆ ಸುರಿಸಿಕೊಂಡು ನಿಂತಿದ್ದ, ಆಗ ನಾವು ದೇವೇಗೌಡರ ಪರ ಪ್ರಚಾರ ನಡೆಸುತ್ತಿದ್ದೆವು. ಮುಂದೆ ಈತನನ್ನು ಕೆಎಂಎಪ್​ ಅಧ್ಯಕ್ಷನನ್ನಾಗಿಯೂ ಮಾಡಿದೆವು” ಎಂದು ರೇವಣ್ಣ ವಿರುದ್ಧ ಏಕವಚನದಲ್ಲಿ ಟೀಕಾಪ್ರಹಾರ ನಡೆಸಿದ್ದಾರೆ.

ಸಚಿವ ರೇವಣ್ಣ ಹಾಸನದಲ್ಲಿ ರಾಜ ಕಾಲುವೆ ಮೇಲೆ ಕಟ್ಟಡ ಕಟ್ಟಿದ್ದಾರೆ ಎಂದು ಆರೋಪ ಮಾಡಿರುವ ರೇವಣ್ಣ, “ನಾನು ಮಣ್ಣಿನ ಮಗ, ಒಬ್ಬ ರೈತನ ಮಗ. ನನ್ನ ಸಂಪೂರ್ಣ ಆಸ್ತಿಯನ್ನು ನಾನು ಘೋಷಿಸಿಕೊಂಡಿದ್ದೇನೆ. ಧೈರ್ಯ ಇದ್ದರೆ ರೇವಣ್ಣ ಅವರ ಆಸ್ತಿಯ ವಿವರದ ಬಗ್ಗೆ ಬಹಿರಂಗ ‌ಚರ್ಚೆಗೆ ಬರಲಿ” ಎಂದು ಸವಾಲು ಹಾಕಿದ್ದಾರೆ.

ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ ವಿರುದ್ಧವೂ ಗುಡುಗಿರುವ ಎ.ಮಂಜು, “ದೇವೇಗೌಡರೆ 1991ರಲ್ಲಿ ನೀವು ನನ್ನ ಸಹಾಯದಿಂದ ಗೆದ್ದಿದ್ದಿರಿ ನೆನಪಿದೆಯಾ? ಜೆಡಿಎಸ್ ಕಚೇರಿ ಕಟ್ಟುತ್ತೇನೆ ಎಂದು ಜಾಗ ಪಡೆದು ಕಲ್ಯಾಣ ಮಂಟಪ ನಿರ್ಮಿಸಿದಿರಿ, ಮತ ಹಾಕಿಸಿಕೊಳ್ಳುವ ಸಲುವಾಗಿ ನೀರಾವರಿ ಇಲಾಖೆಯ ಹಣವನ್ನು ದೇವಾಲಯ ನಿರ್ಮಿಸಲು ಉಪಯೋಗಿಸಿದಿರಿ. ಸಿದ್ದರಾಮಯ್ಯನವರನ್ನು ರಾಜಕೀಯವಾಗಿ ಮುಗಿಸಿದ ಕೀರ್ತಿ ನಿಮಗೆ ಸಲ್ಲುತ್ತದೆ” ಎಂದು ಆರೋಪಿಸಿದ್ದಾರೆ. ಅಲ್ಲದೆ ದೇವೇಗೌಡರ ಕುಟುಂಬ ರಾಜಕಾರಣಕ್ಕೆ ಅಂತ್ಯ ಹಾಡಲು ಬಿಜೆಪಿಯನ್ನು ಗೆಲ್ಲಿಸಿ ಮೋದಿಯನ್ನು ಮತ್ತೊಮ್ಮೆ ಪ್ರಧಾನಿ ಮಾಡಿ ಎಂದು ಕರೆ ನೀಡಿದ್ದಾರೆ.

Comments are closed.