ಕರ್ನಾಟಕ

ಕುಮಾರಸ್ವಾಮಿಗೆ ಬಿಜೆಪಿ ಸೇರಲು ಕೇಂದ್ರ ಸಚಿವ ರಾಮದಾಸ್ ಅಥಾವಳೆ ಆಹ್ವಾನ

Pinterest LinkedIn Tumblr


ಬೆಂಗಳೂರು: ರಾಜ್ಯದಲ್ಲಿ ಈಗಾಗಲೇ ಮೈತ್ರಿ ಸರ್ಕಾರ ರೂಪುಗೊಂಡಿದ್ದು, ಲೋಕಸಭಾ ಸಮರಕ್ಕೂ ಜಂಟಿಯಾಗಿ ಧುಮುಕಲು ನಿರ್ಧರಿಸಿವೆ. 7 ಕ್ಷೇತ್ರಗಳಲ್ಲಿ ಜೆಡಿಎಸ್​ ಮತ್ತು 21 ಕ್ಷೇತ್ರಗಳಲ್ಲಿ ಕಾಂಗ್ರೆಸ್​ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಕರ್ನಾಟಕದಲ್ಲಿ ಏ. 18 ಮತ್ತು 23ರಂದು ಚುನಾವಣೆ ನಡೆಯಲಿದೆ.

ಒಂದೆಡೆ ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಲು ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಪ್ರಧಾನಿ ದೇವೇಗೌಡರು, ಎಚ್​.ಡಿ. ರೇವಣ್ಣ, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಮೈತ್ರಿ ನಾಯಕರು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಅತ್ತ ಬಿಜೆಪಿ ಕೂಡ ರಾಷ್ಟ್ರಮಟ್ಟದ ನಾಯಕರನ್ನು ಕರೆಸಿ ಚುನಾವಣಾ ಪ್ರಚಾರ ನಡೆಸುತ್ತಿದೆ. ಚುನಾವಣೆ ಸಂದರ್ಭದಲ್ಲಿ ಒಂದು ಪಕ್ಷದವರು ಇನ್ನೊಂದು ಪಕ್ಷಕ್ಕೆ ಹೋಗುವುದು, ನಾಯಕರಲ್ಲಿ ಅಮಸಾಧಾನಗಳು ಏಳುವುದು ಮಾಮೂಲು. ಚುನಾವಣೆಗೂ ಮುನ್ನವೇ ಮೈತ್ರಿ ಪಕ್ಷದ ನಾಯಕರಿಗೆ ಗಾಳ ಹಾಕಿದ್ದ ಬಿಜೆಪಿ ಕಾಂಗ್ರೆಸ್​ನ ಉಮೇಶ್​ ಜಾಧವ್, ಎ. ಮಂಜು ಅವರನ್ನು ತನ್ನತ್ತ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು.

ಇದೀಗ, ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿಯವರಿಗೇ ಬಿಜೆಪಿ ಸೇರುವಂತೆ ಕೇಂದ್ರ ಸಚಿವ ರಾಮದಾಸ್ ಅಥಾವಳೆ ಆಹ್ವಾನ ನೀಡಿದ್ದಾರೆ. ಕರ್ನಾಟಕದಲ್ಲಿನ ಜೆಡಿಎಸ್​- ಕಾಂಗ್ರೆಸ್​ ಮೈತ್ರಿ ಸರ್ಕಾರ ಹೆಚ್ಚು ದಿನ ಉಳಿಯಲು ಸಾಧ್ಯವಿಲ್ಲ. ಹೀಗಾಗಿ, ರಾಜ್ಯದ ಜನರ ಹಿತದೃಷ್ಟಿಯಿಂದ ಕುಮಾರಸ್ವಾಮಿಯವರು ಬಿಜೆಪಿ ಜೊತೆ ಕೈಜೋಡಿಸುವುದು ಉತ್ತಮ ಎಂದು ಬಹಿರಂಗವಾಗಿಯೇ ಆಫರ್ ನೀಡಿದ್ದಾರೆ.

ಕಾಂಗ್ರೆಸ್​ ಜಾತಿ ರಾಜಕೀಯ ಮಾಡುತ್ತಿದೆ. ಕಾಂಗ್ರೆಸ್​ ಅಧ್ಯಕ್ಷ ರಾಹುಲ್ ಗಾಂಧಿ ತಾನು ಪ್ರಧಾನಿಯಾಗುತ್ತೇನೆಂದು ಕನಸು ಕಾಣುವುದರಿಂದ ಉಪಯೋಗವಿಲ್ಲ. ಕಾಂಗ್ರೆಸ್​ ನಾಯಕರ ವರ್ತನೆಯಿಂದ ಸಿಎಂ ಕುಮಾರಸ್ವಾಮಿ ಬೇಸರಗೊಂಡಿದ್ದಾರೆ. ಈ ಬಗ್ಗೆ ಅವರೇ ಸಾಕಷ್ಟು ಬಾರಿ ವೇದಿಕೆಗಳಲ್ಲಿ ಅಸಹಾಯಕತೆ ತೋಡಿಕೊಂಡಿದ್ದಾರೆ. ಹಾಗಾಗಿ, ಜೆಡಿಎಸ್​ ಮನಸು ಮಾಡಿದರೆ ಬಿಜೆಪಿಯೊಂದಿಗೆ ಕೈಜೋಡಿಸಿ ಹೊಸ ಸಮ್ಮಿಶ್ರ ಸರ್ಕಾರ ರಚಿಸಬಹುದು ಎಂದು ದಲಿತ ನಾಯಕ ರಾಮದಾಸ್​ ಅಥಾವಳೆ ಹೇಳಿದ್ದಾರೆ.

ನಮ್ಮೊಂದಿಗೆ ಬಂದರೆ ಡಿಸಿಎಂ ಮಾಡುತ್ತೇವೆ:

ಒಂದೊಮ್ಮೆ ಎಚ್​.ಡಿ. ಕುಮಾರಸ್ವಾಮಿ ಬಿಜೆಪಿಯೊಂದಿಗೆ ಕೈಜೋಡಿಸಿದರೆ ನಾವು ಅವರನ್ನು ಉಪಮುಖ್ಯಮಂತ್ರಿ ಮಾಡುತ್ತೇವೆ. ಮುಖ್ಯಮಂತ್ರಿಯಾಗಿದ್ದುಕೊಂಡು ಹೀಗೆ ಕಣ್ಣಿರು ಹಾಕುವುದಕ್ಕಿಂತ ಉಪಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಇನ್ನೂ ಖುಷಿಯಾಗಿರುತ್ತಾರೆ ಎಂಬ ನಂಬಿಕೆ ನಮಗಿದೆ ಎಂದು ಆಫರ್ ನೀಡಿದ್ದಾರೆ.

ಈ ಮೊದಲು ಕೂಡ ಜೆಡಿಎಸ್​ಗೆ ನಾವು ಆಫರ್ ನೀಡಿದ್ದೆವು. ಆದರೆ, ಅವರು ಕಾಂಗ್ರೆಸ್​ನೊಂದಿಗೆ ಸೇರಿ ಸರ್ಕಾರ ರಚಿಸಿದರು. ಈಗ ಅವರಿಗೂ ಕಾಂಗ್ರೆಸ್​ನ ನಿಜವಾದ ಬಣ್ಣದ ಅರಿವಾಗಿದೆ. ಈಗಲೂ ಕಾಲ ಮಿಂಚಿಲ್ಲ. ಕಾಂಗ್ರೆಸ್​ ನಾಯಕರು ಜಾಣತನದಿಂದ ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ ತಾವು ಅಧಿಕಾರ ಚಲಾಯಿಸುತ್ತಿದ್ದಾರೆ. ಸಾರ್ವಜನಿಕ ಸಮಾರಂಭಗಳಲ್ಲೇ ಕಣ್ಣಿರು ಹಾಕುತ್ತ ಅಸಹಾಯಕತೆ ತೋಡಿಕೊಳ್ಳುವ ಕುಮಾರಸ್ವಾಮಿ ಸಂತೋಷವಾಗಿಲ್ಲ ಎಂಬುದು ಎಲ್ಲರಿಗೂ ಗೊತ್ತಾಗುತ್ತಿದೆ ಎಂದು ಅಥಾವಳೆ ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕ ರಾಜ್ಯ ಅಭಿವೃದ್ಧಿಯಾಗಬೇಕಾದರೆ ಎಚ್​.ಡಿ. ಕುಮಾರಸ್ವಾಮಿ ಕಾಂಗ್ರೆಸ್​ನ ಕೈಬಿಟ್ಟು ಬಿಜೆಪಿ ಜೊತೆ ಕೈಜೋಡಿಸಬೇಕು. ಆಗ ಮಾತ್ರ ರಾಜ್ಯದ ಅಭಿವೃದ್ಧಿ ಸಾಧ್ಯ. ಮುಂದೆ ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಮತ್ತೊಮ್ಮೆ ರಚನೆಯಾಗುವುದು ಖಚಿತ. ಹೀಗಾಗಿ, ಈ ಮೈತ್ರಿಗೆ ಒಪ್ಪಿದರೆ ಕುಮಾರಸ್ವಾಮಿಯವರಿಗೂ ಅನುಕೂಲವಾಗುತ್ತದೆ. ಈ ಬಗ್ಗೆ ಜೆಡಿಎಸ್​ ನಾಯಕರು ಮತ್ತೊಮ್ಮೆ ಯೋಚಿಸಬೇಕು ಎಂದು ಸಲಹೆ ನೀಡಿದ್ದಾರೆ.

Comments are closed.