ಕರ್ನಾಟಕ

ಯಾರು, ಯಾವಾಗ, ಯಾರ ಲುಂಗಿ ಕಳಚ್ತಾರೋ ಗೊತ್ತಿಲ್ಲ; ಮಹಾಮೈತ್ರಿ ಕುರಿತು ಡಿ.ವಿ. ಸದಾನಂದ

Pinterest LinkedIn Tumblr


ಬೆಂಗಳೂರು: ಮಹಾಮೈತ್ರಿ ಮಾಡಿಕೊಂಡು ಬಿಜೆಪಿಯನ್ನು ತುಳಿಯಲು ಕೆಲವರು ಮುಂದಾಗಿದ್ದಾರೆ. ಅದೇ ಮಹಾಘಟಬಂಧನ್​ ನಾಯಕರು ಪರಸ್ಪರ ಕಚ್ಚಾಡಿಕೊಳ್ಳುತ್ತಿರುವುದನ್ನು ನೋಡಿದರೆ ಯಾರ ಲುಂಗಿಯನ್ನು ಯಾರು, ಯಾವಾಗ ಕಳಚುತ್ತಾರೋ, ಯಾರ ಪಂಚೆ, ಶಲ್ಯ ಯಾವಾಗ ಬೀಳುತ್ತೋ ಗೊತ್ತಿಲ್ಲ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ವ್ಯಂಗ್ಯವಾಡಿದ್ದಾರೆ.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಡಿ.ವಿ. ಸದಾನಂದ ಗೌಡ ಇಂದು ಯಶವಂತಪುರದ ಉಲ್ಲಾಳದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಪ್ರಚಾರ ನಡೆಸಿದ್ದಾರೆ.

ಈ ವೇಳೆ ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡರ ವಿರುದ್ಧ ಹರಿಹಾಯ್ದ ಡಿ.ವಿ. ಸದಾನಂದಗೌಡ, ಕೆಲವರಿಗೆ ಕುಟುಂಬವೇ ದೇಶ. ಅವರು ತಮ್ಮ ಕುಟುಂಬಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ. ಆದರೆ, ನಮಗೆ ದೇಶವೇ ಕುಟುಂಬ ಎಂದು ಟೀಕಿಸಿದ್ದಾರೆ.

ಸದಾನಂದಗೌಡರ ಭಾಷಣದ ವೇಳೆ ಕಾರ್ಯಕರ್ತರಿಂದ ಎಲ್ಲಿದ್ದೀಯಪ್ಪ ನಿಖಿಲ್? ಡೈಲಾಗ್ ಕೇಳಿಬಂದಿತು. ನಾನು ಎಲ್ಲಿದ್ದೀಯಪ್ಪ ಎಂದು ಯಾರನ್ನೂ ಕೇಳುವುದಿಲ್ಲ. ಯಾರು ಎಲ್ಲಿರಬೇಕೋ ಅಲ್ಲೇ ಇದ್ದರೆ ಸಾಕು ಎಂದು ಸದಾನಂದ ಗೌಡರು ಟಾಂಗ್ ನೀಡಿದ್ದಾರೆ.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಡಿ.ವಿ. ಸದಾನಂದ ಗೌಡರ ಎದುರಾಳಿಯಾಗಿ ದೇವೇಗೌಡರೇ ಸ್ಪರ್ಧಿಸಲಿದ್ದಾರೆ ಎನ್ನಲಾಗಿತ್ತು. ದೇವೇಗೌಡರು ತುಮಕೂರಿನಿಂದ ಸ್ಪರ್ಧಿಸುವುದು ಅಂತಿಮವಾದ ನಂತರವೂ ಬೆಂಗಳೂರು ಉತ್ತರ ಕ್ಷೇತ್ರದಲ್ಲೂ ಅವರೇ ಸ್ಪರ್ಧಿಸಲಿದ್ದಾರೆ ಎನ್ನಲಾಗಿತ್ತು. ಈ ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯದವರು ಹೆಚ್ಚಾಗಿರುವುದರಿಂದ ಸದಾನಂದಗೌಡರ ವಿರುದ್ಧ ಒಕ್ಕಲಿಗ ಅಭ್ಯರ್ಥಿಯೇ ಸ್ಪರ್ಧಿಸಿದರೆ ಹೆಚ್ಚು ಲಾಭವಾಗಲಿದೆ ಎಂಬ ಲೆಕ್ಕಾಚಾರ ಮೈತ್ರಿ ಪಕ್ಷದ್ದಾಗಿತ್ತು. ಆದರೆ, ಕೊನೆ ಕ್ಷಣದಲ್ಲಿ ಕೃಷ್ಣ ಭೈರೇಗೌಡರನ್ನು ಕಾಂಗ್ರೆಸ್​- ಜೆಡಿಎಸ್​ ಅಭ್ಯರ್ಥಿಯಾಗಿ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಕಣಕ್ಕಿಳಿಸಲಾಗಿದೆ.

Comments are closed.