ಕರ್ನಾಟಕ

ಸೋತರೆ ಸಮ್ಮಿಶ್ರ ಸರ್ಕಾರ ಇರುತ್ತಾ! ಜೆಡಿಎಸ್​ ನಾಯಕರಿಗೆ ಸಿದ್ದರಾಮಯ್ಯ

Pinterest LinkedIn Tumblr


ಮೈಸೂರು: ರಾಜ್ಯದಲ್ಲಿರುವುದು ಸಮ್ಮಿಶ್ರ ಸರ್ಕಾರ. ಮೈತ್ರಿ ಸರ್ಕಾರ ಐದು ವರ್ಷ ನಡೆಯಬೇಕು. ನಾವು ಸೋತರೆ ಸರ್ಕಾರ ಇರುತ್ತದೆಯಾ ಎನ್ನುವ ಮೂಲಕ ಜೆಡಿಎಸ್​ ನಾಯಕರಿಗೆ ನಮ್ಮ ಅಭ್ಯರ್ಥಿ ಸೋತರೆ ಅದಕ್ಕೆ ನೀವೇ ಕಾರಣ. ಇದು ಮುಂದೆ ಮೈತ್ರಿಗೆ ಎಳ್ಳುನೀರು ಬಿಡಬೇಕಾದ ಪರಿಸ್ಥಿತಿ ಉದ್ಭವವಾಗಬಹುದು ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.

ಜಯಪುರದಲ್ಲಿ ಜಿಟಿ ದೇವೇಗೌಡ ಸೇರಿದಂತೆ ಜೆಡಿಎಸ್​ ನಾಯಕರೊಂದಿಗೆ ಜಂಟಿ ಸಮಾವೇಶದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಈ ಮೈತ್ರಿ ಸರ್ಕಾರದಲ್ಲಿ ನಾನು ಮಂತ್ರಿಯಲ್ಲ, ಮುಖ್ಯಮಂತ್ರಿ ಆಗಿರುವುದು ಕುಮಾರಸ್ವಾಮಿ. ಮಂತ್ರಿ ಆಗಿರುವುದು ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್. ಈ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಬಾರದು. ಮೈತ್ರಿ ಅಭ್ಯರ್ಥಿಗಳು ಗೆಲ್ಲಬೇಕು‌, ನಾವು ಗೆಲ್ಲಬೇಕು‌. ನಾವು ಸೋತರೆ ಸರ್ಕಾರ ಇರುತ್ತಾ ಎಂದು ಪ್ರಶ್ನಿಸಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ಮೈತ್ರಿ ನಾಯಕರಿಗೆ ವಿಜಯಶಂಕರ್​ ಸೋತರೆ, ಈ ಸರ್ಕಾರ ಇರುವುದಿಲ್ಲ ಎಂಬ ಪರೋಕ್ಷ ಸಂದೇಶ ರವಾನಿಸಿದ್ದಾರೆ.

ಮೈಸೂರಿನಲ್ಲಿ ಮೈತ್ರಿ ಅಭ್ಯರ್ಥಿಗಳ ಮುನಿಸಿನ ವಿಚಾರ ಈಗಾಗಲೇ ಬಹಿರಂಗಗೊಂಡಿದೆ. ಮೈತ್ರಿ ಅಭ್ಯರ್ಥಿ ವಿಜಯ್​ ಶಂಕರ್​ ಪರ ಜೆಡಿಎಸ್​ ನಾಯಕರು ಪ್ರಚಾರದಲ್ಲಿ ಭಾಗಿಯಾಗದಿರುವ ಬಗ್ಗೆ ಸಮಾವೇಶದಲ್ಲಿ ಸಿದ್ದರಾಮಯ್ಯ ಅಸಮಾಧಾನ ಹೊರ ಹಾಕಿದ್ದಾರೆ.

ಚಾಮುಂಡೇಶ್ವರಿ ಸೋಲಿನ ಬಳಿಕ ಕಡುವೈರಿಗಳಾಗಿದ್ದ ಜಿಟಿ ದೇವೇಗೌಡ, ಮೈತ್ರಿ ಅಭ್ಯರ್ಥಿ ಪರ ಪ್ರಚಾರ ನಡೆಸದೆ 10 ದಿನಗಳ ಕಾಲ ಕಣ್ಮರೆಯಾಗಿದ್ದರು. ಮಂಡ್ಯದಲ್ಲಿ ನಮಗೆ ಸಹಾಯ ಮಾಡಿದರೆ ಅಷ್ಟೇ ಮಾತ್ರ, ನಾವು ಮೈಸೂರಿನಲ್ಲಿ ಬೆಂಬಲಿಸುತ್ತೇವೆ ಎಂದಿದ್ದರು. ಅದರಂತೆ ಸಿದ್ದರಾಮಯ್ಯ ಮಂಡ್ಯಕ್ಕೆ ತೆರಳಿ, ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರ ಮಾಡಿದ್ದರು. ಇಂದು ಮೈಸೂರಿನಲ್ಲಿ ಮೊದಲ ಬಾರಿಗೆ ಜಿಟಿಡಿ ಮತ್ತು ಸಿದ್ದರಾಮಯ್ಯ ಮೈತ್ರಿ ಅಭ್ಯರ್ಥಿ ಪರ ಸಮಾವೇಶ ನಡೆಸಿದರು. ಈ ವೇಳೆ ಮಾತಿನಲ್ಲೇ ಚುಚ್ಚಿದ ಸಿದ್ದರಾಮಯ್ಯ, ಮೈತ್ರಿ ಗೆಲುವು ಇಲ್ಲಿನ ಸಚಿವರಿಗೆ ಅನಿವಾರ್ಯ ಎಂಬ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.

ಒಕ್ಕಲಿಗ ಸಮುದಾಯದ ಪ್ರಾಬಲ್ಯ ಕ್ಷೇತ್ರವಾಗಿರುವ ಮೈಸೂರಿನಲ್ಲಿ ವಿಜಯ ಶಂಕರ್​ ಸೋಲಿಸಲು ಜೆಡಿಎಸ್​ ನಾಯಕರು ಹಿಂಬಾಗಿಲಿನ ಮೂಲಕ ಪ್ರಯತ್ನಿಸುತ್ತಿದ್ದಾರೆ. ಈ ಮೂಲಕ ಮತ್ತೊಮ್ಮೆ ಸಿದ್ದರಾಮಯ್ಯ ಅವರಿಗೆ ಪೆಟ್ಟು ನೀಡಬೇಕು ಎಂಬ ತಯಾರಿ ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬಂದಿತ್ತು. ಇದಕ್ಕೆ ಅನುಗುಣವಾಗಿ ಸಚಿವರು ಕೂಡ ನಡೆದುಕೊಳ್ಳುತ್ತಿರುವುದು ಕಂಡ ಬಂದಿತು. ಈಗ ಈ ಕುರಿತು ಮಾತನಾಡಿರುವ ಸಿದ್ದರಾಮಯ್ಯ ಒಂದು ವೇಳೆ ತಮ್ಮ ಅಭ್ಯರ್ಥಿ ಸೋತರೆ ಅದರ ಪರಿಣಾಮ ಸರ್ಕಾರದ ಮೇಲೆ ಬೀರಲಿದೆ ಎಂದು ಹೇಳುವ ಮೂಲಕ ಜೆಡಿಎಸ್​ ನಾಯಕರಿಗೆ ಟಾಂಗ್ ನೀಡಿದ್ದಾರೆ.

ಕ್ಷೇತ್ರದಲ್ಲಿ ಜೆಡಿಎಸ್​ನ ಇಬ್ಬರು ಸಚಿವರಿದ್ದು, ಒಕ್ಕಲಿಗ ಮತಗಳು ಅಧಿಕವಿರುವ ಕ್ಷೇತ್ರದಲ್ಲಿ ಸಿಎಚ್​ ವಿಜಯಶಂಕರ್​ ಗೆಲವು ಜೆಡಿಎಸ್​ ನಾಯಕರ ಸಹಕಾರದ ಮೇಲೆ ನಿಂತಿದೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ವಿಜಯ ಶಂಕರ್​ ಒಂದು ವೇಳೆ ಸೋತರೆ ಅದನ್ನು ಜೆಡಿಎಸ್​ ಸಚಿವರಿಗೆ ತಲೆಗೆ ಕಟ್ಟಲು ತಯಾರಿ ನಡೆಸಿದ್ದಾರೆ. ಅದಕ್ಕೆ ಅವರಿಬ್ಬರ ಹೆಸರನ್ನು ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.

ಅಷ್ಟೇ ಅಲ್ಲದೇ ತಮ್ಮ ಸೋಲಿನ ಕಹಿ ಮರೆಯದ ಸಿದ್ದರಾಮಯ್ಯ, ಮತ್ತೆ ಚಾಮುಂಡೇಶ್ವರಿಯಲ್ಲಿ ಚುನಾವಣೆಗೆ ಸ್ಪರ್ಧಿಸಲ್ಲ. ನೀವೆಲ್ಲರೂ ಈ ಕ್ಷೇತ್ರವನ್ನು ಅಭಿವೃದ್ಧಿ ಮಾಡಬೇಕು ಎನ್ನುವ ಮೂಲಕ ಕ್ಷೇತ್ರದ ಎಲ್ಲ ಚಟುವಟಿಕೆಗಳನ್ನು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡರಿಗೆ ಜವಬ್ದಾರಿ ವಹಿಸಿದ್ದಾರೆ.

Comments are closed.