ಕರ್ನಾಟಕ

ಕುಮಾರಸ್ವಾಮಿ ತನ್ನ ಪುತ್ರನನ್ನು ಸೈನ್ಯಕ್ಕೆ ಸೇರಿಸಲಿ: ಸುಮಲತಾ

Pinterest LinkedIn Tumblr

ಕೆ.ಆರ್‌.ಪೇಟೆ/ಮಳವಳ್ಳಿ: ಮುಖ್ಯಮಂತ್ರಿ ಕುಮಾರಸ್ವಾಮಿಗೆ ದೇಶಪ್ರೇಮವಿದ್ದರೆ ತಮ್ಮ ಮಗನನ್ನು ಸಂಸದನನ್ನಾಗಿ ಮಾಡುವ ಬದಲು ಸೈನಿಕನನ್ನಾಗಿ ಮಾಡಬಹುದಿತ್ತು ಎಂದು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್‌ ತಿರುಗೇಟು ನೀಡಿದ್ದಾರೆ.

ತಾಲೂಕಿನ ವಿವಿಧೆಡೆ ರೋಡ್‌ ಶೋ ನಡೆಸಿ, ಸಿಎಂ ವಿರುದ್ಧ ಹರಿಹಾಯ್ದರು. ಮುಖ್ಯಮಂತ್ರಿಯವರು ಎರಡು ಹೊತ್ತಿನ ಊಟಕ್ಕೆ ತೊಂದರೆ ಇರುವವರು ಸೈನ್ಯಕ್ಕೆ ಸೇರುತ್ತಾರೆ ಎಂಬ ಚುಚ್ಚು ಮಾತನ್ನಾಡುತ್ತಾರೆ. ಜವಾಬ್ದಾರಿ ಇರುವವರು ಮಾತನಾಡುವ ಮಾತೇ ಇದು ಎಂದು ಪ್ರಶ್ನಿಸಿದರು. ವಿಷ್ಣುವರ್ಧನ್‌ ಸ್ಮಾರಕ ಮಾಡುವುದು ಈಗ ಅವರಿಗೆ ನೆನಪಾಗುತ್ತಿದೆ. ಇಲ್ಲಿವರೆಗೂ ಎಲ್ಲಿ ಹೋಗಿತ್ತು ಈ ಅಭಿಮಾನ ಎಂದರು.

ಸಿದ್ದರಾಮಯ್ಯನವರು ಸಂಪೂರ್ಣವಾಗಿ ಒಪ್ಪಿ ಪ್ರಚಾರಕ್ಕೆ ಬಂದಿಲ್ಲ. ಜೆಡಿಎಸ್‌ನವರು ಅವರನ್ನು ಕಟ್ಟಿಹಾಕಿ ಕರೆದುಕೊಂಡು ಬಂದಿದ್ದಾರೆ. ದೇವೇಗೌಡರನ್ನು ನಾವು ತಂದೆಯ ಸ್ಥಾನದಲ್ಲಿಟ್ಟು ನೋಡುತ್ತಿದ್ದೇವೆ. ಅವರೂ ಹಾಗೇ ನಮ್ಮನ್ನು ಮಕ್ಕಳ ಸ್ಥಾನದಲ್ಲಿಟ್ಟು ನೋಡಲಿ ಎಂದರು.
ಪ್ರಚಾರದ ವೇಳೆ, ಅಂಬಿ ಪ್ರಿಯಾ ಸ್ನೇಹ ಬಳಗದವರು 10,001 ರೂ., ಅಗ್ರಹಾರಬಾಚಹಳ್ಳಿ ಗ್ರಾಮಸ್ಥರು 25 ಸಾವಿರ, ವಳಗೆರೆಮೆಣಸ ಗ್ರಾಮಸ್ಥರು 10 ಸಾವಿರ ರೂ.ದೇಣಿಗೆ ನೀಡಿದರು.

ಅಮ್ಮನ ಗೆಲುವಿಗೆ ಅಭಿಷೇಕ್‌ ಪೂಜೆ: ಈ ಮಧ್ಯೆ, ಮದ್ದೂರಿನ ಇತಿಹಾಸ ಪ್ರಸಿದ್ಧ ಶಿಂಷಾ ನದಿ ದಡದ ಶ್ರೀ ಹೊಳೆ ಆಂಜನೇಯಸ್ವಾಮಿ ದೇವಾಲಯದಲ್ಲಿ ಸುಮಲತಾ ಗೆಲುವಿಗಾಗಿ ಪುತ್ರ ಅಭಿಷೇಕ್‌ ವಿಶೇಷ ಪೂಜೆ, ಪಾರ್ಥನೆ ಸಲ್ಲಿಸಿ, ಒಂದು ಕಾಲು ರೂ. ಹರಕೆ ಹೊತ್ತರು.

ಯಶ್‌ ಪ್ರಚಾರ: ಮದ್ದೂರಿನ ವಿವಿಧೆಡೆ ಪ್ರಚಾರ ನಡೆಸಿದ ನಟ ಯಶ್‌, ಅಂಬರೀಶ್‌ ಬದುಕಿದ್ದಾಗ ಅವರ ಮುಂದೆ ನಿಂತು ಮಾತನಾಡಲು ಹೆದರುತ್ತಿದ್ದವರು, ಇಂದು ಚುನಾವಣೆಗೆ ಸ್ಪರ್ಧಿಸಿರುವ ಅವರ ಧರ್ಮಪತ್ನಿ ಸುಮಲತಾ ವಿರುದ್ಧ ಅಗೌರವವಾಗಿ ಮಾತನಾಡುತ್ತಿದ್ದಾರೆ. ಮಂಡ್ಯದ ಸೊಸೆ ಸುಮಲತಾ ಚುನಾವಣೆಗೆ ಸ್ಪರ್ಧಿಸಿರುವುದು ತಪ್ಪೇ ಎಂದು ಪ್ರಶ್ನಿಸಿದರು.

Comments are closed.