ರಾಷ್ಟ್ರೀಯ

ಪ್ರಧಾನಿ ಹೆಲಿಕಾಪ್ಟರ್​ನಲ್ಲಿದ್ದ ಅನುಮಾನಾಸ್ಪದ ಟ್ರಂಕ್ ಕುರಿತು ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ನಿಂದ ದೂರು

Pinterest LinkedIn Tumblr


ಬೆಂಗಳೂರು: ಕೆಲ ದಿನಗಳ ಹಿಂದಷ್ಟೆ ಚುನಾವಣಾ ಪ್ರಚಾರಕ್ಕೆಂದು ಪ್ರಧಾನಿ ನರೇಂದ್ರ ಮೋದಿ ಚಿತ್ರದುರ್ಗಕ್ಕೆ ಆಗಮಿಸಿದ್ದ ವೇಳೆ ಅವರು ಬಂದಿಳಿದ ಹೆಲಿಕಾಪ್ಟರ್​ನಿಂದ ಕಪ್ಪು ಬಣ್ಣದ ಟ್ರಂಕ್​ವೊಂದನ್ನು ಸಿಬ್ಬಂದಿ ತೆಗೆದುಕೊಂಡು ಹೋಗುತ್ತಿರುವ ದೃಶ್ಯವನ್ನು ಸೆರೆಹಿಡಿಯಲಾಗಿತ್ತು. ಆ ಅನುಮಾನಾಸ್ಪದ ಕಪ್ಪು ಬಣ್ಣದ ಟ್ರಂಕ್​ ಬಗ್ಗೆ ತನಿಖೆ ನಡೆಸಬೇಕೆಂದು ಚುನಾವಣಾ ಆಯೋಗಕ್ಕೆ ಕರ್ನಾಟಕ ಕಾಂಗ್ರೆಸ್​ ದೂರು ನೀಡಿದೆ.

ಕಪ್ಪು ಪೆಟ್ಟಿಗೆಯನ್ನು ಹೆಲಿಪ್ಯಾಡ್​ನಿಂದ ಕೊಂಡೊಯ್ಯುತ್ತಿರುವ ವಿಡಿಯೋವನ್ನು ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ನಿನ್ನೆ ಶೇರ್​ ಮಾಡಿಕೊಂಡಿದ್ದ ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್, ಚಿತ್ರದುರ್ಗಕ್ಕೆ ಪ್ರಚಾರಕ್ಕೆ ಬಂದಿದ್ದ ಪಿಎಂ ಮೋದಿ ಅವರ ಹೆಲಿಕಾಪ್ಟರ್​ನಿಂದ ಅನುಮಾನಾಸ್ಪದವಾದ ಟ್ರಂಕ್​ವೊಂದನ್ನು ಕೆಳಗಿಳಿಸಲಾಗಿದೆ. ಆ ಟ್ರಂಕ್​ ಅನ್ನು ಗಡಿಬಿಡಿಯಿಂದ ಕಾರಿನ ಬಳಿಗೆ ಸಿಬ್ಬಂದಿ ಕೊಂಡೊಯ್ಯುತ್ತಿರುವ ದೃಶ್ಯ ಸೆರೆಯಾಗಿದೆ. ಆ ಕಾರು ಯಾರದ್ದು ಮತ್ತು ಆ ಪೆಟ್ಟಿಗೆಯಲ್ಲೇನಿದೆ ಎಂಬುದನ್ನು ಚುನಾವಣಾ ಆಯೋಗ ತನಿಖೆ ನಡೆಸಬೇಕೆಂದು ಬರೆದುಕೊಂಡಿದ್ದರು.

ಈ ಬಗ್ಗೆ ಇಂದು ಅಧಿಕೃತವಾಗಿ ಕರ್ನಾಟಕ ಕಾಂಗ್ರೆಸ್​ ನಾಯಕರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್​ ವಕ್ತಾರ ಆನಂದ್ ಶರ್ಮ, ಚುನಾವಣಾ ಆಯೋಗ ಈ ಬಗ್ಗೆ ತುರ್ತಾಗಿ ತನಿಖೆ ನಡೆಸಬೇಕು. ಆ ಟ್ರಂಕ್​ನಲ್ಲಿ ಏನಿತ್ತು ಎಂಬುದು ಬಹಿರಂಗವಾಗಬೇಕು. ಈ ಬಗ್ಗೆ ಕರ್ನಾಟಕ ಕಾಂಗ್ರೆಸ್​ ವಿಭಾಗ ಈಗಾಗಲೇ ದೂರು ನೀಡಿದೆ ಎಂದು ತಿಳಿಸಿದ್ದಾರೆ.

ಏ. 9ರಂದು ಚಿತ್ರದುರ್ಗದಲ್ಲಿ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಿದ್ದರು. ಆ ವೇಳೆ ಹೆಲಿಕಾಪ್ಟರ್​ನಿಂದ ಇಳಿಸಲ್ಪಟ್ಟ ಕಪ್ಪು ಪೆಟ್ಟಿಗೆಯಲ್ಲಿ ಹಣವಿರಲಿಲ್ಲ ಎಂದಾದರೆ ತನಿಖೆಯಾಗಲಿ, ಆ ಬಗ್ಗೆ ಇರುವ ಅನುಮಾನವೂ ಬಗೆಹರಿಯಲಿ ಎಂದು ಶರ್ಮ ಆಗ್ರಹಿಸಿದ್ದಾರೆ.

Comments are closed.