ಕರ್ನಾಟಕ

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಹೆಲಿಕಾಪ್ಟರ್‌ ಬಳಕೆ: ಜೆಡಿಎಸ್‌ ಮುಂದು

Pinterest LinkedIn Tumblr


ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಹೆಲಿಕಾಪ್ಟರ್‌ಗಳ “ಕೃತಕ ಅಭಾವ’ ಸೃಷ್ಟಿಸುತ್ತಿದೆ ಎಂದು ಇತ್ತೀಚಿಗಷ್ಟೇ ಮುಖ್ಯ ಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರು ಆರೋಪಿಸಿದ್ದರು. ಆದರೆ, ಚುನಾವಣಾ ಆಯೋ ಗದ ಮಾಹಿತಿಯಂತೆ ಕರ್ನಾಟಕದಲ್ಲಿ ಹೆಲಿಕಾಪ್ಟರ್‌ ಬಳಕೆಯಲ್ಲಿ ಜೆಡಿಎಸ್‌ ಪಕ್ಷವೇ ಮುಂದಿದೆ.

ಚುನಾವಣಾ ಪ್ರಚಾರಕ್ಕೆ ಹೆಲಿಕಾಪ್ಟರ್‌ ಬಳಸುವ ವಿಚಾರದಲ್ಲಿ ಜೆಡಿಎಸ್‌ ಪಕ್ಷ, ಬಿಜೆಪಿ ಹಾಗೂ ಕಾಂಗ್ರೆಸ್‌ನ್ನು ಹಿಂದಿಕ್ಕಿದೆ. ಜೆಡಿಎಸ್‌, 16 ಹೆಲಿಕಾಪ್ಟರ್‌ಗಳ ಬಳಕೆಗೆ ಅನುಮತಿ ಪಡೆದುಕೊಂಡಿದ್ದರೆ, ಬಿಜೆಪಿ 13 ಹಾಗೂ ಕಾಂಗ್ರೆಸ್‌ 6 ಹೆಲಿಕಾಪ್ಟರ್‌ಗಳ ಬಳಕೆಗೆ ಅನುಮತಿ ಪಡೆದುಕೊಂಡಿದೆ.

ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ಈ ಮಾಹಿತಿ ನೀಡಿದ್ದಾರೆ. ಎಲ್ಲ ಪಕ್ಷಗಳಿಂದ ಹೆಲಿಕಾಪ್ಟರ್‌ ಬಳಕೆಗೆ ಅನುಮತಿ ಕೋರಿ ಒಟ್ಟು 49 ಪ್ರಸ್ತಾವನೆಗಳು ಬಂದಿದ್ದು, ಅದರಲ್ಲಿ ಈವರೆಗೆ 40 ಪ್ರಸ್ತಾವನೆಗಳಿಗೆ ಒಪ್ಪಿಗೆ ನೀಡಲಾಗಿದೆ ಎಂದರು.

ಉಳಿದಂತೆ ಚುನಾವಣಾ ಪ್ರಚಾರದ ಉದ್ದೇಶ ಕ್ಕಾಗಿ ವಿವಿಧ ರಾಜಕೀಯ ಪಕ್ಷಗಳು ಹಾಗೂ ಪಕ್ಷೇತರರಿಂದ ವಾಹನ ಪರವಾನಿಗೆ, ಚುನಾವಣಾ ಕಚೇರಿ ಪ್ರಾರಂಭ, ಸಾರ್ವಜನಿಕ ಸಭೆ ಹಾಗೂ ಧ್ವನಿವರ್ಧಕ ಬಳಕೆ, ಬೀದಿ ಸಭೆ ಹಾಗೂ ಧ್ವನಿವರ್ಧಕ ಬಳಕೆ, ಮೆರವಣಿಗೆ, ರೋಡ್‌ ಶೋ, ಅಂತರ್‌ಜಿಲ್ಲೆಗಳಲ್ಲಿ ವಾಹನ ಸಂಚಾರ ಮತ್ತಿತರರ ವಿಷಯಗಳ ಪರವಾನಿಗೆಗೆ ಒಟ್ಟು 6,900 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಈ ಪೈಕಿ ಬಿಜೆಪಿ ಅತಿ ಹೆಚ್ಚು 2,719, ಕಾಂಗ್ರೆಸ್‌ನಿಂದ 1,893, ಜೆಡಿಎಸ್‌ನಿಂದ 800, ಬಿಎಸ್‌ಪಿಯಿಂದ 235, ಸಿಪಿಐನಿಂದ 30, ಸಿಪಿಎಂನಿಂದ 61 ಹಾಗೂ ಪಕ್ಷೇತರರಿಂದ 349 ವಿವಿಧ ಅನುಮತಿ ಕೇಳಿದ ಮನವಿಗಳನ್ನು ಸ್ವೀಕರಿಸಲಾಗಿದೆ ಎಂದು ತಿಳಿಸಿದರು.

Comments are closed.