ಬಿಜೆಪಿ ಭದ್ರಕೋಟೆ ಎಂದೇ ಕರೆಯಲಾಗುವ ಬೆಂಗಳೂರು ದಕ್ಷಿಣ ಕ್ಷೇತ್ರವನ್ನು ದಿವಂಗತ ಅನಂತಕುಮಾರ್ 1996ರಿಂದ 2014ರ ವರೆಗೆ 6 ಭಾರಿ ಲೋಕಸಭೆಯಲ್ಲಿ ಪ್ರತಿನಿಧಿಸಿದ್ದರು. ಆದರೆ, ಅವರ ಅಕಾಲಿಕ ಮರಣದ ನಂತರ ಈ ಕ್ಷೇತ್ರ ಹಲವಾರು ಕಾರಣಗಳಿಗಾಗಿ ಪ್ರಸ್ತುತ ಸುದ್ದಿ ಕೇಂದ್ರದಲ್ಲಿದೆ.
ಅನಂತಕುಮಾರ್ ಮರಣದ ನಂತರ ಅವರ ಪತ್ನಿ ತೇಜಸ್ವಿನಿ ಅವರಿಗೆ ಪಕ್ಷ ಟಿಕೆಟ್ ನೀಡುವುದು ಬಹುತೇಕ ಖಚಿತವಾಗಿತ್ತು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸಹ ಕೇಂದ್ರಕ್ಕೆ ಅವರ ಹೆಸರನ್ನೇ ಅಂತಿಮಗೊಳಿಸಿ ಶಿಫಾರಸು ಮಾಡಿದ್ದರು. ಇದೇ ಕಾರಣಕ್ಕೆ ತೇಜಸ್ವಿನಿ ಕಳೆದ ಒಂದು ತಿಂಗಳ ಹಿಂದೆಯೇ ಕ್ಷೇತ್ರದಲ್ಲಿ ಮನೆಮನೆ ಪ್ರಚಾರ ಆರಂಭಿಸಿದ್ದರು. ಆದರೆ, ಕೊನೆಕ್ಷಣದ ನಾಟಕೀಯ ಬೆಳವಣಿಗೆಯಲ್ಲಿ ಬಸವನಗುಡಿ ಶಾಸಕ ರವಿಸುಬ್ರಮಣ್ಯ ಅವರ ಅಣ್ಣನ ಮಗ 28ರ ಹರೆಯದ ತೇಜಸ್ವಿ ಸೂರ್ಯನಿಗೆ ಟಿಕೆಟ್ ಲಭಿಸಿದೆ.
ಆರ್ಎಸ್ಎಸ್ ಮೂಲದ ತೇಜಸ್ವಿ ಸೂರ್ಯನ ಪ್ರವೇಶದೊಂದಿಗೆ ಬೆಂಗಳೂರು ದಕ್ಷಿಣದ ಸಂಪೂರ್ಣ ಚಿತ್ರಣವೇ ಬದಲಾಗಿದೆ. ಪ್ರಸ್ತುತ ಕ್ಷೇತ್ರದಲ್ಲಿ ತೇಜಸ್ವಿ ಸೂರ್ಯ ಹಾಗೂ ಕಾಂಗ್ರೆಸ್ನ ಬಿ.ಕೆ.ಹರಿಪ್ರಸಾದ್ ನಡುವೆ ನೇರಾ ನೇರಾ ಫೈಟ್ ಎಂದೇ ಪರಿಗಣಿಸಲಾಗುತ್ತಿದೆ. ಅಂದಹಾಗೆ ಯಾರೀ ತೇಜಸ್ವಿ ಸೂರ್ಯ? ದಕ್ಷಿಣದಲ್ಲಿ ಯಾರ ಪರವಿದೆ ಗೆಲುವಿನ ಅಲೆ? ಸಾಮಾನ್ಯ ಜನ ಏನಂತಾರೆ? ಇಲ್ಲಿದೆ ಕಂಪ್ಲೀಟ್ ಡೀಟೇಲ್.
ಅಚ್ಚರಿಯ ಅಭ್ಯರ್ಥಿಯಾದ ಸೂರ್ಯ : ಮಾರ್ಚ್ 25ರ ಮಧ್ಯರಾತ್ರಿ ವರೆಗೆ ದಕ್ಷಿಣಕ್ಕೆ ಬಿಜೆಪಿ ಅಭ್ಯರ್ಥಿ ತೇಜಸ್ವಿನಿ ಅನಂತಕುಮಾರ್ ಎಂದೇ ಊಹಿಸಲಾಗಿತ್ತು. ಆದರೆ ಅಂದು ದೆಹಲಿಯಲ್ಲಿ ಬೆಳಗಿನ ಜಾವದ ವರೆಗೆ ನಡೆದ ಪಕ್ಷದ ರಾಷ್ಟ್ರೀಯ ನಾಯಕರ ಚರ್ಚೆ ಮಹತ್ತರವಾದ ಬೆಳವಣಿಗೆಗೆ ಸಾಕ್ಷಿಯಾಗಿತ್ತು. ಕೊನೆಯಲ್ಲಿ ಎಲ್ಲಾ ಲೆಕ್ಕಾಚಾರಗಳನ್ನು ಉಲ್ಟಾ ಹೊಡಿಸಿದ್ದ ನಾಯಕರು ಸಂಘಪರಿವಾರದ ಹಿನ್ನೆಲೆಯ ಉಗ್ರ ಹಿಂದುತ್ವ ಭಾಷಣಕಾರ ಎನ್ನಿಸಿಕೊಂಡಿದ್ದ, ವಕೀಲ ತೇಜಸ್ವಿ ಸೂರ್ಯನಿಗೆ ಟಿಕೆಟ್ ಫೈನಲ್ ಮಾಡಿದ್ದರು.
ಮತದಾರರಿಗಿರಲಿ ಸ್ವತಃ ಪಕ್ಷದ ನಾಯಕರು ಕಾರ್ಯಕರ್ತರಿಗೂ ಸಹ ಅಷ್ಟಾಗಿ ಪರಿಚಯವಿಲ್ಲದ ಸೂರ್ಯ ಓದಿದ್ದು ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ. ಪದವಿ ಶಿಕ್ಷಣ ಮುಗಿಸಿ ಬೆಂಗಳೂರು ಕಾನೂನು ಶಿಕ್ಷಣ ಸಂಸ್ಥೆಯಲ್ಲಿ ಕಾನೂನು ಪದವಿ ಪಡೆದ ಇವರು, ಪ್ರಸ್ತುತ ಹೈಕೋರ್ಟ್‌ನಲ್ಲಿ ವಕೀಲಿಕೆ ಮಾಡುತ್ತಿದ್ದಾರೆ. ಬಿಜೆಪಿ ಪಕ್ಷದ ಬಹುತೇಕ ಪ್ರಕರಣಗಳ ಪರವಾಗಿ ಹಾಜರಾಗುತ್ತಿದ್ದಾರೆ. ಬಿಜೆಪಿ ಯುವ ಮೋರ್ಚದ ಕಾರ್ಯದರ್ಶಿಯಾಗಿಯೂ ಜವಾಬ್ದಾರಿ ನಿರ್ವಹಿಸಿದ್ದಾರೆ.
“ಸಂಘದ ಹಿನ್ನೆಲೆಯಿಂದ ಬಂದಿರುವ ತೇಜಸ್ವಿಗೆ ಕ್ಷೇತ್ರದ ವಾಸ್ತವ ಸಮಸ್ಯೆಗಳ ಅರಿವಿಲ್ಲ. ಜನರ ಪರಿಚಯವಿಲ್ಲ. ಜನರಿಗೂ ತೇಜಸ್ವಿ ಸೂರ್ಯ ಚಿರಪರಿಚಿತನಲ್ಲ. ಹೀಗಾಗಿ ಕಳೆದ ಎರಡು ದಶಕಗಳಿಂದ ಬಿಜೆಪಿಯ ಭದ್ರ ಕೋಟೆಯಾಗಿರುವ ದಕ್ಷಿಣದಲ್ಲಿ ಮತ್ತೆ ಕಾಂಗ್ರೆಸ್ ಪಾರುಪತ್ಯ ಸಾಧಿಸಿದರೂ ಅಚ್ಚರಿ ಇಲ್ಲ” ಎನ್ನುತ್ತಾರೆ ಕ್ಷೇತ್ರದ ಮತದಾರರೊಬ್ಬರು. ಇವರ ಈ ಹೇಳಿಕೆಗೂ ಕಾರಣಗಳಿಲ್ಲದೆ ಏನಿಲ್ಲ.
ಬಿಜೆಪಿಯ ಮುಂದಿದೆ ದೊಡ್ಡ ಟಾಸ್ಕ್: ದಿವಂಗತ ಅನಂತಕುಮಾರ್ ಈ ಕ್ಷೇತ್ರವನ್ನು 6 ಬಾರಿ ಪ್ರತಿನಿಧಿಸಿದ್ದಾರೆ. ಕ್ಷೇತ್ರದಲ್ಲಿ ಅವರಿಗೆ ಒಳ್ಳೆಯ ಹೆಸರಿದೆ. ಕಾರಣ ಬೆಂಗಳೂರಿನ ಕೇಂದ್ರ ಹಾಗೂ ಉತ್ತರ ಕ್ಷೇತ್ರಗಳಿಗಿಂತ ಈ ಕ್ಷೇತ್ರದ ಜನ ಹೆಚ್ಚು ಸಂತುಷ್ಟಿಗಳು. ಈ ಕ್ಷೇತ್ರದಲ್ಲಿ ಕಸದ ಸಮಸ್ಯೆ ಬಿಟ್ಟರೆ ಹೇಳಿಕೊಳ್ಳುವಂತಹ ದೊಡ್ಡ ಸಮಸ್ಯೆ ಇಲ್ಲ. ಅಲ್ಲದೆ ಇಡೀ ಕ್ಷೇತ್ರದ ಮೇಲೆ ಅನುಭವಿ ಅನಂತಕುಮಾರ್ಗೆ ಹಿಡಿತವಿತ್ತು. ಇದೇ ಕಾರಣಕ್ಕೆ ಕ್ಷೇತ್ರದಲ್ಲಿ ಅವರನ್ನು ಸೋಲಿಸುವವರೆ ಇರಲಿಲ್ಲ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.
ಆದರೆ, ಹೊಸ ಅಭ್ಯರ್ಥಿ ತೇಜಸ್ವಿ ಸೂರ್ಯನ ವಿಚಾರದಲ್ಲಿ ಎಲ್ಲವೂ ಇದಕ್ಕೆ ತದ್ವಿರುದ್ಧ. ಆತನಿಗೆ ರಾಜಕೀಯ ಅನುಭವದ ಕೊರತೆ ಇದೆ. ಕ್ಷೇತ್ರದ ಸಮಸ್ಯೆಗಳು ಹಾಗೂ ಮತದಾರರು ಈ ಎರಡರ ಪರಿಚಯವೂ ಇಲ್ಲ. ಹೆಚ್ಚಾಗಿ, ಜನರಿಗೂ ಈ ಅಭ್ಯರ್ಥಿಯ ಕುರಿತ ಹೆಚ್ಚಿನ ಮಾಹಿತಿ ಇಲ್ಲ. ಅಲ್ಲದೆ ಕ್ಷೇತ್ರದ ಜನ ಈ ಬಾರಿ ಚುನಾವಣೆಯಲ್ಲಿ ತೇಜಸ್ವಿನಿ ಅನಂತಕುಮಾರ್ ಅವರಿಗೆ ತಮ್ಮ ಮತ ಎಂದು ಮಾನಸಿಕವಾಗಿ ಫಿಕ್ಸ್ ಆಗಿದ್ದರು. ಹೀಗಾಗಿ ಪ್ರಸ್ತುತ ಅಭ್ಯರ್ಥಿಯ ಜೊತೆಗೆ ಕ್ಷೇತ್ರದ ಪರಿಸ್ಥಿತಿಯೂ ಬದಲಾಗಿದೆ.
ಕ್ಷೇತ್ರದಲ್ಲಿ ದಶಕಗಳಿಂದ ಅನಂತಕುಮಾರ್ಗೆ ಅವರಿಗೆ ಮತ ಹಾಕುತ್ತಿದ್ದ ಮತದಾರ ತೇಜಸ್ವಿನಿಯವರಿಗೆ ಟಿಕೆಟ್ ನಿರಾಕರಿಸಿರುವ ಹಿನ್ನೆಲೆಯಲ್ಲಿ ಬಿಜೆಪಿ ವಿರುದ್ಧ ಮುನಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಇದಲ್ಲದೆ ಮಾಜಿ ಸಚಿವ ವಿ.ಸೋಮಣ್ಣ, ಮಾಜಿ ಮುಖ್ಯಮಂತ್ರಿ ಆರ್. ಅಶೋಕ್ ಸೇರಿದಂತೆ ಪಕ್ಷದೊಳಗೆ ಅನೇಕ ನಾಯಕರು ತೇಜಸ್ವಿ ಸೂರ್ಯನಿಗೆ ಟಿಕೆಟ್ ನೀಡಿರುವ ಕುರಿತು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದು ಮುಂದಿನ ದಿನಗಳಲ್ಲಿ ತೇಜಸ್ವಿ ಸೂರ್ಯ ಹಾಗೂ ಪಕ್ಷಕ್ಕೆ ದುಬಾರಿಯಾಗಿ ಪರಿಣಮಿಸಿದರೆ ಅಚ್ಚರಿ ಇಲ್ಲ.
ಲಾಭದ ನಿರೀಕ್ಷೆಯಲ್ಲಿ ಬಿ.ಕೆ. ಹರಿಪ್ರಸಾದ್ : ಕಾಂಗ್ರೆಸ್ ಹಿರಿಯ ನಾಯಕರಾದ ಬಿ.ಕೆ. ಹರಿಪ್ರಸಾದ್ ಪ್ರಸ್ತುತ ರಾಜ್ಯಸಭಾ ಅಭ್ಯರ್ಥಿ. ಅಲ್ಲದೆ ಅಖಿಲ ಭಾರತ ಕಾಂಗ್ರೆಸ್ ಕಮಿಟಿಯ ಪ್ರಧಾನ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸುತ್ತಿರುವ ಇವರಿಗೆ ಮುಂದಿನ ವರ್ಷ ಒರಿಸ್ಸಾ, ಜಾರ್ಖಂಡ್ ಹಾಗೂ ಛತ್ತೀಸ್ಘಡ ರಾಜ್ಯಗಳಿಗೆ ನಡೆಯಲಿರುವ ಚುನಾವಣಾ ಜವಾಬ್ದಾರಿಯನ್ನೂ ವಹಿಸಲಾಗಿದೆ.
ರಾಜಕೀಯವಾಗಿ ಸಾಕಷ್ಟು ಅನುಭವ ಹೊಂದಿರುವ ಬಿ.ಕೆ. ಹರಿಪ್ರಸಾದ್ 1999ರಲ್ಲಿ ಇದೇ ಕ್ಷೇತ್ರದಿಂದ ಅನಂತಕುಮಾರ್ ಎದುರು ಸ್ಪರ್ಧಿಸಿ ಕೇವಲ 50 ಸಾವಿರ ಮತಗಳ ಅಂತರದಿಂದ ಸೋಲನುಭವಿಸಿದ್ದರು. ಆದರೆ, ಕಳೆದ ಒಂದು ತಿಂಗಳ ಅವಧಿಯಲ್ಲಿ ಬಿಜೆಪಿಯಲ್ಲಿ ನಡೆದಿರುವ ಅಚ್ಚರಿಯ ಬೆಳವಣಿಗೆಯಿಂದಾಗಿ ಇದೀಗ ಮತ್ತೆ ಕ್ಷೇತ್ರಕ್ಕೆ ಹಿಂದುರುಗಿದ್ದಾರೆ. ಕ್ಷೇತ್ರದಲ್ಲಿ ತೇಜಸ್ವಿ ಸೂರ್ಯನಿಗಿಂತ ಇವರು ಹೆಚ್ಚು ಚಿರಪರಿಚಿತರು ಎಂಬುದೊಂದೆ ಸದ್ಯಕ್ಕೆ ಇವರ ಬೆನ್ನಿಗಿರುವ ಬಲವಾದ ಅಂಶ.
ಮತ ಲೆಕ್ಕಾಚಾರ: ಗೋವಿಂದರಾಜನಗರ, ವಿಜಯನಗರ, ಚಿಕ್‌ಪೇಟೆ, ಬಸವನಗುಡಿ, ಪದ್ಮನಾಭನಗರ, ಬಿ.ಟಿ.ಎಂ. ಲೇಔಟ್, ಜಯನಗರ ಹಾಗೂ ಬೊಮ್ಮನಹಳ್ಳಿ ಸೇರಿದಂತೆ ಒಟ್ಟು 8 ವಿಧಾನ ಸಭಾ ಕ್ಷೇತ್ರಗಳನ್ನು ಹೊಂದಿರುವ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ತಲಾ ನಾಲ್ಕು ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಹಾಗೂ ಬಿಜೆಪಿ ಕ್ಷೇತ್ರದ ಮಟ್ಟಿಗೆ ಸಮಬಲ ಸಾಧಿಸಿದೆ.
ಕ್ಷೇತ್ರದಲ್ಲಿ ಒಕ್ಕಲಿಗ, ಲಿಂಗಾಯತ ಮತಗಳೆ ನಿರ್ಣಾಯಕ. ಅಲ್ಲದೆ ಇದು ಬೆಂಗಳೂರಿನಲ್ಲೇ ಅತ್ಯಧಿಕ ಬ್ರಾಹ್ಮಣ ಮತದಾರರನ್ನು ಹೊಂದಿರುವ ಕ್ಷೇತ್ರವೂ ಹೌದು. ಇದೆ ಕಾರಣಕ್ಕೆ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ತೇಜಸ್ವಿ ಸೂರ್ಯನಿಗೆ ಟಿಕೆಟ್ ನೀಡಲಾಗಿದೆ ಎಂಬುದು ಮತ್ತೊಂದು ಲೆಕ್ಕಾಚಾರ. ಅಲ್ಲದೆ ಕಳೆದ ಎರಡು ದಶಕಗಳಿಂದ ಈ ಭಾಗದ ಒಕ್ಕಲಿಗ ಲಿಂಗಾಯತ ಮತ ಬಿಜೆಪಿ ಪರವಾಗಿಯೇ ಇದೆ.
ಆದರೆ, ಮೈತ್ರಿ ಪಕ್ಷಗಳ ದೆಸೆಯಿಂದ ಒಕ್ಕಲಿಗ ಲಿಂಗಾಯತ ಮತ ಬಿ.ಕೆ.ಹರಿಪ್ರಸಾದ್ ಪಾಲಾದರೆ ಅವರ ಗೆಲುವು ಸುಲಭವಾಗಲಿದೆ ಎಂದು ರಾಜಕೀಯ ತಜ್ಞರು ವಿಶ್ಲೇಷಿಸುತ್ತಿದ್ದಾರೆ.
ಒಟ್ಟಾರೆ ಬಿಜೆಪಿ ಪಾಲಿನ ಪ್ರತಿಷ್ಠೆಯ ಕ್ಷೇತ್ರ ಎಂದು ಹೆಸರುವಾಸಿಯಾಗಿರುವ ಬೆಂಗಳೂರು ದಕ್ಷಿಣದಲ್ಲಿ ದಶಕಗಳ ನಂತರ ಕಾಂಗ್ರೆಸ್ ಗೆಲ್ಲುವ ವಾತಾವರಣವನ್ನು ಸ್ವತಃ ಬಿಜೆಪಿಯೇ ನಿರ್ಮಿಸಿಕೊಟ್ಟಿದೆ. ಆದರೆ, ಬೆಂಗಳೂರಿನಲ್ಲೇ ಅತ್ಯಧಿಕ ಮೋದಿ ಅಲೆ ಇರುವುದು ಈ ಕ್ಷೇತ್ರದಲ್ಲೆ. ಹೀಗಾಗಿ ಈ ಬಾರಿಯೂ ಮೋದಿ ಅಲೆ ಸೂರ್ಯನನ್ನು ಉದಯಿಸಿದರೆ ಅಚ್ಚರಿಯಿಲ್ಲ.
Comments are closed.