ನಾಗಮಂಗಲ: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸುಮಲತಾ ಅಂಬರೀಷ್ ಪರವಾಗಿ ಮತ ಹಾಕುವಂತೆ ಸೂಚಿಸಿಲ್ಲ. ನಾನು ಸೂಚಿಸಿದ್ದೇನೆ ಎಂದು ಯಾರಾದರೂ ನನ್ನ ಹೆಸರು ಹೇಳಿಕೊಂಡು ಬಂದರೆ ಮುಖಕ್ಕೆ ಮಂಗಳಾರತಿ ಮಾಡಿ ಕಳುಹಿಸಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಹೇಳಿದರು.
ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರವಾಗಿ ನಡೆದ ಬೃಹತ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ನಾನೇಕೆ ಪಕ್ಷೇತರ ಅಭ್ಯರ್ಥಿ ಪರ ಮತ ಹಾಕಿ ಅಂತ ಕೇಳುತ್ತೇನೆ ಎಂದು ಪ್ರಶ್ನೆ ಮಾಡಿದ ಸಿದ್ದರಾಮಯ್ಯ, ಯಾವುದೇ ಅಪಪ್ರಚಾರ, ಸುಳ್ಳುಗಳಿಗೆ ಬೆಲೆ ಕೊಡಬೇಡಿ. ನನ್ನ ಬೆಂಬಲ ಯಾವತ್ತಿಗೂ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ. ಅವರನ್ನು ಗೆಲ್ಲಿಸುವುದೊಂದೇ ಗುರಿ ಎಂದು ಸಾರಿ ಹೇಳಿದರು.
ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್‌ಗೆ ಕೋಮುವಾದಿ ಬಿಜೆಪಿ ಬೆಂಬಲ ಘೋಷಿಸಿದೆ. ದೇಶದ ಹಿತದೃಷ್ಟಿ, ಪ್ರಜಾಪ್ರಭುತ್ವ ಉಳಿವು ಹಾಗೂ ಸಂವಿಧಾನದ ರಕ್ಷಣೆಗಾಗಿ ಕೋಮುವಾದಿ ಬಿಜೆಪಿ ಪಕ್ಷವನ್ನು ಅಧಿಕಾರದಿಂದ ದೂರವಿಡಬೇಕು. ಮೈತ್ರಿ ಅಭ್ಯರ್ಥಿ ನಿಖಿಲ್ ಅವರನ್ನು ಬೆಂಬಲಿಸಬೇಕು ಎಂದು ಎಐಸಿಸಿ ವರಿಷ್ಠರಾದಿಯಾಗಿ ಎಲ್ಲ ನಾಯಕರೂ ತೀರ್ಮಾನಿಸಿದ್ದಾರೆ. ಹೀಗಾಗಿ ನನ್ನ ನಿಷ್ಠೆ ಯಾವತ್ತಿದ್ದರೂ ಮೈತ್ರಿ ಅಭ್ಯರ್ಥಿ ನಿಖಿಲ್ ಗೆಲುವಿನ ಕಡೆಗೆ ಎಂದರು.
ಸುಮ ಪರೋಕ್ಷ ಬಿಜೆಪಿ ಅಭ್ಯರ್ಥಿಯೇ?
ಮಂಡ್ಯ ಕ್ಷೇತ್ರದಲ್ಲಿ ಉದ್ದೇಶಪೂರ್ವಕವಾಗಿಯೇ ಬಿಜೆಪಿ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಪಕ್ಷೇತರ ಅಭ್ಯರ್ಥಿ ಸುಮಲತಾಗೆ ಬೆಂಬಲ ಸೂಚಿಸಿದೆ. ಮೈಸೂರಿಗೆ ಮೋದಿ ಭೇಟಿ ನೀಡಿದ್ದ ವೇಳೆ ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಗೆ ಎಲ್ಲರೂ ಬೆಂಬಲ ಕೊಡಿ ಎಂದು ಹೇಳಿಕೆ ನೀಡಿದ್ದಾರೆ. ಇದರ ಅರ್ಥ ಸುಮಲತಾ ಪಕ್ಷೇತರ ಅಭ್ಯರ್ಥಿಯಾಗಿದ್ದರೂ ಸಹ ಒಂದು ರೀತಿಯಲ್ಲಿ ಬಿಜೆಪಿ ಅಭ್ಯರ್ಥಿ ಎಂದು ತಾವೆಲ್ಲರೂ ತಿಳಿಯಬೇಕು ಎಂದು ಹೇಳಿದರು.
ಕಾವೇರಿಗಾಗಿ ಹೋರಾಟಕ್ಕೆ ಬಂದಿದ್ರಾ?
ದೇವೇಗೌಡರು ಕಾವೇರಿ ನೀರಿಗಾಗಿ ಆಮರಣಾಂತ ಉಪವಾಸ ನಡೆಸಿದರು. ಕೇಂದ್ರ ಸರ್ಕಾರದಿಂದ ಭರವಸೆ ಬಂದ ಮೇಲೆ ನಾನೇ ಎಳನೀರು ಕುಡಿಸಿ ಉಪವಾಸವನ್ನು ಕೈಬಿಡಿಸಿದ್ದೆ. ಆ ಸಂದರ್ಭದಲ್ಲಿ ಈ ಪಕ್ಷೇತರ ಅಭ್ಯರ್ಥಿ ಹೋರಾಟಕ್ಕೆ ಬಂದಿದ್ದಾರಾ ಎಂದು ಸುಮಲತಾ ಅವರಿಗೆ ಟಾಂಗ್ ನೀಡಿದರು.
Comments are closed.