ಕರ್ನಾಟಕ

ಕುಮಾರಸ್ವಾಮಿಗೆ ಎಸಿಪಿಯಿಂದ ನೋಟಿಸ್‌ ಜಾರಿ

Pinterest LinkedIn Tumblr


ಬೆಂಗಳೂರು: ರಾಜ್ಯದ ವಿವಿಧೆಡೆ ನಡೆದ ಐಟಿ ದಾಳಿ ವಿರೋಧಿಸಿ ಮಾ.28ರಂದು ಆದಾಯ ತೆರಿಗೆ ಇಲಾಖೆ ಕಚೇರಿ ಮುಂಭಾಗ ನಡೆದ ಪ್ರತಿಭಟನೆ ಹಿನ್ನೆಲೆಯಲ್ಲಿ ಬಾಣಸವಾಡಿ ಉಪ ವಿಭಾಗದ ಸಹಾಯಕ ಪೊಲೀಸ್‌ ಆಯುಕ್ತರು (ಎಸಿಪಿ) ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸೇರಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಎಲ್ಲ ಮುಖಂಡರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ಜಾರಿ ಮಾಡಿದ್ದಾರೆ.
ಸಿಎಂ ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಸಂಪುಟದ ಕೆಲ ಸದಸ್ಯರು ಹಾಗೂ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಶಾಸಕರು ಹಾಗೂ ಇತರೆ ಮುಖಂಡರಿಗೆ ನೋಟಿಸ್‌ ಜಾರಿ ಮಾಡಿದ್ದು, ಏಳು ದಿನಗಳ ಒಳಗಾಗಿ ತನಿಖಾಧಿಕಾರಿಗಳ ಎದುರು ವಿಚಾರಣೆಗೆ ಹಾಜರಾಗಬೇಕು ಎಂದು ನೋಟಿಸ್‌ನಲ್ಲಿ ಉಲ್ಲೇಖೀಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಚುನಾವಣಾ ಆಯೋಗದ ಅನುಮತಿ ಪಡೆಯದೆ ಪ್ರತಿಭಟನೆ ನಡೆಸಿರುವ ಬಗ್ಗೆ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಡಿ.ಎನ್‌.ರಾಜಶೇಖರ್‌ ಮೂರ್ತಿ ಕಮರ್ಷಿಯಲ್‌ ಸ್ಟ್ರೀಟ್‌ ಪೊಲೀಸ್‌ ಠಾಣೆಯಲ್ಲಿ ಶಿವಾಜಿನಗರದ ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ ಬ್ಲಾಕ್‌ ಕಾರ್ಯದರ್ಶಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದರು. ಇದರ ಬೆನ್ನಲ್ಲೇ ಕರ್ನಾಟಕ ಮತ್ತು ಗೋವಾ ವಿಭಾಗ ಆದಾಯ ತೆರಿಗೆ ಇಲಾಖೆ ಪ್ರಧಾನ ಆಯುಕ್ತ ಬಾಲಕೃಷ್ಣನ್‌ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದು, ರಾಜ್ಯ ಪೊಲೀಸ್‌ ಮಹಾನಿರ್ದೇ ಶಕರಿಗೂ ಈ ಬಗ್ಗೆ ಕ್ರಮಕೈಗೊಳ್ಳುವಂತೆ ಸೂಚಿಸಿದ್ದರು.
ಈ ಸಂಬಂಧ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿರುವುದರಿಂದ ಬಾಣಸವಾಡಿ ಉಪ ವಿಭಾಗದ ಸಹಾಯಕ ಪೊಲೀಸ್‌ ಆಯುಕ್ತರ ನೇತೃತ್ವದಲ್ಲಿ ತನಿಖೆ ನಡೆಸಲು ಹಿರಿಯ ಅಧಿಕಾರಿಗಳು ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಈಗಾಗಲೇ ಕಮರ್ಷಿಯಲ್‌ ಸ್ಟ್ರೀಟ್‌ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಹೆಚ್ಚುವರಿ ಸೆಕ್ಷನ್‌ಗಳನ್ನು ಅಳವಡಿಸಿಕೊಂಡು ನೋಟಿಸ್‌ ಜಾರಿ ಮಾಡಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.
ವಿವಿಧೆಡೆ ಮುಂದುವರಿದ ಐಟಿ ದಾಳಿ
ಬೆಂಗಳೂರು: ರಾಜ್ಯದಲ್ಲಿ 17ನೇ ಲೋಕಸಭೆ ಚುನಾವಣಾ ಪ್ರಚಾರ ರಂಗೇರುತ್ತಿರುವ ಬೆನ್ನಲ್ಲೇ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತಮ್ಮ ದಾಳಿ ಮುಂದುವರಿಸಿದ್ದಾರೆ.
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ರಿಜ್ವಾನ್‌ ಅರ್ಷದ್‌ ಮತ್ತು ಅವರ ಆಪ್ತರು ಹಾಗೂ ಮಂಡ್ಯ ಉಸ್ತುವಾರಿ ಸಚಿವ ಸಿ.ಎಸ್‌. ಪುಟ್ಟರಾಜು ಅವರ ಪುತ್ರನಿಗೆ ಸೇರಿದ ಮೈಸೂರಿನ ಅಪಾ ರ್ಟ್‌ಮೆಂಟ್‌ ಮೇಲೆ ಗುರುವಾರ ಐಟಿ, ಚುನಾವಣಾಧಿಕಾರಿಗಳು ದಾಳಿ ನಡೆಸಿದ್ದಾರೆ.
ಮುಂಜಾನೆ 6 ಗಂಟೆಯಿಂದಲೇ ಸುಮಾರು 80ಕ್ಕೂ ಹೆಚ್ಚು ಅಧಿಕಾರಿಗಳು, ಡಿಕನ್ಸನ್‌ ರಸ್ತೆಯಲ್ಲಿರುವ ರಿಜ್ವಾನ್‌ ಅರ್ಷದ್‌ ಅವರ ಚುನಾವಣಾ ಪ್ರಚಾರದ ಕಚೇರಿ, ಅವರ ಆಪ್ತವಲಯದ ಉದ್ಯಮಿಗಳಾದ ಅಮಾನುಲ್ಲಾ ಖಾನ್‌, ಕಮಲ್‌ ಪಾಷಾ ಹಾಗೂ ನಯೀಜ್‌ ಖಾನ್‌ ಎಂಬುವರ ಮನೆ ಮತ್ತು ಕಚೇರಿಗಳು ಸೇರಿ ಸುಮಾರು 20ಕ್ಕೂ ಹೆಚ್ಚು ಕಡೆಗಳಲ್ಲಿ ದಾಳಿ ನಡೆಸಿ, ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಆದರೆ, ಈ ಕುರಿತು ಐಟಿ ಅಧಿಕಾರಿಗಳು ಅಧಿಕೃತ ಮಾಹಿತಿ ನೀಡಿಲ್ಲ.
ಮತ್ತೂಂದೆಡೆ ಮಂಡ್ಯ ಉಸ್ತುವಾರಿ ಸಚಿವ ಸಿ.ಎಸ್‌.ಪುಟ್ಟರಾಜು ಅವರ ಸಂಬಂಧಿಕರ ಮೇಲೆ ದಾಳಿ ಮುಂದುವರಿಸಿರುವ ಐಟಿ ಅಧಿಕಾರಿಗಳು ಗುರುವಾರ ಮುಂಜಾನೆ ಪುಟ್ಟರಾಜು ಪುತ್ರ ಶಿವರಾಜ್‌ ಅವರಿಗೆ ಸೇರಿದ ಮೈಸೂರಿನ ಅಪಾರ್ಟ್‌ಮೆಂಟ್‌ ಮೇಲೆ ದಾಳಿ ನಡೆಸಿದ್ದಾರೆ.
ಮೈಸೂರಿನ ಯಾದವಗಿರಿಯ ಸಂಕಲ್ಪ ಅಪಾರ್ಟ್‌ಮೆಂಟ್‌ ಮೇಲೆ ದಾಳಿ ಮಾಡಿ, ಮಧ್ಯಾಹ್ನದವರೆಗೆ ಶೋಧ ನಡೆಸಿದ್ದು,
ಏ.25ರಂದು ಮಧ್ಯಾಹ್ನ ಮೈಸೂರು ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ಸಚಿವ ಸಿ.ಎಸ್‌ .ಪುಟ್ಟರಾಜು ಮತ್ತು ಅವರ ಪುತ್ರನಿಗೆ ನೋಟಿಸ್‌ ಜಾರಿ ಮಾಡಿದ್ದಾರೆ ಎಂದು ಹೇಳಲಾಗಿದೆ.
ತೆರಿಗೆ ದಾಳಿ ನಡೆದಿರುವುದನ್ನು ಖಚಿತಪಡಿಸಿರುವ ಸಚಿವ ಸಿ.ಎಸ್‌.ಪುಟ್ಟರಾಜು ಅವರ ಪುತ್ರ ಶಿವರಾಜ್‌, ದಾಳಿ ವೇಳೆ ಮನೆಯಲ್ಲಿ ನಾವುಗಳು ಇರಲಿಲ್ಲ. ಅಡುಗೆಯವರು ಮಾತ್ರ ಇದ್ದರು. ನಾವು ಬರುವಷ್ಟರಲ್ಲಿ ಅಧಿಕಾರಿಗಳು ವಾಪಸ್‌ ಹೋಗಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ರಿಜ್ವಾನ್‌ ಅರ್ಷದ್‌ ಅವರ ಕಚೇರಿ ಹಾಗೂ ಸಂಬಂಧಿಕರ ಮನೆಗಳ ಮೇಲೆ ರಾಜಕೀಯ ಪ್ರೇರಿತ ಐಟಿ ದಾಳಿಯಾಗಿರುವುದು ಖಂಡ ನೀಯ. ನ್ಯಾಯಯುತವಾಗಿ ಚುನಾವಣೆ ಎದುರಿಸಲಾಗದ ಬಿಜೆಪಿ ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ.
● ಸಿದ್ದರಾಮಯ್ಯ, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ

Comments are closed.