ಲಕ್ನೋ: ರಾಯ್ಬರೇಲಿಯಿಂದ ಮರು ಆಯ್ಕೆ ಬಯಸಿರುವ 72 ವರ್ಷದ ಸೋನಿಯಾ ಗಾಂಧಿ ಅವರು ಪಕ್ಷದ ಕಚೇರಿಯಲ್ಲಿ ಹೋಮ, ಪೂಜೆ ನೆರವೇರಿಸಿದ ಬಳಿಕ ರೋಡ್ ಶೋ ನಡೆಸಿ ನಾಮಪತ್ರ ಸಲ್ಲಿಸಿದರು. ಈ ವೇಳೆ ಪುತ್ರ ರಾಹುಲ್ ಗಾಂಧಿ, ಪುತ್ರಿ ಪ್ರಿಯಾಂಕಾ ಗಾಂಧಿ, ಅಳಿಯ ರಾಬರ್ಟ್ ವಾದ್ರಾ, ಮೊಮ್ಮಕ್ಕಳಾದ ರೈಹಾನ್ ಹಾಗೂ ಮಿರಾಯ್ ಉಪಸ್ಥಿತರಿದ್ದರು.
ಸೋನಿಯಾ ಆಸ್ತಿ ಎಷ್ಟು?
ಕಾಂಗ್ರೆಸ್ ಭದ್ರಕೋಟೆ ಎಂದೇ ಬಿಂಬಿತವಾಗಿರುವ ರಾಯ್‌ಬರೇಲಿ ಕ್ಷೇತ್ರದಿಂದ ಸಂಸತ್ತು ಪ್ರವೇಶ ಬಯಸಿ ನಾಮಪತ್ರ ಸಲ್ಲಿಕೆ ಮಾಡಿರುವ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ತಮ್ಮ ಬಳಿ 11.82 ಕೋಟಿ ರು. ಮೌಲ್ಯದ ಆಸ್ತಿ ಇದೆ ಎಂದು ಘೋಷಿಸಿದ್ದಾರೆ. 2014ರ ಲೋಕಸಭಾ ಚುನಾವಣೆ ವೇಳೆ ತಮ್ಮ ಬ್ಯಾಂಕ್ ಖಾತೆಗಳಲ್ಲಿ 66 ಲಕ್ಷ ರು., 88 ಕೇಜಿ ಬೆಳ್ಳಿ, 1267.33 ಗ್ರಾಂ ಚಿನ್ನ ಸೇರಿ ಒಟ್ಟು 2.81 ಕೋಟಿ ರು. ಚರಾಸ್ತಿ ಒಳಗೊಂಡ 9.28 ಕೋಟಿ ರು. ಮೌಲ್ಯದ ಆಸ್ತಿ ಇದೆ ಎಂದು ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ತಿಳಿಸಿದ್ದರು.
ತಾವು 4.29 ಕೋಟಿ ರು. ಚರಾಸ್ತಿ ಹೊಂದಿದ್ದು, ಈ ಪೈಕಿ ಕಾಂಗ್ರೆಸ್ ಅಧ್ಯಕ್ಷ ಹಾಗೂ ತಮ್ಮ ಪುತ್ರನಾದ ರಾಹುಲ್ ಗಾಂಧಿ ಅವರಿಗೆ 5 ಲಕ್ಷ ರು. ಅನ್ನು ಸಾಲವಾಗಿ ನೀಡಿದ್ದೇನೆ. 16.5 ಲಕ್ಷ ರು. ಬ್ಯಾಂಕ್ ಠೇವಣಿ ಹಾಗೂ 60 ಸಾವಿರ ರು. ಕೈಯಲ್ಲಿದೆ ಎಂದು ಸೋನಿಯಾ ಅವರು ಘೋಷಿಸಿಕೊಂಡರು. ಅಲ್ಲದೆ, ತಮ್ಮ ವಿರುದ್ಧ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿದ ಕ್ರಿಮಿನಲ್ ಪ್ರಕರಣವೊಂದನ್ನು ದಾಖಲಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
Comments are closed.