ಬೆಂಗಳೂರು: ಸೇನೆಯ ವಿಚಾರದಲ್ಲಿ ನಾನು ನೀಡಿದ ಹೇಳಿಕೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೇ ತಪ್ಪು ಮಾಹಿತಿಗಳನ್ನೇ ನೆಚ್ಚಿಕೊಂಡಿರುವುದು ವಿಷಾದನೀಯ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ.
ಇಂದು ಕೊಪ್ಪಳದ ಗಂಗಾವತಿಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಎರಡು ಹೊತ್ತು ಊಟಕ್ಕೂ ಗತಿಯಿಲ್ಲದವರು ಭಾರತೀಯ ಸೇನೆ ಸೇರುತ್ತಿದ್ದಾರೆ ಎಂದು ಕರ್ನಾಟಕ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ತನ್ಮೂಲಕ ದೇಶದ ರಕ್ಷಣೆಗಾಗಿ ಮರಭೂಮಿಯಲ್ಲಿನ 50 ಡಿಗ್ರಿ ಸೆಂಟಿಗ್ರೇಡ್ ತಾಪಮಾನ ಸಹಿಸಿಕೊಂಡು ಕೆಲಸ ಮಾಡುವ, ಹಿಮಾಲಯದ ತಪ್ಪಲಿನಲ್ಲಿ ರಕ್ತವನ್ನು ಹೆಪ್ಪುಗಟ್ಟಿಸುವ ಚಳಿಯಲ್ಲೂ ಕೆಲಸ ಮಾಡುತ್ತಾ, ಎಂಥ ಬಲಿದಾನಕ್ಕೂ ಸಿದ್ಧವಾಗಿರುವ ಭಾರತೀಯ ಯೋಧರಿಗೆ ಅಪಮಾನ ಮಾಡಿದ್ದಾರೆ ಎಂದು ಹೇಳಿದ್ದರು.
ಸಮಾವೇಶ ಮುಗಿಸಿ ಪ್ರಧಾನಿ ನರೇಂದ್ರ ಮೋದಿ ನಿರ್ಗಮಿಸಿದ ಕೆಲ ಹೊತ್ತಿನಲ್ಲೇ ಸಿಎಂ ಕುಮಾರಸ್ವಾಮಿ ಅವರು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ವಿಡಿಯೋ ಪೋಸ್ಟ್ ಮಾಡುವ ಮೂಲಕ ಸ್ಪಷ್ಟನೆ ನೀಡಿದ್ದಾರೆ. ರಾಜ್ಯ ಬಿಜೆಪಿಯ ಕುತಂತ್ರಿ ಪೋಸ್ಟ್ಗೆ ನಾನು ಈಗಾಗಲೇ ಸ್ಪಷ್ಟನೆ ನೀಡಿದ್ದೇನೆ. ಆದರೂ ಪ್ರಧಾನಿ ಮೋದಿ ಅವರು ತಪ್ಪು ಮಾಹಿತಿಗಳನ್ನೇ ನೆಚ್ಚಿಕೊಂಡಿರುವುದು ವಿಷಾದನೀಯ. ಸೈನಿಕರು, ದೇಶಪ್ರೇಮದ ಹೆಸರಲ್ಲಿ ಲಾಭ ಮಾಡಿಕೊಳ್ಳುವ ಅವರ ನಡೆ ಖಂಡಿತಾ ಸರಿಯಲ್ಲ. ತಮ್ಮ ಸರ್ಕಾರದ ಹೇಳಿಕೊಳ್ಳುವ ಸಾಧನೆ ಏನೂ ಇಲ್ಲದ ಕಾರಣ ಇಂತಹ ಭಾವನಾತ್ಮಕ ವಿಷಯಗಳ ಮೊರೆ ಹೋಗಿದ್ದಾರೆ ಎಂದು ಟೀಕಿಸಿದ್ದಾರೆ.
Comments are closed.