ಮೈಸೂರು: ಮೈಸೂರು-ಕೊಡಗು ಕ್ಷೇತ್ರದ ಅಭ್ಯರ್ಥಿ ಪ್ರತಾಪ್ ಸಿಂಹ ಅವರಿಗೆ ಈಗ ಹೊಸ ತಲೆನೋವು ಆರಂಭವಾಗಿದೆ. ಮೈಸೂರು ಜಿಲ್ಲಾ ಬ್ರಾಹ್ಮಣ ಮಹಸಭಾ ಸದಸ್ಯರು ಪ್ರತಾಪ್ ಸಿಂಹ ವಿರುದ್ಧ ತಿರುಗಿ ಬಿದ್ದಿದ್ದಾರೆ. ಅಷ್ಟೇ ಅಲ್ಲ, ಮೈತ್ರಿ ಪಕ್ಷದ ಅಭ್ಯರ್ಥಿ ಸಿ.ಹೆಚ್.ವಿಜಯಶಂಕರ್ ಅವರ ಪರ ಮತ ಪ್ರಚಾರ ನಡೆಸುತ್ತೇವೆ ಎಂದಿದ್ದಾರೆ.
ಮಹಾಸಭಾದ ಅಧ್ಯಕ್ಷ ಬಿ.ಆರ್.ನಟರಾಜ್ ಜೋಯಿಸ್ಪ ಪತ್ರಿಕಾಗೋಷ್ಠಿ ಕರೆದು ಈ ವಿಚಾರ ಬಹಿರಂಗಪಡಿಸಿದ್ದಾರೆ. ಅಟಲ್ ಜೀ ಪ್ರಶಸ್ತಿ ಪ್ರಧಾನ ಸಮಾರಂಭ ಸೇರಿ ಸುಮಾರು 72 ಕಾರ್ಯಕ್ರಮಗಳಿಗೆ ಪ್ರತಾಪ್ ಸಿಂಹ ಅವರನ್ನು ಆಹ್ವಾನಿಸಲಾಗಿತ್ತಂತೆ. ಕ್ಷೇತ್ರದಲ್ಲೇ ಇದ್ದ ಹೊರತಾಗಿಯೂ ಅವರು ಕಾರ್ಯಕ್ರಮಕ್ಕೆ ಆಗಮಿಸಿರಲಿಲ್ಲ. ಇದು ಮಹಾಸಭಾ ಸದಸ್ಯರ ಅಸಮಾಧಾನಕ್ಕೆ ಮುಖ್ಯ ಕಾರಣ.
ಪ್ರತಾಪ್ ಸಿಂಹ ಏಕಾಏಕಿ ಬಿಜೆಪಿ ಸೇರಿ ಸಂಸದರಾಗಿದ್ದಾರೆ ಎಂದು ನಟರಾಜ್ ಕಿಡಿಕಾರಿದ್ದಾರೆ. “ಬಿಜೆಪಿ ನಾಯಕನಾಗಲು ನೀವೇನು ಪಕ್ಷದ ಕಚೇರಿ ಕಸ ಗುಡಿಸಿದ್ರಾ? ಅಥವಾ ಬಾವುಟ ಕಟ್ಟಿದ್ದೀರಾ? ಹಾಗೇನು ಇಲ್ಲ. ನೀವು ರಾತ್ರೋ ರಾತ್ರಿ ನಾಯಕರಾದವರು. ಪಕ್ಷ ಸಂಘಟನೆಗೆ ನಾವು ಸಾಕಷ್ಟು ಶ್ರಮಿಸಿದ್ದೇವೆ. ನಮ್ಮ ಸಮಾಜವನ್ನೇ ಕೀಳಾಗಿ ಕಾಣುವ ನಿಮಗೆ ಮತ ನೀಡುವುದಿಲ್ಲ,” ಎಂದು ನಟರಾಜ್ ಘೋಷಿಸಿದರು.
ಇದೇ ವೇಳೆ ಮೈತ್ರಿ ಅಭ್ಯರ್ಥಿ ಸಿಎಚ್ ವಿಜಯ್ಶಂಕರ್ ಅವರಿಗೆ ಮತ ನೀಡುವಂತೆ ನಟರಾಜ್ ಕೋರಿದರು. “ಕ್ಷೇತ್ರದಲ್ಲಿರುವ ನಮ್ಮ ಸಮಾಜದ ಮತಗಳು ವಿಜಯ್ಶಂಕರ್ಗೆ ಬೀಳುವಂತೆ ನೋಡಿಕೊಳ್ಳುತ್ತಿದ್ದೇವೆ. 22 ತಂಡಗಳನ್ನು ರಚಿಸಿಕೊಂಡು ಮನೆ ಮನೆಗೂ ತೆರಳಿ ಜಾಗೃತಿ ಮೂಡಿಸಲಾಗುತ್ತಿದೆ,” ಎಂದರು ಅವರು.
ಈ ಕ್ಷೇತ್ರದಲ್ಲಿ ಬ್ರಾಹ್ಮಣ ಸಮುದಾಯದ ಸುಮಾರು 2.45 ಲಕ್ಷ ಮತದಾರರು ಇದ್ದಾರೆ ಎಂದು ಅಂದಾಜಿಸಲಾಗಿದೆ. ಈಗ ಬ್ರಾಹ್ಮಣ ಸಮುದಾಯದವರು ತಿರುಗಿ ಬಿದ್ದಿರುವುದು ಪ್ರತಾಪ್ ಸಿಂಹಗೆ ಹಿನ್ನಡೆ ಉಂಟಾಗುವ ಸಾಧ್ಯತೆ ಇದೆ.
Comments are closed.