ಕರ್ನಾಟಕ

ಸುಮಲತಾ ಜಯಿಸಲು ಕುತಂತ್ರ: ಕುಮಾರಸ್ವಾಮಿ

Pinterest LinkedIn Tumblr


ಮಂಡ್ಯ: ಮತದಾನಕ್ಕೆ ಒಂದೆರಡು ದಿನ ಬಾಕಿ ಇರುವಾಗ ಸುಮಲತಾ ಅವರು ಪ್ರಚಾರ ಸಭೆಯಲ್ಲಿ ಅವರೇ ಕಲ್ಲೆಸೆದು ತಲೆಗೆ ಪೆಟ್ಟು ಮಾಡಿಕೊಂಡು ನಾಟಕ ಮಾಡಲು ಯೋಜನೆ ರೂಪಿಸಿದ್ದಾರೆ. ಆದರೆ ಪಕ್ಷೇತರ ಅಭ್ಯರ್ಥಿ ರೀತಿ ತಾವು ಯಾವುದೇ ಕುತಂತ್ರ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದ್ದಾರೆ.

ಇಂದು ಮದ್ದೂರು ಬಳಿಯ ಗೆಜ್ಜಲಗೆರೆ ಬಳಿ ರೋಡ್ ಶೋ ವೇಳೆ ಮಾತನಾಡಿದ ಅವರು, ಚುನಾವಣೆ ಗೆಲ್ಲಲು ಸುಮಲತಾ ಹೊಸ ಪ್ಲಾನ್ ಮಾಡಿಕೊಂಡಿದ್ದಾರೆ. ಪ್ರಚಾರ ಸಭೆಯಲ್ಲಿ ಅವರೇ ಕಲ್ಲೆಸೆದುಕೊಂಡು ಜೆಡಿಎಸ್‌ ವಿರುದ್ದ ಗೂಬೆ ಕೂರಿಸಲು ಯೋಜನೆ ರೂಪಿಸಿದ್ದಾರೆ. ಆ ಮೂಲಕ ಅನುಕಂಪದ ಮತಗಳನ್ನು ಪಡೆಯುವ ಹುನ್ನಾರ ನಡೆಸಿದ್ದಾರೆ. ಆದರೆ ನಾವು ಅಂತಹ ಕುತಂತ್ರ ಮಾಡುವುದಿಲ್ಲ ಎಂದರು.

ಮೈತ್ರಿ ಅಭ್ಯರ್ಥಿ ನಿಖಿಲ್​ ಸೋಲಿಸಲು ಎಲ್ಲಾ ಪಕ್ಷಗಳು ಒಂದಾಗಿವೆ. ತಮಗೆ ಕುತಂತ್ರ ರಾಜಕಾರಣ ಮಾಡುವ ಅಗತ್ಯವಿಲ್ಲ. ಪಕ್ಷೇತರ ಅಭ್ಯರ್ಥಿ ಇನ್ನೊಂದು ಮುಖ ನೋಡಿಲ್ಲ ಅಂತಾರೆ. ಅವರು ಬಂದಾಗ ಇನ್ನೊಂದು ಮುಖ ತೋರಿಸಿ ಎಂದು ಕೇಳಿ. ಅವರ ಬಗ್ಗೆ ನಮಗೆಲ್ಲ ಗೊತ್ತಿದೆ, ಈಗ ಆ ಚರ್ಚೆ ಬೇಡ ಎಂದು ಅವರು ಹೇಳಿದರು.

ಮಂಡ್ಯ ಬಜೆಟ್ ಎಂದ ಬಿಜೆಪಿ ನಾಯಕರ ಜೊತೆ ಸೇರಿ ಚುನಾವಣೆಯಲ್ಲಿ ಮತ ಕೇಳಲು ಬಂದಿದ್ದಾರೆ. ಜಿಲ್ಲೆಯ 200 ರೈತರು ಆತ್ಮಹತ್ಯೆ ಮಾಡಿಕೊಂಡಾಗ ನಿಮ್ಮ ಬೆಂಬಲಕ್ಕೆ ಯಾರು ಬಂದರು ಎಂದು ಯೋಚಿಸಿ ತೀರ್ಮಾನಿಸಿ. ಈ ನಿಮ್ಮ ಕುಮಾರಣ್ಣ ಬೇಕೋ ಅಥವಾ ಪಕ್ಷೇತರ ಅಭ್ಯರ್ಥಿ ಬೇಕೋ ಎಂಬುದನ್ನು ವಿವೇಚನೆಯಿಂದ ನಿರ್ಧರಿಸಿ ಎಂದರು.

ಮಂಡ್ಯ ಜಿಲ್ಲೆಯ ಏಳಕ್ಕೂ ಏಳು ವಿಧಾನ ಸಭಾ ಸ್ಥಾನಗಳಲ್ಲಿ ಜೆಡಿಎಸ್ ಶಾಸಕರನ್ನು ಗೆಲ್ಲಿಸಿದ್ದೀರಿ. ಅದಕ್ಕಾಗಿ ಶಾಸಕರ ಒತ್ತಾಯದ ಮೇರೆಗೆ ಜಿಲ್ಲೆಯ ಅಭಿವೃದ್ದಿ ಕಾರ್ಯಗಳಿಗೆ 9 ಸಾವಿರ ಕೋಟಿ ಹಣ ಬಿಡುಗಡೆ ಮಾಡಿದ್ದೇನೆ. ಕೆಲವರು ನಿಖಿಲ್ ಅಭ್ಯರ್ಥಿ ಆಗಲಿದ್ದಾನೆ ಎಂಬ ಕಾರಣಕ್ಕೆ ಅಭಿವೃದ್ಧಿಗೆ ಹಣ ನೀಡಿದ್ದಾರೆಂದು ಆರೋಪಿಸಿದ್ದಾರೆ. ಅದೆಲ್ಲಾ ಸುಳ್ಳು, ಜಿಲ್ಲೆಯ ಜನತೆಯ ಋಣ ತೀರಿಸಿಲು ಹಣ ಬಿಡುಗಡೆ ಮಾಡಲಾಗಿದೆ ಎಂದರು.

ಮೈಷುಗರ್ ಕಾರ್ಖಾನೆ ಉಳಿಸಲು 450 ಕೋಟಿ ವೆಚ್ಚದಲ್ಲಿ ಹೊಸ ಕಾರ್ಖಾನೆ ನಿರ್ಮಿಸಲು ಪಣ ತೊಟ್ಟಿದ್ದೇನೆ. ಇಷ್ಟಾದರೂ ಜಿಲ್ಲೆಯಲ್ಲಿ ನಿಖಿಲ್ ಸೋಲಿಸಲು ಎಲ್ಲಾ ಪಕ್ಷಗಳು ಒಂದಾಗಿ ನನ್ನನ್ನು ಅತಂತ್ರ ಮಾಡಲು ಹೊರಟಿದ್ದಾರೆ. ರಾಮನಗರ ಜಿಲ್ಲೆ ತಮಗೆ ರಾಜಕೀಯ ಜನ್ಮ ಕೊಟ್ಟಿದೆ. ಮಂಡ್ಯ ಜಿಲ್ಲೆ ರಾಜಕೀಯ ಶಕ್ತಿಯನ್ನು ಕೊಟ್ಟಿದೆ. ಪಕ್ಷೇತರ ಅಭ್ಯರ್ಥಿ ಕುಟುಂಬದವರ ಮನೆ ಕೆಲಸದವರಿಗೆ ಆಮಿಷ ಒಡ್ಡಿದ್ದಾರೆ ಎಂಬ ಮಾಹಿತಿ ಇದೆ. ವಿದೇಶಕ್ಕೆ ಕಳುಹಿಸುತ್ತೇವೆ ಎಂದು ನಾವು ಹೇಳಿದ್ದೇವೆಂತೆ. ವಿದೇಶಕ್ಕೆ ಹೋಗುವವರು ನಾವಲ್ಲ ಎಂದು ಸುಮಲತಾ ಅಂಬರೀಶ್ ವಿರುದ್ಧ ವಾಗ್ದಾಳಿ ನಡೆಸಿದರು.

ಇದೇ ವೇಳೆ ಮಾಜಿ ವಿಧಾನ ಪರಿಷತ್ ಸದಸ್ಯ ಸಂದೇಶ್​ ನಾಗರಾಜ್​ ವಿರುದ್ಧ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ ಅವರು, ಸಂದೇಶ್ ನಾಗರಾಜ್ ಅವರ ಕೈಯಲ್ಲಿ ‌ಒಂದು ಚುನಾವಣೆ ಗೆಲ್ಲುವುದಕ್ಕೆ ಆಗುತ್ತಿರಲಿಲ್ಲ. ತಾವೇ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿದೆ. ಈಗ ತಮ್ಮ ವಿರುದ್ದವೇ ಆತ ಹೋಟೆಲ್ ನಲ್ಲಿ ಕುಳಿತು ಚರ್ಚೆ ಮಾಡುತ್ತಾನೆ ಎಂದು ಏಕವಚನದಲ್ಲೇ ಗುಡುಗಿದರು.

ಪ್ರಚಾರಕ್ಕೂ ಮುನ್ನ ಮಂಡ್ಯದ ಖಾಸಗಿ ಹೋಟೆಲ್ ನಲ್ಲಿ ಸ್ಥಳೀಯ ಮುಖಂಡರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಪರ ನಿಲ್ಲಿ. ನಿಮ್ಮ ಸಮಸ್ಯೆ ಬಗೆ ಹರಿಸುವುದಕ್ಕೆ ತಾವು ಸಿದ್ದರಾಗಿದ್ದೇವೆ. ಅಧಿಕಾರ ಇರಲಿ, ಇಲ್ಲದಿರಲಿ ತಮ್ಮ ಏಳಿಗೆಗಾಗಿ ಶ್ರಮಿಸುತ್ತೇನೆ. ಚುನಾವಣೆ ಸಂದರ್ಭದಲ್ಲಿ ಎಲ್ಲರೊಂದಿಗೆ ಸುದೀರ್ಘವಾಗಿ ಮಾತನಾಡಲು ಸಾಧ್ಯವಾಗುವುದಿಲ್ಲ. ನೀತಿ ಸಂಹಿತೆ ಜಾರಿಯಲ್ಲಿದೆ. ಚುನಾವಣೆ ಮುಗಿದ ಬಳಿಕ ನಿಮ್ಮ ಸಮಸ್ಯೆ ಹೇಳಿದರೆ ಬಗೆ ಹರಿಸಲಾಗುವುದು ಎಂದು ಜನರಿಗೆ ಅವರು ಭರವಸೆ ನೀಡಿದರು.

ಗೆಜ್ಜಲಗೆರೆ ಗ್ರಾಮದಲ್ಲಿ ಕುಮಾರಸ್ವಾಮಿ ಅವರಿಗೆ ಜೆಡಿಎಸ್ ಪಕ್ಷದ ಚಿಹ್ನೆ ಹೋಲುವ ಹಸಿರು, ಬಿಳಿ ಬಣ್ಣದ ಹೂವುಗಳಿಂದ ಅಲಂಕೃತವಾದ ಬೃಹತ್ ಹಾರ ಹಾಕಿ ಗೌರವಿಸಿದರು.

ಮುಖ್ಯಮಂತ್ರಿ ಆರೋಪಕ್ಕೆ ಸುಮಲತಾ ಅಂಬರೀಶ್ ತಿರುಗೇಟು
ಗೆಜ್ಜಲಗೆರೆಯಲ್ಲಿ ಸುಮಲತಾ ಅಂಬರೀಶ್ ಬಗ್ಗೆ ಕುಮಾರಸ್ವಾಮಿ ನೀಡಿದ ಕುತಂತ್ರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಸುಮಲತಾ ಅವರು , ತಮಗೆ ನಾಟಕ ಮಾಡಿ ಏನೂ ಆಗಬೇಕಾಗಿಲ್ಲ. ಏ.16 ರಂದು ಜೆಡಿಎಸ್ ನಾಯಕರೇ ಹಲ್ಲೆ ಮಾಡಲು ಯೋಜನೆ ರೂಪಿಸಿರಬಹುದು. ಏಕೆಂದರೆ ಅವರೇ ಡೇಟ್​, ಟೈಮ್​ ಎಲ್ಲವನ್ನು ಹೇಳಿದ್ದಾರೆ. ಗುಪ್ತಚರ ಇಲಾಖೆ, ಪೊಲೀಸ್ ಇಲಾಖೆ ಅವರ ಕೈಯಲ್ಲಿದೆ ಎಂದು ತಿರುಗೇಟು ನೀಡಿದ್ದಾರೆ.

ಮಾಧ್ಯಮದ ವರದಿಗಾರರ ಮೇಲ್ಲೆ ಹಲ್ಲೆ ನಡೆದರೆ ತಾವು ಜವಾಬ್ದಾರರಲ್ಲ ಎಂದು ಹೇಳುವ ಮೂಲಕ ಹಲ್ಲೆ ನಡೆಸಿ ಎಂಬ ಸಂದೇಶವನ್ನು ನೀಡಿದ್ದಾರೆ. ಆ ಮೂಲಕ ಮಾಧ್ಯಮಗಳಿಗೂ ಬೆದರಿಕೆ ಒಡ್ಡುತ್ತಿದ್ದಾರೆ. ಈ ರೀತಿ ಮುಖ್ಯಮಂತ್ರಿ ಅವರೇ ಪ್ರಚೋದನೆ ನೀಡಿದರೆ ಸಾಮಾನ್ಯರಾದ ನಮ್ಮ ಗತಿಯೇನು? ಇದು ಪ್ರಜಾಪ್ರಭುತ್ವ ರಾಜ್ಯವೇ ಎಂಬ ಅನುಮಾನ ಮೂಡುತ್ತಿದೆ ಎಂದರು.

ಮತ್ತೊಂದೆಡೆ ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೆ.ಆರ್.ನಗರ ಪಟ್ಟಣದಲ್ಲಿ ಪ್ರಚಾರ ನಡೆಸಿದರು. ನಗರದ ವಿವಿಧ ಬಡಾವಣೆಗಳಲ್ಲಿ ರೋಡ್ ಶೋ ಮೂಲಕ ಮತಯಾಚಿಸಿದರು.

ಈ ವೇಳೆ ಪ್ರಚಾರ ಸಭೆಯಲ್ಲಿ ಮಾತನಾಡಿದ ನಟ ದರ್ಶನ್, ಸುಮಲತಾ ಅಂಬರೀಶ್ ಅವರ ಚಿಹ್ನೆ ಕಹಳೆ ಊದುವ ವ್ಯಕ್ತಿ. ಕ್ರಮ ಸಂಖ್ಯೆ 20. ಸುಮಲತಾ ಹೆಸರಿನಲ್ಲಿ ಸಾಕಷ್ಟು ಜನ ಅಭ್ಯರ್ಥಿಗಳಿದ್ದು ಗೊಂದಲ ಮೂಡಿಸುವ ಸಾಧ್ಯತೆ ಇದೆ. ಎರಡನೇ ಇವಿಎಂ ಮಿಷನ್ ನಲ್ಲಿ ಕ್ರಮ ಸಂಖ್ಯೆ 20ನ್ನು ಗಮನಿಸಿ ಮತ ಕೊಡಿ ನಿಮ್ಮ ಸೇವೆ ಮಾಡಲು ಸುಮಲತಾಗೆ ಅವಕಾಶ ಕೊಡಿ ಎಂದು ಮತದಾರರಲ್ಲಿ ಮನವಿ ಮಾಡಿದರು.

Comments are closed.